ಕರ್ನಾಟಕ

karnataka

ETV Bharat / bharat

ಬಹುರಾಷ್ಟ್ರೀಯ ಕಂಪನಿಯ ಹಿರಿಯ ವ್ಯವಸ್ಥಾಪಕನ ಹತ್ಯೆ ಪ್ರಕರಣ: ಓರ್ವ ಆರೋಪಿ ಬಂಧನ - ಆರೋಪಿಗಳ ಬಂಧನಕ್ಕೆ ಆರು ತಂಡಗಳ ರಚನೆ

ದೆಹಲಿಯ ಭಜನ್‌ಪುರ ಪ್ರದೇಶದಲ್ಲಿ ಬಹುರಾಷ್ಟ್ರೀಯ ಕಂಪನಿಯೊಂದರ ಹಿರಿಯ ವ್ಯವಸ್ಥಾಪಕರನ್ನು ಗುಂಡಿಕ್ಕಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಓರ್ವ ಆರೋಪಿಯನ್ನು ಹೆಡೆಮುರಿ ಕಟ್ಟಿದ್ದಾರೆ.

multinational company was murdered
ಬಹುರಾಷ್ಟ್ರೀಯ ಕಂಪನಿಯ ಹಿರಿಯ ವ್ಯವಸ್ಥಾಪಕರನ್ನು ಗುಂಡಿಕ್ಕಿ ಹತ್ಯೆ: ಓರ್ವ ಆರೋಪಿಯ ಬಂಧನ

By ETV Bharat Karnataka Team

Published : Aug 31, 2023, 2:45 PM IST

ನವದೆಹಲಿ:ಈಶಾನ್ಯ ದೆಹಲಿಯ ಭಜನ್‌ಪುರದಲ್ಲಿ ನಡೆದಿದ್ದ ಬಹುರಾಷ್ಟ್ರೀಯ ಕಂಪನಿಯೊಂದರ ಹಿರಿಯ ವ್ಯವಸ್ಥಾಪಕರೊಬ್ಬರ ಕೊಲೆಯ ರಹಸ್ಯವನ್ನು ಪೊಲೀಸರು ಭೇದಿಸಿದ್ದಾರೆ. ಕೊಲೆಯಲ್ಲಿ ಭಾಗಿಯಾಗಿದ್ದ ಆರೋಪಿಯೊಬ್ಬನನ್ನು ಬಂಧಿಸಿದ್ದಾರೆ. ಪೊಲೀಸರ ಪ್ರಕಾರ, ಆರೋಪಿಗಳು ಹಿರಿಯ ಮ್ಯಾನೇಜರ್ ಮತ್ತು ಅವರ ತಾಯಿಯ ಚಿಕ್ಕಪ್ಪನ ಮೇಲೆ ಗುಂಡು ಹಾರಿಸಿದ್ದರು. ಅದರಲ್ಲಿ ಮ್ಯಾನೇಜರ್ ಸಾವನ್ನಪ್ಪಿದ್ದಾರೆ. ಬಂಧಿತ ಆರೋಪಿಯನ್ನು ಬಿಲಾಲ್ ಘನಿ ಅಲಿಯಾಸ್ ಮಲ್ಲು ಎಂದು ಗುರುತಿಸಲಾಗಿದೆ ಎಂದು ಡಿಸಿಪಿ ಡಾ. ಜಾಯ್ ಟಿರ್ಕಿ ಗುರುವಾರ ತಿಳಿಸಿದ್ದಾರೆ.

ಆರೋಪಿಯನ್ನು ಬಿಲಾಲ್ (18) ಭಜನಪುರದ ಸುಭಾಷ್ ಮೊಹಲ್ಲಾ ನಿವಾಸಿ ಎಂದು ಗುರುತಿಸಲಾಗಿದೆ. ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಈತನನ್ನು ಗುರುತಿಸಿ ಸಿಗ್ನೇಚರ್ ಬ್ರಿಡ್ಜ್ ಬಳಿ ಮಧ್ಯರಾತ್ರಿ 2 ಗಂಟೆಗೆ ಬಂಧಿಸಲಾಯಿತು ಎಂದು ಡಿಸಿಪಿ ತಿಳಿಸಿದ್ದಾರೆ. ಮಂಗಳವಾರ ರಾತ್ರಿ 11.53ಕ್ಕೆ ಭಜನಪುರ ಪೊಲೀಸ್ ಠಾಣೆ ವ್ಯಾಪ್ತಿಯ ಸುಭಾಷ್ ವಿಹಾರ್ ರಸ್ತೆ ಸಂಖ್ಯೆ 8ರಲ್ಲಿ ಇಬ್ಬರ ಮೇಲೆ ಗುಂಡಿನ ದಾಳಿ ನಡೆದಿರುವ ಬಗ್ಗೆ ಮಾಹಿತಿ ಲಭಿಸಿತ್ತು ಎಂದು ಡಿಸಿಪಿ ತಿಳಿಸಿದ್ದಾರೆ.

