ತಿರುವನಂತಪುರಂ(ಕೇರಳ):ಹಿರಿಯ ಕಾಂಗ್ರೆಸ್ ನಾಯಕ ಮಣಿಶಂಕರ್ ಅಯ್ಯರ್ ಅವರು ಕಾಂಗ್ರೆಸ್ ಬಹಿಷ್ಕರಿಸಿದ್ದ ಕೇರಳೀಯಂ ವಿಚಾರ ಸಂಕಿರಣದಲ್ಲಿ ಭಾಗವಹಿಸಿದ್ದರು. ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, ಕೇರಳ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರಿಗೆ ಕ್ಷಮೆಯಾಚಿಸುತ್ತೇನೆ, ಕೇರಳೀಯಂ ವಿಚಾರ ಸಂಕಿರಣದಲ್ಲಿ ಭಾಗವಹಿಸದಂತೆ ಪಕ್ಷವು ಹೇಳಿತ್ತು ಎಂದು ತಿಳಿಸಿದರು.
ಮಣಿಶಂಕರ್ ಅಯ್ಯರ್ ಸೆಮಿನಾರ್‌ನಲ್ಲಿ ಭಾಗವಹಿಸಿರುವುದು ಕಾಂಗ್ರೆಸ್ ನಾಯಕರನ್ನು ಮುಜುಗರಕ್ಕೀಡು ಮಾಡಿದೆ. ಕೇರಳೀಯಂ ಸೆಮಿನಾರ್‌ನಲ್ಲಿ ಭಾಗವಹಿಸದಂತೆ ಪಕ್ಷದ ನಾಯಕರು ಸೂಚಿಸಿದ್ದರು ಎಂದು ಮಣಿಶಂಕರ್ ಅಯ್ಯರ್ ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ. ನಾನು ರಾಜಕೀಯ ಮಾತನಾಡಲು ಈ ವೇದಿಕೆಗೆ ಬಂದಿಲ್ಲ, ಹೀಗಾಗಿ ಪಕ್ಷ ನನ್ನ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ ಎಂದು ಭಾವಿಸುತ್ತೇನೆ ಎಂದು ಹೇಳಿದ್ದಾರೆ.
ಕೇರಳ ಮಾದರಿಯ ಸ್ಥಳೀಯ ಸ್ವ - ಸರ್ಕಾರವನ್ನು ಅವರು ಶ್ಲಾಘಿಸಿದರು. ಕೇರಳ ವಿಭಿನ್ನ ರಾಜ್ಯ ಮತ್ತು ಕೇರಳವು ಅಧಿಕಾರ ವಿಕೇಂದ್ರೀಕರಣವನ್ನು ನಿಖರವಾಗಿ ಜಾರಿಗೆ ತಂದ ರಾಜ್ಯವಾಗಿದೆ. ಕೇರಳದ ಗ್ರಾಮ ಸಭೆಗಳು ಮುಕ್ತ ಚರ್ಚೆಗೆ ವೇದಿಕೆಯಾಗಿದೆ. ಪಂಚಾಯತ್ ರಾಜ್ ಅನ್ನು ಜಾರಿಗೆ ತಂದ ರಾಜೀವ್ ಗಾಂಧಿ ಅವರಿಗೆ ಗೌರವ ಸಲ್ಲಿಸಲು ಸೆಮಿನಾರ್ ನಲ್ಲಿ ಭಾಗವಹಿಸಿದ್ದೇನೆ. ಪ್ರತಿಯೊಬ್ಬರ ಕಣ್ಣಿನಿಂದ ಕಣ್ಣೀರು ಒರೆಸಲು ಪಂಚಾಯತ್ ರಾಜ್ ಜಾರಿಗೆ ತರುವುದು ರಾಜೀವ್ ಗಾಂಧಿಯವರ ಕನಸಾಗಿತ್ತು. ಈ ಸಾಧನೆಯ ಸಮೀಪಕ್ಕೆ ಬರುವ ಏಕೈಕ ರಾಜ್ಯ ಕೇರಳ ಎಂದು ಮಣಿಶಂಕರ್ ಅಯ್ಯರ್ ಶ್ಲಾಘಿಸಿದ್ದಾರೆ.