ಮಹಬೂಬಾಬಾದ್(ತೆಲಂಗಾಣ): ತೆಲುಗು ರಾಜ್ಯಗಳಲ್ಲಿ ಸಂಚಲನ ಮೂಡಿಸಿದ್ದ ಮಹಬೂಬಾಬಾದ್‌ನ ಬಾಲಕನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ಮಹತ್ವದ ತೀರ್ಪು ನೀಡಿದೆ. ದೀಕ್ಷಿತ್ ರೆಡ್ಡಿಯನ್ನು ಬರ್ಬರವಾಗಿ ಕೊಲೆ ಮಾಡಿದ ಕಿರಾತಕನಿಗೆ ಮಹಬೂಬಾಬಾದ್ ಜಿಲ್ಲಾ ನ್ಯಾಯಾಲಯ ಮರಣದಂಡನೆ ತೀರ್ಪು ನೀಡಿದೆ.
ಏನಿದು ಪ್ರಕರಣ:ಮಹಬೂಬಾಬಾದ್‌ನ ಕೃಷ್ಣಾ ಕಾಲೋನಿಯ ರಂಜಿತ್ ರೆಡ್ಡಿ-ವಸಂತ ಅವರ ಹಿರಿಯ ಪುತ್ರ ದೀಕ್ಷಿತ್ ರೆಡ್ಡಿಯನ್ನು ಅಕ್ಟೋಬರ್ 2020 ರಲ್ಲಿ ಅಪಹರಿಸಲಾಗಿತ್ತು. ಆ ಸಮಯದಲ್ಲಿ ದೀಕ್ಷಿತ್ ಕಿಡ್ನಾಪ್ ಪ್ರಕರಣವು ಸಂಚಲನ ಸೃಷ್ಟಿಸಿತ್ತು. ಆ ವೇಳೆಗೆ ಪೊಲೀಸರು ಅತ್ಯಂತ ಜಾಣ್ಮೆಯಿಂದ ಈ ಪ್ರಕರಣವನ್ನು ಭೇದಿಸಿದ್ದರು. ಕಿಡ್ನಾಪ್ ಆದ ಕೆಲವೇ ಗಂಟೆಗಳಲ್ಲಿ ಬಾಲಕನನ್ನು ಹತ್ಯೆ ಮಾಡಿದ್ದರಿಂದ ಘಟನೆ ವಿಕೋಪಕ್ಕೆ ತಿರುಗಿತ್ತು.
ಮೊದಲು ಹಣಕ್ಕೆ ಬೇಡಿಕೆಯಿಟ್ಟ ಸಾಗರ್, ದೀಕ್ಷಿತ್‌ನನ್ನು ಕ್ಷಸಮುದ್ರಂ ರಸ್ತೆಯಲ್ಲಿರುವ ದಾನವಾಯಿ ಗುಡ್ಡಕ್ಕೆ ಕರೆದೊಯ್ದು ಹಣ ಕೊಡುವ ಮೊದಲೇ ಕತ್ತು ಹಿಸುಕಿ ಕೊಂದಿದ್ದಾನೆ. ನಂತರ ಸಾಕ್ಷ್ಯ ಸಿಗದಂತೆ ಮಾಡಲು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ. ಸಂತ್ರಸ್ತ ಬಾಲಕನ ಕುಟುಂಬಕ್ಕೆ ಪರಿಚಿತನಾಗಿದ್ದ ಸಾಗರ್ ಎಂಬ ಯುವಕ ಈ ದುಷ್ಕೃತ್ಯದಲ್ಲಿ ಭಾಗಿಯಾಗಿರುವುದು ಪೊಲೀಸರಿಗೆ ತನಿಖೆಯಿಂದ ಗೊತ್ತಾಗಿತ್ತು.
