ಅಹಮದಾಬಾದ್(ಗುಜರಾತ್):ಗುಜರಾತ್ನಲ್ಲಿ ಮತ್ತೊಮ್ಮೆ ಜಯಭೇರಿ ಬಾರಿಸಿ ಅಧಿಕಾರದ ಗದ್ದುಗೆ ಏರಿ ಇತಿಹಾಸ ನಿರ್ಮಿಸಲು ಬಿಜೆಪಿ ರಣತಂತ್ರ ರೂಪಿಸುತ್ತಿದೆ. ಇತ್ತ ಹಿರಿಯ ನಾಯಕ, ಮಾಜಿ ಸಚಿವ ಜೈ ನಾರಾಯಣ್ ವ್ಯಾಸ್ ಪಕ್ಷಕ್ಕೆ ರಾಜೀನಾಮೆ ಸಲ್ಲಿಸಿ ಕಾಂಗ್ರೆಸ್ ಸೇರುವ ಮೂಲಕ ಭಾರತೀಯ ಜನತಾ ಪಕ್ಷದ ನಾಯಕರಿಗೆ ಶಾಕ್ ನೀಡಿದ್ದಾರೆ.
ಅಹಮದಾಬಾದ್‌ನ ಕಾಂಗ್ರೆಸ್ ಭವನದಲ್ಲಿಂದು ನಡೆದ ಕಾರ್ಯಕ್ರಮದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರ ನೇತೃತ್ವದಲ್ಲಿ ನಾರಾಯಣ್ ವ್ಯಾಸ್ ಅವರು ತಮ್ಮ ಪುತ್ರನ ಜೊತೆಗೂಡಿ ಕಾಂಗ್ರೆಸ್ ಸದಸ್ಯತ್ವ ಪಡೆದರು. ಈ ವೇಳೆ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಸೇರಿದಂತೆ ಹಿರಿಯ ಕಾಂಗ್ರೆಸ್ ನಾಯಕರು ಉಪಸ್ಥಿತರಿದ್ದರು.
ಈ ವೇಳೆ ಮಾತನಾಡಿದ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಬಿಜೆಪಿಯವರು ಕಾಂಗ್ರೆಸ್ ವಿರುದ್ಧ ಜನರನ್ನು ಎತ್ತಿಕಟ್ಟುತ್ತಿದ್ದಾರೆ. ಈ ಬಾರಿ ಬಿಜೆಪಿಗೆ ಗೆಲ್ಲುವ ವಿಶ್ವಾಸವಿಲ್ಲ. ಅದಕ್ಕಾಗಿ ರಾಷ್ಟ್ರೀಯ ನಾಯಕರು ಬಂದು ವಾರ್ಡ್ವಾರು ಪ್ರಚಾರ ಮಾಡುತ್ತಿದ್ದಾರೆ. ಕಾಂಗ್ರೆಸ್ ವಿರುದ್ಧ ಸುಖಾಸುಮ್ಮನೆ ಟೀಕೆ ಮಾಡುತ್ತಿದ್ದಾರೆ. ಜೈನಾರಾಯಣ ವ್ಯಾಸ್ರಂತಹ ಹಿರಿಯ ನಾಯಕರನ್ನು ಬಿಜೆಪಿ ಕಡೆಗಣಿಸಿದೆ. ಈ ಬಾರಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕಾಂಗ್ರೆಸ್ ಸೇರ್ಪಡೆ ಬಳಿಕ ಮಾತನಾಡಿದ ಜೈನಾರಾಯಣ ವ್ಯಾಸ್ ಅವರು, ಮಲ್ಲಿಕಾರ್ಜುನ ಖರ್ಗೆ ಅವರ ಸಮ್ಮುಖದಲ್ಲಿ ಕಾಂಗ್ರೆಸ್ ಸೇರುವ ಅವಕಾಶ ಸಿಕ್ಕಿತು. ನಾನು ಯಾರ ವಿರುದ್ಧವೂ ದೂರಿ ರಾಜೀನಾಮೆ ನೀಡಿಲ್ಲ. ಕಾಂಗ್ರೆಸ್ ಪ್ರಜಾಸತ್ತಾತ್ಮಕ ಪಕ್ಷವಾಗಿದೆ. ಹೀಗಾಗಿಯೇ ಕಾಂಗ್ರೆಸ್ ಸೇರಿದ್ದೇನೆ. ನನಗೆ ಯಾವುದೇ ಜವಾಬ್ದಾರಿ ನೀಡಿದರೂ ಸಮರ್ಥವಾಗಿ ನಿಭಾಯಿಸುವೆ ಎಂದರು.
75 ವರ್ಷದ ಜೈನಾರಾಯಣ್ ವ್ಯಾಸ್ 30 ವರ್ಷಗಳಿಂದ ಬಿಜೆಪಿಯಲ್ಲಿದ್ದರು. ಪ್ರಧಾನಿ ನರೇಂದ್ರ ಮೋದಿ ಸಿಎಂ ಆಗಿದ್ದಾಗ ಸಚಿವರಾಗಿದ್ದರು. ಬಳಿಕ ಅವರು 2012 ಮತ್ತು 2017 ರ ವಿಧಾನಸಭಾ ಚುನಾವಣೆಯಲ್ಲಿ ಸೋಲು ಕಂಡರು. ಈಗಿನ ಚುನಾವಣೆಯಲ್ಲಿ ಪಕ್ಷ ಅವರಿಗೆ ಟಿಕೆಟ್ ನಿರಾಕರಿಸಿತ್ತು. ಹೀಗಾಗಿ ಅವರು ವೈಯಕ್ತಿಕ ಕಾರಣ ನೀಡಿ 20 ದಿನಗಳ ಹಿಂದಷ್ಟೇ ಬಿಜೆಪಿಗೆ ರಾಜೀನಾಮೆ ನೀಡಿದ್ದರು. ಇಂದು ಕಾಂಗ್ರೆಸ್ ಸೇರಿದ್ದಾರೆ.
ಬಿಜೆಪಿ ಪ್ರತಿಕ್ರಿಯೆ:ಜೈನಾರಾಯಣ್ ವ್ಯಾಸ್ ಅವರು ಸೋತಿದ್ದರೂ ಪಕ್ಷ ಅವರಿಗೆ ಹಲವು ಬಾರಿ ಅವಕಾಶ ನೀಡಿದೆ. ಈ ಬಾರಿ ವಯಸ್ಸಿನ ಕಾರಣಕ್ಕಾಗಿ ಅವರಿಗೆ ಟಿಕೆಟ್ ನೀಡಿಲ್ಲ. 75 ವರ್ಷ ದಾಟಿದವರಿಗೆ ಪಕ್ಷ ಸ್ಪರ್ಧೆಗೆ ಅವಕಾಶ ನೀಡುವುದಿಲ್ಲ. ಈ ನಿಯಮದಿಂದ ಅವರು ಟಿಕೆಟ್ ವಂಚಿತರಾಗಿದ್ದಾರೆ. ಕಾಂಗ್ರೆಸ್ ಸೇರಿರುವುದು ಅವರ ವೈಯಕ್ತಿಕ ಆಯ್ಕೆ ಎಂದು ಬಿಜೆಪಿ ಹೇಳಿದೆ.
ಓದಿ:ಕಾಂಗ್ರೆಸ್ನಲ್ಲಿ ಮತ್ತೆ ಶುರುವಾಯ್ತು ಮುಂದಿನ ಸಿಎಂ ಕೂಗು: ಹೈಕಮಾಂಡ್ ಮಧ್ಯ ಪ್ರವೇಶ?