ಲಖನೌ (ಉತ್ತರ ಪ್ರದೇಶ):ಭಾರತಕ್ಕೆ ನುಸುಳಿರುವ ಪಾಕಿಸ್ತಾನಿ ಮಹಿಳೆ ಸೀಮಾ ಹೈದರ್ ಗುಲಾಮ್ಳನ್ನು ಉತ್ತರ ಪ್ರದೇಶದ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್)ದ ಅಧಿಕಾರಿಗಳು ಸೋಮವಾರ (ಜುಲೈ 17) ಮತ್ತು ಮಂಗಳವಾರ (ಜುಲೈ 18) ಎರಡು ದಿನಗಳ ಕಾಲ ವಿಚಾರಣೆ ನಡೆಸಿದ್ದಾರೆ. ಎಸ್ಪಿ ಶ್ರೇಣಿಯ ಮೂವರು ಅಧಿಕಾರಿಗಳು ಕರಾಚಿ ಮೂಲದ ಸೀಮಾ ಅವರನ್ನು ವಿಚಾರಣೆಗೆ ಒಳಪಡಿಸಿದ್ದು, ಪ್ರಮುಖ 13 ಪ್ರಶ್ನೆಗಳನ್ನು ತನಿಖಾ ಅಧಿಕಾರಿಗಳು ಕೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸಿಂಧ್ ಪ್ರಾಂತ್ಯದ ಕರಾಚಿಯ 30 ವರ್ಷದ ಸೀಮಾ ಗುಲಾಮ್ ಹೈದರ್ ಮತ್ತು ಭಾರತದ 22 ವರ್ಷದ ಸಚಿನ್ ಮೀನಾ ಎಂಬಾತ 2019ರಲ್ಲಿ ಪಬ್ಜಿ ಗೇಮ್ ಮೂಲಕ ಸಂಪರ್ಕಕ್ಕೆ ಬಂದಿದ್ದರು. ಸಚಿನ್ಗಾಗಿ ನೇಪಾಳದ ಮೂಲಕ ಸೀಮಾ ಭಾರತಕ್ಕೆ ