ನಾಗ್ಪುರ/ಥಾಣೆ(ಮಹಾರಾಷ್ಟ್ರ): ನಾಗ್ಪುರ ಮತ್ತು ಥಾಣೆಯಲ್ಲಿ ಬೆಂಕಿ ಅವಘಡ ಸಂಭವಿಸಿದ್ದು, ಇಬ್ಬರು ಮಕ್ಕಳು ಸೇರಿ ನಾಲ್ಕು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.
ನಾಗ್ಪುರದ ಗಿಟ್ಟಿಖಾಡನ್ ಪೊಲೀಸ್ ಠಾಣಾ ವ್ಯಾಪ್ತಿಯ ಸೆಮಿನರಿ ಹಿಲ್ ಪ್ರದೇಶದಲ್ಲಿ ಕಳೆದ ರಾತ್ರಿ 10 ಗಂಟೆ ಸುಮಾರಿಗೆ ಮನೆಯೊಂದರಲ್ಲಿ ಬೆಂಕಿ ಕಾಣಿಸಿಕೊಂಡಿತು. ಈ ಘಟನೆಯಲ್ಲಿ ಇಬ್ಬರು ಮಕ್ಕಳು ಸಾವನ್ನಪ್ಪಿದ್ದಾರೆ. ದೇವಾಂಶ್ ಮತ್ತು ಪ್ರಭಾಸ್ ಉಯಿಕೆ ಮೃತರೆಂದು ಗುರುತಿಸಲಾಗಿದೆ. ಅವಘಡದಲ್ಲಿ ಓರ್ವ ಹುಡುಗಿ ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ಮನೆಯಲ್ಲಿದ್ದ ಶ್ವಾನ ಸಾವನ್ನಪ್ಪಿದೆ.
ವಿಪರೀತ ಚಳಿಯಿಂದ ಪಾರಾಗಲು ಮಕ್ಕಳು ಮನೆಯಲ್ಲಿ ಬೆಂಕಿ ಹಚ್ಚಿದ್ದಾರೆ. ಈ ಬೆಂಕಿ ಮನೆ ತುಂಬೆಲ್ಲ ಹಬ್ಬಿದೆ ಎಂದು ಹೇಳಲಾಗುತ್ತಿದೆ. ಬೆಂಕಿ ಹೊತ್ತಿಕೊಂಡಾಗ ದೇವಾಂಶ್, ಪ್ರಭಾಸ್ ಮತ್ತು ಅವರ ಸಹೋದರಿ ಮನೆಯಲ್ಲಿದ್ದರು. ಮಕ್ಕಳ ಪೋಷಕರು ಕೆಲಸದ ನಿಮಿತ್ತ ಹೊರಹೋಗಿದ್ದರು. ಬೆಂಕಿ ಹೊತ್ತಿಕೊಂಡಾಗ ಮಕ್ಕಳು ಮನೆಯಲ್ಲಿ ಸಿಲುಕಿದ್ದು, ಹೊರಬರಲು ಮಾಡಿದ ಪ್ರಯತ್ನ ವಿಫಲವಾಗಿದೆ.
ದೇವಾಂಶ್ ಮತ್ತು ಪ್ರಭಾಸ್ ಅವರ ಸಹೋದರಿ ಮನೆಯಿಂದ ಹೊರಗೆ ಓಡಿ ಬಂದಿದ್ದರು. ಬಳಿಕ ಆಕೆ ಕಿರುಚಲು ಆರಂಭಿಸಿದ್ದಾಗ ಸ್ಥಳೀಯರು ಸಹಾಯಕ್ಕೆ ದೌಡಾಯಿಸಿದ್ದರು. ಆದರೆ ಅಷ್ಟೊತ್ತಿಗೆ ಇಬ್ಬರೂ ಸಾವನ್ನಪ್ಪಿದ್ದರು. ಬೆಂಕಿ ಹೊತ್ತಿಕೊಂಡಾಗ ಮನೆಯಲ್ಲಿ ಎರಡು ಗ್ಯಾಸ್ ಸಿಲಿಂಡರ್‌ಗಳಿದ್ದವು. ಆದರೆ ಅಗ್ನಿಶಾಮಕ ದಳದ ಸಿಬ್ಬಂದಿ ಅವುಗಳನ್ನು ತೆರವುಗೊಳಿಸಿ ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ. ನಾಗ್ಪುರದಲ್ಲಿ ಚಳಿ ಹೆಚ್ಚಾಗುತ್ತಿದ್ದಂತೆ ಬೆಂಕಿ ಅನಾಹುತದಂಥ ಘಟನೆಗಳು ಹೆಚ್ಚಾಗುತ್ತಿವೆ. ನಾಗರಿಕರು ಎಚ್ಚರಿಕೆ ವಹಿಸುವ ಅಗತ್ಯವಿದೆ ಎಂದು ಅಗ್ನಿಶಾಮಕ ಅಧಿಕಾರಿಗಳು ತಿಳಿಸಿದ್ದಾರೆ.
