ನವದೆಹಲಿ: ಕಾಂಗ್ರೆಸ್ ಹಿರಿಯ ನಾಯಕ ಅಹ್ಮದ್ ಪಟೇಲ್ ಕೊರೊನಾ ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದು, ಅವರ ಅಗಲಿಕೆಗೆ ರಾಷ್ಟ್ರೀಯ ನಾಯಕರು ಸಂತಾಪ ಸೂಚಿಸಿದ್ದಾರೆ.
ಗೃಹ ಸಚಿವ ಅಮಿತ್ ಶಾ ಸಂತಾಪ ಸೂಚಿಸಿ ಟ್ವೀಟ್ ಮಾಡಿದ್ದು, ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಅಹ್ಮದ್ ಪಟೇಲ್ ನಿಧನದ ಸುದ್ದಿ ತುಂಬಾ ದುಃಖ ತರಿಸಿದೆ. ಅಹ್ಮದ್ ಪಟೇಲ್ ಜಿ ಕಾಂಗ್ರೆಸ್ ಹಾಗೂ ಸಾಮಾಜಕ್ಕೆ ತಮ್ಮದೇ ಕೊಡುಗೆ ನೀಡಿದವರು, ಅವರ ಕುಟುಂಬಸ್ಥರ ದುಃಖದಲ್ಲಿ ನಾನೂ ಭಾಗಿಯಾಗಿದ್ದೇನೆ. ದೇವರ ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ಪ್ರಾರ್ಥಿಸುತ್ತೇನೆ ಎಂದಿದ್ದಾರೆ.
ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಈ ಕುರಿತು ಸಂತಾಪ ಸೂಚಿಸಿ ಟ್ವೀಟ್ ಮಾಡಿದ್ದಾರೆ. ನಾವು ಒಬ್ಬ ನಿಷ್ಠಾವಂತ ನಾಯಕನನ್ನು ಕಳೆದುಕೊಂಡಿದ್ದೇವೆ. ಅಹ್ಮದ್ ಪಟೇಲ್ ಜಿ ಅವರ ಅಗಲಿಕೆಯಿಂದ ಪಕ್ಷ ಒಂದು ಆಧಾರ ಸ್ತಂಭ ಕಳೆದುಕೊಂಡಂತಾಗಿದೆ. ಅವರ ತ್ಯಾಗ ಮತ್ತು ಕೊಡುಗೆ ಅವಿಸ್ಮರಣೀಯವಾದುದು ಎಂದಿದ್ದಾರೆ.
ಇದಲ್ಲದೆ ಈ ಕುರಿತು ಶೋಕ ಸಂದೇಶ ಪತ್ರ ಬರೆದಿದ್ದು, ಅಹ್ಮದ್ ಪಟೇಲ್ ಅವರ ಸಾವಿನ ಸುದ್ದಿಯು ನನಗೆ ಆಘಾತ ಉಂಟುಮಾಡಿದೆ. 1976ರಿಂದಲೂ ಅವರೊಂದಿಗೆ ಕೆಲಸ ಮಾಡಿದ್ದೇನೆ. 4 ದಶಕಗಳ ಕಾಲ ಅವರೊಂದಿಗೆ ರಾಜಕೀಯವಾಗಿ ಬೆರೆತಿದ್ದೆ. ಅವರು ದಿನದ ಎಲ್ಲಾ ಸಮಯದಲ್ಲೂ ಪಕ್ಷಕ್ಕಾಗಿ ಹಾಗೂ ಪಕ್ಷದ ಕಾರ್ಯಕರ್ತರಿಗಾಗಿ ಲಭ್ಯವಾಗುತ್ತಿದ್ದ ಏಕೈಕ ನಾಯಕರು. ಯಾವಾಗಲೂ ಪಕ್ಷದ ಸಿದ್ಧಾಂತ ಹಾಗೂ ಪಕ್ಷದ ಸಂಕಷ್ಟ ಕಾಲದಲ್ಲೂ ಜೊತೆಗೆ ನಿಂತವರು ಎಂದು ತಿಳಿಸಿದ್ದಾರೆ.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಸಹ ಟ್ವೀಟ್ ಮೂಲಕ ಸಂತಾಪ ಸೂಚಿಸಿದ್ದು, ಕಾಂಗ್ರೆಸ್ ನಾಯಕ ಅಹ್ಮದ್ ಪಟೇಲ್ ಅಗಲಿದ ಸುದ್ದಿ ಕೇಳಿ ತೀವ್ರ ದುಃಖವಾಗಿದೆ. ಅವರ ಕುಟುಂಬ ಹಾಗೂ ಅಭಿಮಾನಿಗಳಿಗೆ ದುಃಖ ಭರಿಸುವ ಶಕ್ತಿಯನ್ನು ಭಗವಂತ ಕರುಣಿಸಲಿ ಎಂದು ಪ್ರಾರ್ಥಿಸಿದ್ದಾರೆ.