ಮಹಬೂಬಾಬಾದ್ ಸಮೀಪದ ಶನಿಗಪುರಂ ಗ್ರಾಮದ ಆರೋಪಿ ಸಾಗರ್ ಆಟೋಮೊಬೈಲ್ ಅಂಗಡಿವೊಂದರಲ್ಲಿ ಕೆಲಸ ಮಾಡುತ್ತಿದ್ದ. ನಂತರ ರಂಜಿತ್ ಬಳಿ ಸಾಗರ್ ಕೂಲಿ ಕೆಲಸಕ್ಕಾಗಿ ಸೇರಿಕೊಂಡ. ಇನ್ನು ರಂಜಿತ್ ಕುಟುಂಬಸ್ಥರಿಗೆ ಸಾಗರ್ ಹತ್ತಿರವಾಗತೊಡಗಿದ. ದಿನ ಕಳೆದಂತೆ ರಂಜಿತ್ ಮಗ ದೀಕ್ಷಿತ್‌ನನ್ನು ಅಪಹರಿಸಲು ಸಾಗರ್ ಸ್ಕೆಚ್ ಹಾಕಿದ್ದ. ಅಕ್ಟೋಬರ್ 18, 2020 ರ ಸಂಜೆ ದೀಕ್ಷಿತ್ಗೆ ಚಾಕೊಲೇಟ್ ಖರೀದಿಸಲು ಬೈಕ್‌ನಲ್ಲಿ ಕರೆದೊಯ್ದು ಕಿಡ್ನಾಪ್ ಮಾಡಿದ್ದ. ಮಗುವಿನ ಅಳುವಿಗೆ ಹೆದರಿದ ಆರೋಪಿ ಕಿಡ್ನಾಪ್ ಆಗಿರುವುದು ಬಯಲಾಗುತ್ತದೆ ಎಂದು ಭಾವಿಸಿ ಮಗುವಿಗೆ ನಿದ್ದೆ ಮಾತ್ರೆ ನೀಡಿದ್ದಾನೆ. ಕುಡಿದ ಅಮಲಿನಲ್ಲಿ ರುಮಾಲಿನಿಂದ ಕೈಕಟ್ಟಿ ಟಿ-ಶರ್ಟ್ನಿಂದ ದೀಕ್ಷಿತ್ನ ಕತ್ತು ಹಿಸುಕಿ ಕೊಂದಿದ್ದಾನೆ ಅನ್ನೋದು ಪೊಲೀಸ್ ತನಿಖೆ ಮೂಲಕ ಬಯಲಾಗಿದೆ.
ದೀಕ್ಷಿತ್‌ನನ್ನು ಕೊಂದ ನಂತರ ಆರೋಪಿ ಸಾಗರ್ ತನ್ನ ಪೋಷಕರಿಗೆ ಕೆಲವು ಕಾಲಿಂಗ್ ಆಪ್‌ಗಳ ಮೂಲಕ ಕರೆ ಮಾಡಿ ಹಣಕ್ಕೆ ಬೇಡಿಕೆ ಇಟ್ಟಿದ್ದ. ರಂಜಿತ್ ದೂರಿನನ್ವಯ ಪೊಲೀಸರು ಎಲ್ಲಾ ಕೋನಗಳಿಂದ ತನಿಖೆ ನಡೆಸಿದ್ದರು. ರಂಜಿತ್ ಮನೆಯ ಸುತ್ತಮುತ್ತ ಸಾಗರ್ ತಿರುಗಾಡುತ್ತಿರುವುದು ತನಿಖೆಯಿಂದ ಬೆಳಕಿಗೆ ಬಂದಿತ್ತು. ಕುಟುಂಬಸ್ಥರು ಹಾಗೂ ಪೊಲೀಸರು ಚಲನವಲನಗಳನ್ನು ಸೂಕ್ಷ್ಮವಾಗಿ ಗಮನಿಸಿದರು. ಅಪಹರಣಕಾರನಿಗೆ ಹಣ ಕೊಡಲು ರಂಜಿತ್ ಕುಟುಂಬ ಸಿದ್ಧವಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.