ಕರ್ನಾಟಕ

karnataka

ETV Bharat / bharat

ಮಳೆ ನೀರು ಕೊಯ್ಲು ಮೂಲಕ ನೀರಿನ ಸ್ವಾವಲಂಬನೆ.. ಅದಕ್ಕಾಗಿ ಹೀಗೆ ಮಾಡಬೇಕಿದೆ - ವಿಶೇಷ ಅಂಕಣ

ನಮ್ಮ ದೇಶದಲ್ಲಿ ಮಳೆ ನೀರು ಸಂರಕ್ಷಿಸಿದರೆ 428 ಟಿಎಂಸಿ ಅಡಿ ನೀರು ಹೆಚ್ಚುವರಿಯಾಗಿ ಲಭ್ಯವಾಗಲಿದೆ. ಮಳೆ ನೀರು ಸಂರಕ್ಷಣೆ, ವೈಜಾನಿಕ ಮಳೆ ಕೊಯ್ಲುಗೆ ಸಂಬಂಧಿಸಿ ಅತ್ಯಾಧುನಿಕ ತಂತ್ರಜ್ಞಾನ ಬಳಕೆಗೆ ಸಂಬಂಧಿಸಿದಂತೆ ಸಿಂಗಾಪುರ ಮತ್ತು ಇಸ್ರೇಲ್ ಮಾದರಿಯನ್ನು ನಾವು ಅನುಸರಿಸಬೇಕಿದೆ. ಈ ಎರಡು ದೇಶಗಳು ನೀರಿಗೆ ಸಂಬಂಧಿಸಿದಂತೆ ಅತ್ಯಾಧುನಿಕ ತಂತ್ರಜ್ಞಾನ ಅಭಿವೃದ್ಧಿ ಪಡಿಸಿಕೊಂಡಿವೆ..

ಮಳೆ ನೀರು ಕೊಯ್ಲು ಮೂಲಕ ನೀರಿನ ಸ್ವಾವಲಂಬನೆ
Self-reliance with rainwater conservation

By

Published : Mar 24, 2021, 8:13 PM IST

ನೀರು.. ಜೀವ ಜಗತ್ತಿನ ಅತಿ ಅಮೂಲ್ಯ ಸಂಪತ್ತು. ಭೂಮಿಯಲ್ಲಿ ಜೀವ ಜಗತ್ತು ಅರಳಿ ನಿಲ್ಲುವಲ್ಲಿ ಇದರ ಪಾತ್ರ ಅತ್ಯಂತ ಮಹತ್ವವುಳ್ಳದ್ದಾಗಿದೆ. ಜೀವಿಗಳ ಜೊತೆಗೆ ಸಸ್ಯ ಪ್ರಪಂಚದ ಇರುವಿಕೆಗೂ ನೀರೇ ಕಾರಣ. ಹೀಗಾಗಿ, ಅದು ಈ ನಾಗರಿಕತೆಯ ಅವಿಭಾಜ್ಯ ಅಂಗ.

ಇದರ ಜೊತೆಗೆ ವಿಶ್ವದ ದೇಶಗಳ ನಿರಂತರ ಅಭಿವೃದ್ಧಿಯಲ್ಲಿ ಸಹ ಜಲ ಸಂಪತ್ತು ಮಹತ್ವದ ಪಾತ್ರವಹಿಸುತ್ತಿದೆ. ಆದರೆ, ಈಗ ವಿಶ್ವದೆಲ್ಲೆಡೆ ನೀರಿಗಾಗಿ ಹಾಹಾಕಾರ ಆರಂಭವಾಗಿದೆ. ಇದನ್ನು ತಪ್ಪಿಸಲು ಎಲ್ಲರೂ ಒಗ್ಗಟ್ಟಾಗಿ ಶ್ರಮಿಸಿದರೆ ಮಾತ್ರ ಅಗತ್ಯ ಪ್ರಮಾಣದ ನೀರು ದೊರಕಿಸಲು ಸಾಧ್ಯ.

ಒಂದು ಅಂದಾಜಿನ ಪ್ರಕಾರ, ವಿಶ್ವದಾದ್ಯಂತ ಸುಮಾರು 210 ಕೋಟಿ ಜನ ಕುಡಿಯುವ ನೀರು ಲಭ್ಯವಿಲ್ಲದೆ ತತ್ತರಿಸಿದ್ದಾರೆ. ವಿಶ್ವದ ಒಟ್ಟು ಜನಸಂಖ್ಯೆಯ ಶೇ.40 ಪ್ರತಿಶತದಷ್ಟು ಜನ ನೀರಿನ ಕೊರತೆಯ ಸವಾಲನ್ನು ಎದುರಿಸುತ್ತಿದ್ದಾರೆ.

