ಮುಂಬೈ:ಛತ್ರಪತಿ ಶಿವಾಜಿ ಕುರಿತು ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿ ಹೇಳಿಕೆ ಹಲವು ಶಿವಸೇನಾ ನಾಯಕರ ಕೆಂಗಣ್ಣಿಗೆ ಗುರಿಯಾಗಿದೆ. ಶಿವಾಜಿ ವಿರುದ್ಧ ಹೇಳಿಕೆ ನೀಡಿರುವ ಅವರನ್ನು ರಾಜ್ಯದಿಂದ ಬೇರೆಡೆಗೆ ಸ್ಥಳಾಂತರಿಸಬೇಕು ಮುಖ್ಯಮಂತ್ರಿ ಏಕನಾಥ್ ಶಿಂಧೆ ಬಣವಾಗಿರುವ ಶಿವಸೇನಾ ಶಾಸಕ ಸಂಜಯ್ ಗಾಯಕ್ವಾಡ್ ಬೇಡಿಕೆ ಇಟ್ಟಿದ್ದಾರೆ.
ಮಹಾರಾಷ್ಟ್ರ ಸಾಮ್ರಾಜ್ಯ ನಿರ್ಮಾತೃ ಬಗ್ಗೆ ರಾಜ್ಯಪಾಲರು ಮಾತನಾಡಿದ್ದು, ಈ ಹಿಂದೆ ಕೂಡ ಅವರು ಇದೇ ರೀತಿ ಮಾತನಾಡಿದ್ದಾರೆ ಎಂದು ಬುಲ್ದಾನ್ ವಿಧಾನಸಭೆ ಶಾಸಕರಾಗಿರುವ ಗಾಯಕ್ವಾಡ್ ವಾದಿಸಿದ್ದಾರೆ.
ರಾಜ್ಯಪಾಲರು ಛತ್ರಪತಿ ಶಿವಾಜಿ ಮಹಾರಾಜರ ಆದರ್ಶಗಳ ಬಗ್ಗೆ ಮೊದಲು ತಿಳಿಯಬೇಕಿದೆ. ಅವರು ಯಾವುದೇ ಗಣ್ಯ ವ್ಯಕ್ತಿಗಳನ್ನು ಶಿವಾಜಿಗೆ ಹೋಲಿಸಲು ಸಾಧ್ಯವಿಲ್ಲ. ರಾಜ್ಯದ ಇತಿಹಾಸ ಮತ್ತು ಹೇಗೆ ನಡೆಯುತ್ತಿದೆ ಎಂಬುದು ತಿಳಿಯದಿದ್ದರೆ ಅಂತಹವರನ್ನು ರಾಜ್ಯದಿಂದ ಹೊರಗೆ ಕಳುಹಿಸುವುದು ಉತ್ತಮ ಎಂದು ನಾನು ಬಿಜೆಪಿ ನಾಯಕರು ಮತ್ತು ಕೇಂದ್ರಕ್ಕೆ ಮನವಿ ಮಾಡುತ್ತೇನೆ ಎಂದಿದ್ದಾರೆ.
ಶನಿವಾರ ಮಾತನಾಡಿದ್ದ ರಾಜ್ಯಪಾಲರಾದ ಕೋಶಿಯಾರಿ, ಶಿವಾಜಿ ಹಳೆಯ ಕಾಲದ ಐಕಾನ್. ಈಗಿನ ಕಾಲದ ಐಕಾನ್ ಆಗಿ ಜನರು ಅಂಬೇಡ್ಕರ್ ಮತ್ತು ಕೇಂದ್ರ ಸಚಿವ ನಿತಿನ್ ಗಡ್ಕರಿ ಎಂದು ಹೇಳಬಹುದು ಎಂದಿದ್ದರು. ಅವರ ಈ ಹೇಳಿಕೆ ಎನ್ಸಿಪಿ ಮತ್ತು ಉದ್ದವ್ ಠಾಕ್ರೆ ನೇತೃತ್ವದ ಶಿವಸೇನಾ ಬಣದಲ್ಲಿ ಆಕ್ರೋಶಕ್ಕೆ ಗುರಿಯಾಗಿದೆ.
ಇದನ್ನೂ ಓದಿ: ದೆಹಲಿ ಜೈಲಿನಿಂದ ಸುಕೇಶ್ ಚಂದ್ರಶೇಖರ್ ಸ್ಥಳಾಂತರ ಅರ್ಜಿ: ಕೇಂದ್ರದ ಪ್ರತಿಕ್ರಿಯೆ ಕೇಳಿದ ಸುಪ್ರೀಂ