ಮುಂಬೈ:ಮಹಾರಾಷ್ಟ್ರದಲ್ಲಿ ನಿರ್ಮಾಣವಾಗಬೇಕಿದ್ದ ಸೆಮಿಕಂಡಕ್ಟರ್ ಘಟಕ ಗುಜರಾತ್‌ಗೆ ವರ್ಗವಾಗಿರುವುದು ಭಾರೀ ಟೀಕೆಗೆ ಗುರಿಯಾಗಿದೆ. ವಾಣಿಜ್ಯ ನಗರಿ ಮುಂಬೈ ಜನರಲ್ಲಿ ಅಸಮಾಧಾನ ಉಂಟು ಮಾಡಿದ್ದಲ್ಲದೇ, ರಾಜಕೀಯ ಕಿತ್ತಾಟಕ್ಕೂ ಕಾರಣವಾಗಿದೆ.
ದೇಶದ ಮೊದಲ ಚಿಪ್ ತಯಾರಿಕಾ ಘಟಕವನ್ನು ಗುಜರಾತ್ನಲ್ಲಿ ಆರಂಭಿಸಲು ವೇದಾಂತ್ ಹಾಗೂ ಫಾಕ್ಸ್‌ಕಾನ್ ಕಂಪನಿಗಳು ನಿನ್ನೆ ಒಪ್ಪಂದ ಮಾಡಿಕೊಂಡಿವೆ. ಈ ಸೆಮಿಕಂಡಕ್ಟರ್ ಘಟಕ ಈ ಮೊದಲು ಮಹಾರಾಷ್ಟ್ರದಲ್ಲಿ ನಿರ್ಮಾಣ ಮಾಡುವ ಯೋಜನೆ ಹಾಕಿಕೊಳ್ಳಲಾಗಿತ್ತು. ಆದರೆ, ಹೂಡಿಕೆದಾರರನ್ನು ಹಿಡಿದಿಡುವಲ್ಲಿ ಸೋತ ಮಹಾ ಸರ್ಕಾರ, ಬೃಹತ್ ಯೋಜನೆಯನ್ನು ಕಳೆದುಕೊಂಡಿದೆ.
ಉದ್ಧವ್ ಠಾಕ್ರೆ ನೇತೃತ್ವದ ಮಹಾಅಘಾಡಿ ಸರ್ಕಾರ ಮಹಾರಾಷ್ಟ್ರದ ಪುಣೆಯಲ್ಲಿ ಸೆಮಿಕಂಡಕ್ಟರ್ ಘಟಕ ಸ್ಥಾಪನೆಗಾಗಿ ವೇದಾಂತ ಮತ್ತು ಫಾಕ್ಸ್‌ಕಾನ್ ಕಂಪನಿಗಳೊಂದಿಗೆ ಹಲವು ಸುತ್ತಿನ ಮಾತುಕತೆಗಳನ್ನು ನಡೆಸಿತ್ತು. ಆದರೀಗ ಎರಡೂ ಕಂಪನಿಗಳು ಗುಜರಾತ್ ಸರ್ಕಾರದೊಂದಿಗೆ ಮಾತುಕತೆ ನಡೆಸಿ ಅಲ್ಲಿಯೇ ಘಟಕ ಸ್ಥಾಪನೆಗೆ ಒಪ್ಪಂದ ಮಾಡಿಕೊಂಡಿವೆ.
ಯೋಜನೆ ಏನಾಗಿತ್ತು?:ಭಾರತದಲ್ಲಿನ ಆಟೋಮೊಬೈಲ್ ಮತ್ತು ಸ್ಮಾರ್ಟ್ಫೋನ್ ಉದ್ಯಮಗಳು ಅತ್ಯಾಧುನಿಕ ಚಿಪ್ಗಳನ್ನು ಬಳಸುತ್ತವೆ. ಭಾರತದಲ್ಲಿ ಈ ಸೆಮಿಕಂಡಕ್ಟರ್‌ಗಳ ದೊಡ್ಡ ಕೊರತೆಯಿದೆ. ಆದ್ದರಿಂದ ಸೆಮಿಕಂಡಕ್ಟರ್ಗಳನ್ನು ಸ್ಥಳೀಯವಾಗಿಯೇ ತಯಾರಿಸುವ ಯೋಜನೆಯನ್ನು ರೂಪಿಸಲಾಗಿತ್ತು.
ಇದಕ್ಕಾಗಿ ಮಹಾರಾಷ್ಟ್ರದ ಪುಣೆ ಬಳಿ ಘಟಕ ಸ್ಥಾಪನೆಗೆ ಪ್ಲಾನ್ ಮಾಡಲಾಗಿತ್ತು. ಈ ನಿಟ್ಟಿನಲ್ಲಿ ಅಂದಿನ ಸಿಎಂ ಉದ್ಧವ್ ಠಾಕ್ರೆ ಸರ್ಕಾರ ಹಲವು ಸುತ್ತಿನ ಸಭೆಗಳನ್ನು ನಡೆಸಿತ್ತು. ತೈವಾನ್‌ನ ಫಾಕ್ಸ್‌ಕಾನ್ ಮತ್ತು ಭಾರತದ ವೇದಾಂತ ಕಂಪನಿಗಳೊಂದಿಗೆ ಜಂಟಿಯಾಗಿ ಮಹಾರಾಷ್ಟ್ರದಲ್ಲಿ ಅರೆವಾಹಕ ಘಟಕವನ್ನು ಸ್ಥಾಪಿಸಲು ನಿರ್ಧರಿಸಲಾಗಿತ್ತು. ಈಗ ಈ ಯೋಜನೆ ದಿಢೀರ್ ಆಗಿ ಗುಜರಾತ್‌ಗೆ ಶಿಫ್ಟ್ ಆಗಿರುವುದು ರಾಜಕೀಯ ಮತ್ತು ಸಾರ್ವಜನಿಕ ವಲಯದಲ್ಲಿ ಟೀಕೆಗೆ ಗುರಿಯಾಗಿದೆ.