ಈ ಹಿನ್ನೆಲೆ ಜಲ ಸಂಕಷ್ಟಕ್ಕೆ ಒಂದು ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ವಿಶ್ವಸಂಸ್ಥೆಯು 2018-2028 ಒಂದು ದಶಕದ ಅವಧಿಯನ್ನು ಎಲ್ಲರಿಗೂ ಶುದ್ಧ ನೀರಿಗಾಗಿ ಕ್ರಮಕೈಗೊಳ್ಳುವ ಅವಧಿಯೆಂದು ಘೋಷಿಸಿದೆ.

ಇನ್ನು, ಭಾರತದ ಪರಿಸ್ಥಿತಿ ಇದಕ್ಕಿಂತ ಹೆಚ್ಚು ಆಶಾದಾಯಕವಾಗೇನೂ ಇಲ್ಲ. ಜಾಗತಿಕ ಮಾನವ ಜನಸಂಖ್ಯೆಯ 18 ಪ್ರತಿಶತ ಮತ್ತು ಇತರೆ ಪ್ರಾಣಿ ಸಮೂಹಗಳ ಪೈಕಿ 15 ಶೇಕಡಾಕ್ಕೆ ನೆಲೆಯಾಗಿರುವ ಭಾರತ, ವಿಶ್ವದ ಜಲ ಸಂಪನ್ಮೂಲದ ಶೇ.7ರಷ್ಟು ಪಾಲನ್ನು ಮಾತ್ರ ಹೊಂದಿದೆ. ಹೀಗಾಗಿ, ದೇಶದ ಹಲವು ಭಾಗಗಳಲ್ಲಿ ಈಗ ನೀರಿಗಾಗಿ ಹಾಹಾಕಾರ ಎದ್ದಿದೆ.

ಭಾರತದಲ್ಲಿ ವಾರ್ಷಿಕ ಸರಾಸರಿ 1,170 ಮಿಲಿ ಮೀಟರ್ ಮಳೆಯಾಗುತ್ತದೆ. ದುರಂತ ಅಂದರೆ ಇದರ 5ನೇ ಒಂದು ಭಾಗವನ್ನು ಕೂಡ ಉಳಿಸಿಕೊಳ್ಳಲು ನಮಗೆ ಸಾಧ್ಯವಾಗುತ್ತಿಲ್ಲ. ಒಟ್ಟಾರೆ ಇಂದು ದೇಶದ 60 ಕೋಟಿ ಜನ ನೀರಿನ ಕೊರತೆಯಿಂದ ತೊಂದರೆ ಅನುಭವಿಸುತ್ತಿದ್ದಾರೆ. ಇದು ದೇಶದ ಮುಂದಿರುವ ಅತಿ ದೊಡ್ಡ ಸವಾಲಾಗಿದೆ.

ದೇಶದ ಅತ್ಯುನ್ನತ ನೀತಿ ನಿರೂಪಕ ಸಂಸ್ಥೆಯಾದ ನೀತಿ ಅಯೋಗ ನೀಡಿರುವ ಮಾಹಿತಿಯ ಪ್ರಕಾರ, ನೀರಿನ ಅವಶ್ಯಕತೆಗಳು 2030 ವರ್ಷದ ಹೊತ್ತಿಗೆ ದ್ವಿಗುಣಗೊಳ್ಳಲಿದೆ. ಇದಕ್ಕಿಂತಲೂ ದೊಡ್ಡ ಅಪಾಯದ ಕರೆ ಗಂಟೆಯೆಂದರೆ 2050ರ ಹೊತ್ತಿಗೆ ದೇಶದೆಲ್ಲೆಡೆ ನೀರಿನ ಕೊರತೆಯು ನಮ್ಮ ಅಭಿವೃದ್ಧಿಯ ವೇಗ ಕುಗ್ಗಿಸಲಿದೆ ಎನ್ನಲಾಗುತ್ತಿದೆ.