ಕಂಟೈನರ್‌ಗೆ ಬೆಂಕಿ, ಓರ್ವ ಸಾವು: ಮುಂಬೈಗೆ ಹೊಂದಿಕೊಂಡಿರುವ ಥಾಣೆಯ ಘೋಡ್‌ಬಂದರ್ ರಸ್ತೆಯಲ್ಲಿ ರಸ್ತೆ ಅಪಘಾತ ಸಂಭವಿಸಿದೆ. ಇಂದು ಮುಂಜಾನೆ ಕಂಟೈನರ್ವೊಂದು ನಿಯಂತ್ರಣ ತಪ್ಪಿ ಮಗುಚಿ ಬಿದ್ದು ಭಾರಿ ಬೆಂಕಿ ಕಾಣಿಸಿಕೊಂಡಿತು. ಇದರಿಂದ ಒಬ್ಬ ವ್ಯಕ್ತಿ ಮೃತಪಟ್ಟಿದ್ದಾನೆ. ಸುದ್ದಿ ತಿಳಿದು ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಮತ್ತು ಅಗ್ನಿ ಶಾಮಕ ದಳದ ಬೆಂಕಿ ನಂದಿಸಿದರು. ಮೃತದೇಹವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಆಸ್ಪತ್ರೆಗೆ ರವಾನಿಸಲಾಗಿದೆ.
ಸಂಚಾರ ಪೊಲೀಸರು ಹೈಡ್ರಾ ಸಹಾಯದಿಂದ ಅಪಘಾತಕ್ಕೀಡಾದ ಕಂಟೈನರ್ ಹೊರತೆಗೆದರು. ಸುಮಾರು 3 ಗಂಟೆಗಳ ಪ್ರಯತ್ನದ ಬಳಿಕ ಈ ಮಾರ್ಗವನ್ನು ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ. ಕಂಟೈನರ್ ಬೆಂಕಿಗಾಹುತಿಯಾದ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ.
ಕೆಮಿಕಲ್ ಕಂಪನಿಯಲ್ಲಿ ಬೆಂಕಿ, ಓರ್ವ ಸಾವು: ಥಾಣೆ ಜಿಲ್ಲೆಯ ಬದ್ಲಾಪುರ್ ಪಟ್ಟಣದ ಖಾರ್ವಾಯಿ ಎಂಐಡಿಸಿಯಲ್ಲಿರುವ ಕೆಮಿಕಲ್ ಕಂಪನಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ನಾಲ್ಕೈದು ದೊಡ್ಡ ಪ್ರಮಾಣದ ಸ್ಫೋಟ ಸಂಭವಿಸಿವೆ. ಹಲವು ಕಾರ್ಮಿಕರು ಗಾಯಗೊಂಡಿದ್ದು, ಓರ್ವ ವ್ಯಕ್ತಿ ಸಾವನ್ನಪ್ಪಿದ್ದಾರೆ ಎಂದು ಅಗ್ನಿಶಾಮಕ ಅಧಿಕಾರಿಗಳು ತಿಳಿಸಿದ್ದಾರೆ.
ನಿನ್ನೆ ಮುಂಜಾನೆ 4:30ರ ಸುಮಾರಿಗೆ ಬದ್ಲಾಪುರ ನಗರದ ಖಾರ್ವಾಯಿ ಎಂಐಡಿಸಿಯಲ್ಲಿ ರಾಸಾಯನಿಕ ಕಂಪನಿಯೊಂದರಲ್ಲಿ ಸ್ಫೋಟ ಸಂಭವಿಸಿದೆ. ಸ್ಫೋಟದ ಶಬ್ದ 4ರಿಂದ 5 ಕಿಲೋಮೀಟರ್ ದೂರ ಕೇಳಿ ಬಂದಿದೆ ಎನ್ನಲಾಗಿದೆ. ಐವರು ಕಾರ್ಮಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಕಂಪನಿಯ ಹೊರಗೆ ಮೂರು ಟೆಂಪೋಗಳು ನಿಂತಿದ್ದವು. ಈ ಟೆಂಪೋದಲ್ಲಿದ್ದ ರಾಸಾಯನಿಕಕ್ಕೆ ಮೊದಲು ಬೆಂಕಿ ಹೊತ್ತಿಕೊಂಡಿದೆ. ಬಳಿಕ ಕಂಪನಿಯೊಳಗೆ ಬೆಂಕಿ ವ್ಯಾಪಿಸಿದೆ ಎನ್ನುತ್ತಾರೆ ಕಂಪನಿಯ ಕಾರ್ಮಿಕರು. 8ರಿಂದ 9 ಅಗ್ನಿಶಾಮಕ ವಾಹನಗಳು ತಕ್ಷಣ ಸ್ಥಳಕ್ಕೆ ದೌಡಾಯಿಸಿದ್ದವು. ಸುಮಾರು ಎರಡೂವರೆ ಗಂಟೆಗಳ ಬಳಿಕ ಬೆಂಕಿ ಹತೋಟಿಗೆ ಬಂದಿದ್ದು, ಇದೀಗ ಸ್ಥಳದಲ್ಲಿ ಕೂಲಿಂಗ್ ಕಾರ್ಯ ನಡೆಯುತ್ತಿದೆ ಎಂದು ಅಗ್ನಿಶಾಮಕ ದಳದ ಅಧಿಕಾರಿ ಹೇಳಿದ್ದಾರೆ.
ಇದನ್ನೂ ಓದಿ:ದೆಹಲಿಯಲ್ಲಿ ಭಾರಿ ಅಗ್ನಿ ಅವಘಡ: 6 ಮಂದಿ ಸಜೀವ ದಹನ