ಮಾಹಿತಿ ತಿಳಿದ ತಕ್ಷಣ ಪೊಲೀಸ್ ತಂಡ ಸ್ಥಳಕ್ಕೆ ಆಗಮಿಸಿತ್ತು. ಗಾಯಾಳುಗಳನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅಲ್ಲಿ ವೈದ್ಯರು ಹರ್​ಪ್ರೀತ್​ ಮೃತಪಟ್ಟಿದ್ದಾರೆ ಎಂದು ಘೋಷಿಸಿದ್ದರು. ಗಾಯಗೊಂಡ ಗೋವಿಂದ್ ಅವರಿಗೆ ಚಿಕಿತ್ಸೆ ನೀಡಲಾಯಿತು. ಹರ್‌ಪ್ರೀತ್ ದೆಹಲಿ ಮೂಲದ ಬಹುರಾಷ್ಟ್ರೀಯ ಕಂಪನಿಯಲ್ಲಿ ಹಿರಿಯ ವ್ಯವಸ್ಥಾಪಕರಾಗಿದ್ದರೆ, ಗೋವಿಂದ್ ಮೊಮೊಸ್ ಅಂಗಡಿಯನ್ನು ನಡೆಸುತ್ತಿದ್ದರು. ಗೋವಿಂದ್ ಹರ್‌ಪ್ರೀತ್ ಅವರ ತಾಯಿಯ ಚಿಕ್ಕಪ್ಪ. ಈ ವೇಳೆ ಪೊಲೀಸರು, ಕೊಲೆ ಹಾಗೂ ಕೊಲೆ ಯತ್ನ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಆರೋಪಿಗಳ ಬಂಧನಕ್ಕೆ ಆರು ತಂಡಗಳ ರಚನೆ:ಸಮೀಪದಲ್ಲೇ ಅಳವಡಿಸಲಾಗಿದ್ದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸಲಾಗಿದ್ದು, ಕೊಲೆಯಲ್ಲಿ ಭಾಗಿಯಾದ ಆರೋಪಿಗಳನ್ನು ಪತ್ತೆ ಮಾಡಲಾಗಿದೆ. ಆರೋಪಿಗಳ ಬಂಧನಕ್ಕೆ ಆರು ತಂಡಗಳನ್ನು ರಚಿಸಲಾಗಿತ್ತು. ಗುರುವಾರ ಮುಂಜಾನೆ ಸಿಗ್ನೇಚರ್ ಸೇತುವೆ ಬಳಿ ಬಿಲಾಲ್ ಎಂಬ ಆರೋಪಿಯನ್ನು ಬಂಧಿಸಲಾಗಿದೆ.

ಪ್ರಕರಣದ ಹಿನ್ನೆಲೆ ಏನು?:ಬಿಲಾಲ್ ಘನಿ ತನ್ನ ನಾಲ್ವರು ಸಹಚರರಾದ ಮೊಹಮ್ಮದ್ ಸಮೀರ್ ಅಲಿಯಾಸ್ ಮಾಯಾ, ಸೊಹೈಲ್ ಅಲಿಯಾಸ್ ಬಾವರ್ಚಿ, ಮೊಹಮ್ಮದ್ ಜುನೈದ್ ಮತ್ತು ಅದ್ನಾನ್ ಅವರೊಂದಿಗೆ ಮಂಗಳವಾರ ರಾತ್ರಿ ಘೋಂಡಾದಲ್ಲಿರುವ ಸಮೀರ್ ಮನೆಯಲ್ಲಿ ಪಾರ್ಟಿ ಆಚರಿಸಿದ್ದಾರೆ ಎಂದು ತನಿಖೆಯಿಂದ ತಿಳಿದುಬಂದಿದೆ ಎಂದು ಡಿಸಿಪಿ ಮಾಹಿತಿ ನೀಡಿದರು. ಎಲ್ಲರೂ ಎರಡು ಸ್ಕೂಟರ್‌ಗಳಲ್ಲಿ ಹೋಗುತ್ತಿದ್ದರು. ತಿರುಗಾಡುತ್ತಾ ಸುಭಾಷ್ ವಿಹಾರ್ ನ 8/4 ರಸ್ತೆಯನ್ನು ತಲುಪಿದಾಗ ಮುಂದೆ ಹೋಗಲು ರಸ್ತೆ ತುಂಬಾ ಕಿರಿದಾಗಿತ್ತು.

ಈ ಕ್ಷಣದಲ್ಲೇ ಹರ್‌ಪ್ರೀತ್ ತಮ್ಮ ಸಂಬಂಧಿ ಗೋವಿಂದ ಅವರೊಂದಿನೊಂದಿಗೆ ಎದುರಿನಿಂದ ಬರುತ್ತಿದ್ದರು. ರಸ್ತೆ ತುಂಬಾ ಕಿರಿದಾಗಿದ್ದು, ಒಂದು ಬಾರಿಗೆ ಕೇವಲ ಒಂದು ದ್ವಿಚಕ್ರ ವಾಹನ ಮಾತ್ರ ಸಂಚರಿಸಬಹುದಿತ್ತು. ಎರಡೂ ಕಡೆಯವರು ನಿಲ್ಲಿಸುವಂತೆ ಸೂಚಿಸಿದರು. ಆದರೆ, ಹರ್‌ಪ್ರೀತ್ ನಿಲ್ಲಿಸದೇ ಬೈಕ್​ನ್ನು ವೇಗವಾಗಿ ಓಡಿಸಿದರು. ಇದರಿಂದ ಕೋಪಗೊಂಡ ಜುನೈದ್ ಗೋವಿಂದ್​ಗೆ ಕಪಾಳಮೋಕ್ಷ ಮಾಡಿದ್ದಾನೆ. ಇಬ್ಬರ ನಡುವೆ ವಾಗ್ವಾದ ನಡೆದಿದೆ. ಮೊಹಮ್ಮದ್ ಸಮೀರ್, ಹರ್​ಪ್ರೀತ್ ಮತ್ತು ಗೋವಿಂದ್ ಮೇಲೆ ಗುಂಡು ಹಾರಿಸಿದ್ದಾನೆ. ಇಬ್ಬರ ತಲೆಗೆ ಗುಂಡು ತಗುಲಿದೆ. ಕೃತ್ಯವೆಸಗಿದ ನಂತರ ಎಲ್ಲರೂ ಅಲ್ಲಿಂದ ಓಡಿಹೋಗಿದ್ದರು. ಉಳಿದ ಆರೋಪಿಗಳ ಬಂಧನಕ್ಕೆ ಪ್ರಯತ್ನ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿ ಬಿಲಾಲ್​ಗೆ ಕ್ರಿಮಿನಲ್ ಹಿನ್ನೆಲೆ:ಆರೋಪಿ ಬಿಲಾಲ್ ಅಲಿಯಾಸ್ ಮಲ್ಲು ಕೆಲ ದಿನಗಳ ಹಿಂದೆ 18 ವರ್ಷಕ್ಕೆ ಕಾಲಿಟ್ಟಿದ್ದಾನೆ. ಈತ ಆಗಸ್ಟ್ 27 ರಂದು ತನ್ನ 18ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದನಂತೆ. ಈತ 10ನೇ ತರಗತಿವರೆಗೆ ಶಿಕ್ಷಣ ಪಡೆದಿದ್ದಾನೆ. ಗಾಂಜಾ ಸೇದುವ ಅಭ್ಯಾಸದಿಂದಾಗಿ ಆತನ ಅಡ್ಡಹೆಸರು ‘ಮಲ್ಲು’ ಎಂದು ಎಲ್ಲರೂ ಕರೆಯುತ್ತಾರೆ. ಐವರು ಒಡಹುಟ್ಟಿದವರಲ್ಲಿ ಈತ ಹಿರಿಯವನು. ಭಜನಪುರದ ಉತ್ತರ ಘೋಂಡಾದಲ್ಲಿ ವೆಲ್ಡಿಂಗ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದಾನೆ. ಆತನ ತಂದೆ ಅಲ್ಯೂಮಿನಿಯಂ ಕಟ್ಟರ್ ಮತ್ತು ಕಾರ್ಪೆಂಟರ್ ಆಗಿ ಕೆಲಸ ಮಾಡುತ್ತಾರೆ. ಬಿಲಾಲ್ ಅಪರಾಧ ಕೃತ್ಯದಲ್ಲಿ ಭಾಗಿಯಾಗಿದ್ದಾನೆ. 2022ರಲ್ಲಿ, ಭಜನ್ಪುರದಲ್ಲಿ ಕೊಲೆ ಮತ್ತು ದರೋಡೆ ಪ್ರಕರಣ ಸೇರಿದಂತೆ ಎರಡು ಹೇಯ ಪ್ರಕರಣಗಳಲ್ಲಿ ಭಾಗಿಯಾಗಿದ್ದ. ಅವನು ಮತ್ತು ಆತನ ಸಹಚರರು ಭಜನಪುರದಲ್ಲಿ ವ್ಯಕ್ತಿಯಿಂದ ಸ್ಕೂಟಿಯನ್ನು ಲೂಟಿ ಮಾಡಿದ್ದರು. ಅಪ್ರಾಪ್ತರಾಗಿದ್ದ ಆರೋಪಿಗಳು ಸ್ವಲ್ಪ ಸಮಯದಲ್ಲೇ ಮಕ್ಕಳ ವೀಕ್ಷಣಾಲಯದಿಂದ ಹೊರಗೆ ಬಂದಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ:ಬೆಂಗಳೂರು: ಕಟ್ಟಡದಿಂದ ಬಿದ್ದು ರಿಯಲ್ ಎಸ್ಟೇಟ್ ಉದ್ಯಮಿ ಅನುಮಾನಾಸ್ಪದ ಸಾವು

ABOUT THE AUTHOR

...view details