ನೀತಿ ಆಯೋಗದ ಪ್ರಕಾರ ಜಲ ಸಂಕಷ್ಟ ನಮ್ಮ ಜಿಡಿಪಿಯನ್ನು ಆರು ಪ್ರತಿಶತದಷ್ಟು ಕುಗ್ಗಿಸಲಿದೆ. ಈ ಸವಾಲಿನ ತೀವ್ರತೆ ಮನಗಂಡಿರುವ ಕೇಂದ್ರ ಜಲಶಕ್ತಿ ಸಚಿವಾಲಯವು, ಇದೀಗ ಒಂದು ಮಹತ್ವದ ಕ್ರಿಯಾ ಯೋಜನೆ ಸಿದ್ಧಪಡಿಸಿದೆ.

ಈ ವರ್ಷದ ನವೆಂಬರ್ ಅಂತ್ಯದ ವೇಳೆಗೆ ಈ ಕ್ರಿಯಾ ಯೋಜನೆ ಜಾರಿಗೆ ತರಲಾಗುವುದು. ಪ್ರಧಾನಿ ನರೇಂದ್ರ ಮೋದಿಯವರು ಈಗಾಗಲೇ ಕೇಂದ್ರದ ಮಹಾತ್ಮಾ ಗಾಂಧಿ ಉದ್ಯೋಗ ಖಾತರಿ ಯೋಜನೆಯ ಇಡೀ ಮೊತ್ತವನ್ನು ಮಳೆ ನೀರು ಕೊಯ್ಲು ಕಾರ್ಯಕ್ರಮಗಳಿಗೆ ಬಳಸಿಕೊಳ್ಳಬಹುದು ಎಂದು ತಿಳಿಸಿದ್ದಾರೆ.

ದೇಶದ 734 ಜಿಲ್ಲೆಗಳ ಎಲ್ಲಾ 6 ಲಕ್ಷ ಗ್ರಾಮಗಳಲ್ಲಿ ಮಳೆ ನೀರು ಸಂರಕ್ಷಣಾ ಕಾರ್ಯಗಳಿಗೆ ಈ ಮೊತ್ತ ವಿನಿಯೋಗಿಸಬಹುದಾಗಿದೆ. ದೇಶದಲ್ಲಿ ಈಗ ಲಭ್ಯವಿರುವ ದಾಖಲೆಗಳ ಪ್ರಕಾರ 256 ಜಿಲ್ಲೆಗಳ 1,592 ಬ್ಲಾಕ್‌ಗಳಲ್ಲಿ ಅಂತರ್ಜಲ ಮಟ್ಟ ಅಪಾಯಕಾರಿ ಕಡಿಮೆ ಮಟ್ಟಕ್ಕೆ ಇಳಿದಿದೆ. ಈ ಜಿಲ್ಲೆಗಳು ರಾಜಸ್ಥಾನ, ತಮಿಳುನಾಡು, ಉತ್ತರಪ್ರದೇಶ, ತೆಲಂಗಾಣ ಮತ್ತು ಇತರ ರಾಜ್ಯಗಳಲ್ಲಿವೆ.

ಮಳೆ ನೀರು ಸಂರಕ್ಷಣೆ, ನೀರಿನ ಮೂಲಗಳ ಪುನರುಜ್ಜೀವನ, ತ್ಯಾಜ್ಯ ನೀರಿನ ಶುದ್ಧೀಕರಣ ಮತ್ತು ಮರುಬಳಕೆ, ಮರಗಳನ್ನು ನೆಡುವುದು ಮತ್ತು ಸಂಬಂಧಿತ ಚಟುವಟಿಕೆಗಳು ದೊಡ್ಡ ಪ್ರಮಾಣದಲ್ಲಿ ನಡೆದರೆ ಮಾತ್ರ ಈ ಜಲ ಸಂಕಷ್ಟದಿಂದ ನಾವು ಪಾರಾಗಬಹುದಾಗಿದೆ. ಹಂತ ಹಂತಗಳಲ್ಲಿ ಈ ಚಟುವಟಿಕೆಗಳನ್ನು ನಾವು ಕೈಗೊಳ್ಳಬೇಕಿದೆ.

ಮಳೆನೀರಿನ ಸಂರಕ್ಷಣೆಯೊಂದಿಗೆ ಸ್ವಾವಲಂಬನೆ :ಹನಿ ಹನಿ ಕೂಡಿ ಹಳ್ಳ ಎಂಬ ಮಾತು ನಮ್ಮಲ್ಲಿ ಜನಪ್ರಿಯ. ಈ ಮಾತಿಗೆ ಅನುಗುಣವಾಗಿ ಮಳೆಯ ಹನಿಗಳನ್ನು ಕಾಪಾಡಿದರೆ ನಮ್ಮ ನೀರಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು. ಜನ ಈ ನಿಟ್ಟಿನಲ್ಲಿ ತಕ್ಷಣ ಕಾರ್ಯ ಪ್ರವೃತ್ತರಾಗಬೇಕಿದೆ. ಜನ ಸರ್ಕಾರದ ಜೊತೆಗೆ ಕೈ ಜೋಡಿಸಿ ನಡೆದರೆ ಅಸಾಧ್ಯ ಎನ್ನುವ ಯಾವ ಕೆಲಸವೂ ಇಲ್ಲ.

ನಮ್ಮ ಶಾಲಾ ಪಠ್ಯ ಪುಸ್ತಕಗಳಲ್ಲಿ ದಿ ಗ್ರೇಟ್ ಅಶೋಕ ಚಕ್ರವರ್ತಿ ನೀರಾವರಿ ಕೆರೆ‌ಗಳನ್ನು ನಿರ್ಮಿಸಿದನೆಂದು ನಾವೆಲ್ಲರೂ ನಮ್ಮ ಬಾಲ್ಯದಲ್ಲಿ ಓದಿದ್ದೇವೆ. ಅದು ಈ ಹಿಂದಿನ ಸಂಗತಿ. ಆದರೆ, ಈಗ ಇದಕ್ಕೆ ತದ್ವಿರುದ್ಧವಾದ ಘಟನೆಗಳು ಸಂಭವಿಸುತ್ತಿವೆ.

ಇಂದಿನ ದಿನಗಳಲ್ಲಿ ನಾವು ನಮ್ಮ ನೀರಿನ ಸಂಪನ್ಮೂಲಗಳನ್ನು ಉದ್ದೇಶಪೂರ್ವಕ ಮಾಲಿನ್ಯಗೊಳಿಸುತ್ತಿದ್ದೇವೆ. ಇದಕ್ಕೆ ಲಕ್ಷಾಂತರ ನಿದರ್ಶನಗಳು ನಮ್ಮ ಕಣ್ಣ ಮುಂದಿವೆ. ನಮ್ಮ ಜಲ ಸಂಪನ್ಮೂಲಗಳನ್ನು ನಾವು ಅಪಾಯಕಾರಿ ಮಾಲಿನ್ಯಕಾರಕ ತ್ಯಾಜ್ಯದೊಂದಿಗೆ ನಾಶಗೊಳಿಸುತ್ತಿದ್ದೇವೆ.

ಇಷ್ಟಕ್ಕೆ ಮುಗಿದಿಲ್ಲ :ಬದಲಿಗೆ ನಾವೀಗ, ಜಲ ಸಂಪನ್ಮೂಗಳ ಮೂಲಕ್ಕೆ ಕೈ ಹಾಕುತ್ತಿದ್ದೇವೆ. ಕೆರೆ, ಕಟ್ಟೆ, ನದಿ, ಕಾಡುಗಳ ಜಮೀನನ್ನು ಅತಿಕ್ರಮಿಸುತ್ತಿದ್ದೇವೆ. ಪರಿಣಾಮ ನೀರಿಗಾಗಿ ಹಾಹಾಕಾರ ಎಲ್ಲೆಡೆ ಆರಂಭವಾಗಿದೆ. ಭಾರತದಲ್ಲಿ ಸುಮಾರು 450 ನದಿಗಳು ಹರಿಯುತ್ತಿವೆ. ದುರಂತ ಅಂದರೆ ಈ ನದಿಗಳ ಪೈಕಿ ಅರ್ಧದಷ್ಟು ನದಿಗಳ ನೀರು ಕೂಡ ಬಳಕೆಗೆ ಯೋಗ್ಯವಾಗಿಲ್ಲ.

ಎಲ್ಲಾ ನದಿಗಳ ನೀರು ವಿಯುಕ್ತವಾಗುತ್ತಿವೆ. ನಮ್ಮಲ್ಲಿನ ತ್ಯಾಜ್ಯವನ್ನು ನೇರವಾಗಿ ನದಿಗಳಿಗೆ ಬಿಡಲಾಗುತ್ತಿದೆ. ಇದನ್ನು ಸರ್ಕಾರಗಳು ಯಾವುದೇ ಕಾರಣಕ್ಕೂ ಸಹಿಸಬಾರದು. ಕಠಿಣ ಕಾನೂನುಗಳ ಮೂಲಕ ನದಿ ನೀರನ್ನು ರಕ್ಷಿಸಬೇಕು. ಒಂದು ಅಂದಾಜಿನ ಪ್ರಕಾರ, ಸುಮಾರು 3,600 ಕೋಟಿ ಲೀಟರ್ ಮಾಲಿನ್ಯಕಾರಕ ತ್ಯಾಜ್ಯವನ್ನು ನಮ್ಮ ನೀರಿನ ಮೂಲಗಳಿಗೆ ಬಿಡುಗಡೆ ಮಾಡಲಾಗುತ್ತಿದೆ.

ಒಂದು ವೇಳೆ ದೇಶದ ಎಲ್ಲಾ ರಾಜ್ಯ ಸರ್ಕಾರಗಳು, ತೆಲಂಗಾಣದಂತೆಯೇ ತಮ್ಮ ತಮ್ಮ ವ್ಯಾಪ್ತಿಯ ಜಲ ಸಂಪನ್ಮೂಲವನ್ನು ಪುನರುಜ್ಜೀವನಗೊಳಿಸುವ ಸಂಕಲ್ಪ ತೆಗೆದುಕೊಂಡರೆ ಮಾತ್ರ ಪರಿಸ್ಥಿತಿ ಸರಿ ದಾರಿಗೆ ಬರಬಹುದು.

ಒಂದೊಮ್ಮೆ ಸಮರೋಪಾದಿಯಲ್ಲಿ ರಾಜ್ಯ ಸರ್ಕಾರಗಳು ಈ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತರಾದರೆ ಸ್ವಾಭಾವಿಕವಾಗಿ ಜನರು ಕೂಡ ಒಗ್ಗಟ್ಟಿನಿಂದ ಸರ್ಕಾರದ ಜೊತೆಗೆ ಕೈಜೋಡಿಸುತ್ತಾರೆ. ಈ ನಿಟ್ಟಿನಲ್ಲಿ ಎಲ್ಲರು ಯೋಚಿಸಬೇಕಿದೆ. ಹವಾಮಾನ ಬದಲಾವಣೆ, ಪರಿಸರದ ಉಷ್ಣಾಂಶ ಏರಿಕೆ ಕಾರಣದಿಂದ ಈ ಹಿಂದಿನ ಐದು ದಶಕಗಳಿಗೆ ಹೋಲಿಸಿದರೆ ಮಳೆಯ ಪ್ರಮಾಣವು ಶೇ.24ರಷ್ಟು ಕಡಿಮೆಯಾಗಿದೆ. ಐದು ದಶಕಗಳ ಹಿಂದೆ ಪರಿಸ್ಥಿತಿ ತುಂಬಾ ಬೇರೆಯಾಗಿತ್ತು. ಈಗ ವಿಶ್ವದ ಎಲ್ಲಾ ದೇಶಗಳು ಅತಿ ಕಠೋರ ಬರಗಳಿಗೆ ಸಾಕ್ಷಿಯಾಗುತ್ತಿವೆ.

ಪ್ರವಾಹ, ತಾಪಮಾನ ಏರಿಕೆ, ತಲಾ ನೀರಿನ ಲಭ್ಯತೆ ಕುಸಿತ ಹೀಗೆ ನಾನಾ ಸವಾಲುಗಳಿಗೆ ಮಾನವ ಕುಲ ಸಾಕ್ಷಿಯಾಗುತ್ತಿದೆ. ಭಾರತ ಕೂಡ ಇದಕ್ಕೆ ಹೊರತಲ್ಲ. ಈ ನಿಟ್ಟಿನಲ್ಲಿ ಕೇಂದ್ರ, ರಾಜ್ಯಗಳು ಮತ್ತು ಸ್ಥಳೀಯ ಸಂಸ್ಥೆಗಳು ಒಗ್ಗಟ್ಟಿನಿಂದ ಕಾರ್ಯ ಪ್ರವೃತ್ತವಾಗಬೇಕಿದೆ. ಜನರು ಈ ನಿಟ್ಟಿನಲ್ಲಿ ಕೈ ಜೋಡಿಸಬೇಕಿದೆ. ನೀರಿನ ವಿಷಯದಲ್ಲಿ ಆತ್ಮನಿರ್ಭರ್​ (ಸ್ವಯಂ ಅವಲಂಬನೆ) ಸಾಧಿಸಲು ಎಲ್ಲರೂ ಪಣ ತೊಡಬೇಕಿದೆ.

