ಗಾಂಧಿನಗರ:ದೇಶದಲ್ಲಿ ಸೆಮಿಕಂಡಕ್ಟರ್ ಉತ್ಪಾದನಾ ಘಟಕಗಳನ್ನು ಬಲಪಡಿಸಿಲು ಹಾಗೂ ಅದನ್ನು ಮತ್ತಷ್ಟು ಎತ್ತರಕ್ಕೆ ತೆಗೆದುಕೊಂಡು ಹೋಗಲು ತಂತ್ರಜ್ಞಾನ ಕಂಪನಿಗಳಿಗೆ ಶೇ. 50ರಷ್ಟು ಆರ್ಥಿಕ ನೆರವು ನೀಡಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಗುಜರಾತ್ನ ಗಾಂಧಿನಗರದಲ್ಲಿ ಇಂದಿನಿಂದ ಮೂರು ದಿನಗಳ ಕಾಲ ಸೆಮಿಕಾನ್ ಇಂಡಿಯಾ ಕಾನ್ಫರೆನ್ಸ್-2023 ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಇಂದು ಚಾಲನೆ ನೀಡಿ ಅವರು ಮಾತನಾಡಿದರು.
ಭಾರತವು ಜಾಗತಿಕ ಸೆಮಿಕಂಡಕ್ಟರ್ ವಲಯದಲ್ಲಿ ಹೊಸ ಹೆಜ್ಜೆ ಇಡುತ್ತಿದೆ. ಇದನ್ನು ಮತ್ತಷ್ಟು ಬಲಪಡಿಸಲು ಹಾಗೂ ಉತ್ತೇಜಿಸಲು ವಿದೇಶಿ ಕಂಪನಿಗಳು ತಮ್ಮ ಹೂಡಿಕೆ ಮಾಡಲು ಇದೊಂದು ಸೂಕ್ತ ವೇದಿಕೆಯಾಗಿದೆ. ದೇಶದಲ್ಲಿ ಸೆಮಿಕಂಡಕ್ಟರ್ ಉದ್ಯಮದ ಬೆಳವಣಿಗೆಗೆ ಸಂಪೂರ್ಣ ಪರಿಸರ ವ್ಯವಸ್ಥೆಯನ್ನು ಸಿದ್ಧಪಡಿಸಲಾಗುತ್ತಿದೆ. ಸೆಮಿಕಂಡಕ್ಟರ್ ಉತ್ಪಾದನಾ ವಲಯಕ್ಕೆ ಶಕ್ತಿಯಾಗಿ ಬರುವ ಕೈಗಾರಿಕೆಗಳಿಗೆ ತಮ್ಮ ಸರ್ಕಾರ ಎಲ್ಲ ರೀತಿಯ ಸೌಲಭ್ಯಗಳನ್ನು ನೀಡುತ್ತಿದೆ ಎಂದರು.
ಸೆಮಿಕಾನ್ ಇಂಡಿಯಾ ಕಾರ್ಯಕ್ರಮದಡಿ ಪ್ರೋತ್ಸಾಹ ಹಾಗೂ ನೆರವು ನೀಡಲಾಗುತ್ತದೆ. ಇದೀಗ ಆ ನೆರವು ಹಾಗೂ ಪ್ರೋತ್ಸಾಹವನ್ನು ಮತ್ತಷ್ಟು ವಿಸ್ತರಿಸಲಾಗಿದೆ. ಭಾರತದಲ್ಲಿ ಸೆಮಿಕಂಡಕ್ಟರ್ ಉತ್ಪಾದನಾ ಘಟಕಗಳನ್ನು ಸ್ಥಾಪಿಸಲು 50 ಪ್ರತಿಶತ ಹಣಕಾಸಿನ ನೆರವು ನೀಡಲಾಗುತ್ತದೆ. ಸೆಮಿ ಕಂಡಕ್ಟರ್‌ಗಳ ಉತ್ಪಾದನೆಯಲ್ಲಿ ದೇಶವನ್ನು ಮುಂಚೂಣಿಗೆ ತರಲು ಇದು ಉತ್ತಮ ವೇದಿಕೆಯಾಗಿದೆ. ಇದರಿಂದ ಭಾರತದಲ್ಲಿ ಸೆಮಿಕಂಡಕ್ಟರ್ ಉದ್ಯಮವು ವೇಗವಾಗಿ ಬೆಳೆಯಲಿದೆ ಎಂದು ಮೋದಿ ಹೇಳಿದರು.
ವರ್ಷದ ಹಿಂದೆ ಭಾರತದ ಸೆಮಿಕಂಡಕ್ಟರ್ ವಲಯದಲ್ಲಿ ಏಕೆ ಹೂಡಿಕೆ ಮಾಡಬೇಕು ಎಂದು ವಿದೇಶಿ ಕಂಪನಿಗಳು ಸೇರಿದಂತೆ ಕೆಲವರು ಕೇಳುತ್ತಿದ್ದರು. ಈಗ ಭಾರತದಲ್ಲಿ ಏಕೆ ಹೂಡಿಕೆ ಮಾಡಬಾರದು ಎಂದು ಅವರೇ ಕೇಳುತ್ತಾರೆ. ಇದು ಭಾರತದ ಆರ್ಥಿಕ ಬೆಳವಣಿಗೆಗೆ ಸಾಕ್ಷಿ ಎಂದರು.