ನೀರಿನ ಸಂರಕ್ಷಣೆ ನಿಟ್ಟಿನಲ್ಲಿ ಮಾಡಲಾಗುವ ಖರ್ಚುಗಳ ವಿಷಯದಲ್ಲಿ ಪಾರದರ್ಶಕತೆ ಇರಬೇಕು. ನೀರಿನ ಸಂರಕ್ಷಣೆಯ ಗುರಿಗಳು ಹಾಗೂ ಈ ಸಂಬಂಧ ಎಲ್ಲಾ ದತ್ತಾಂಶಗಳು ಎಲ್ಲರಿಗೂ ಲಭ್ಯವಾಗುವಂತೆ ಮಾಡಬೇಕು. ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಹಣಕಾಸು ವಿಷಯಗಳು ಹಾಗೂ ಸಾಧನೆಗೆ ಸಂಬಂಧಿಸಿ ಉತ್ತರದಾಯಿತ್ವ ಹೊಂದಿರಬೇಕು. ಇದು ಸಾಧ್ಯವಾದರೆ ವೈಜ್ಞಾನಿಕ ನೀತಿ ಅನುಸರಿಸುವ ಮೂಲಕ ಭಾರತವು ಮಳೆ ನೀರು ಸಂರಕ್ಷಣೆ, ಮಳೆ ನೀರು ಕೊಯ್ಲಿನಲ್ಲಿ ಖಂಡಿತಾ ಪ್ರಗತಿ ಸಾಧಿಸಬಹುದು.

ನಮ್ಮ ದೇಶದಲ್ಲಿ ಮಳೆ ನೀರು ಸಂರಕ್ಷಿಸಿದರೆ 428 ಟಿಎಂಸಿ ಅಡಿ ನೀರು ಹೆಚ್ಚುವರಿಯಾಗಿ ಲಭ್ಯವಾಗಲಿದೆ. ಮಳೆ ನೀರು ಸಂರಕ್ಷಣೆ, ವೈಜಾನಿಕ ಮಳೆ ಕೊಯ್ಲುಗೆ ಸಂಬಂಧಿಸಿ ಅತ್ಯಾಧುನಿಕ ತಂತ್ರಜ್ಞಾನ ಬಳಕೆಗೆ ಸಂಬಂಧಿಸಿದಂತೆ ಸಿಂಗಾಪುರ ಮತ್ತು ಇಸ್ರೇಲ್ ಮಾದರಿಯನ್ನು ನಾವು ಅನುಸರಿಸಬೇಕಿದೆ. ಈ ಎರಡು ದೇಶಗಳು ನೀರಿಗೆ ಸಂಬಂಧಿಸಿದಂತೆ ಅತ್ಯಾಧುನಿಕ ತಂತ್ರಜ್ಞಾನ ಅಭಿವೃದ್ಧಿ ಪಡಿಸಿಕೊಂಡಿವೆ.

ಇನ್ನು, ತ್ಯಾಜ್ಯ ನೀರು ಶುದ್ಧೀಕರಣದ ಮೂಲಕ ಮರು ಬಳಕೆ ಸಂಬಂಧ ಅರಬ್ ರಾಷ್ಟ್ರಗಳು ಅನುಸರಿಸುತ್ತಿರುವ ತಂತ್ರಜ್ಞಾನವನ್ನು ನಾವು ಬಳಸಿಕೊಳ್ಳಬೇಕಿದೆ. ಅರಬ್ ರಾಷ್ಟ್ರಗಳಲ್ಲಿ ಶೇ.70ರಷ್ಟು ತ್ಯಾಜ್ಯ ನೀರನ್ನು ಈಗ ಮರು ಬಳಕೆ ಮಾಡಲಾಗುತ್ತಿದೆ.

ಈ ಎಲ್ಲಾ ಮಾರ್ಗೋಪಾಯಗಳನ್ನು ಬಳಸಿಕೊಂಡು ಭಾರತ ಕೂಡ ತನ್ನ ಜಲ ಸಂಪನ್ಮೂಲಗಳನ್ನು ಬಲಪಡಿಸಬೇಕಿದೆ. ನೀರಿನ ಕೊರತೆಯ ಹಾಹಾಕಾರ ತಪ್ಪಿ ಎಲ್ಲರಿಗೂ ಅಗತ್ಯ ಪ್ರಮಾಣದ ನೀರು ದೊರಕುವಂತೆ ಮಾಡಬೇಕಿದೆ.

ABOUT THE AUTHOR

...view details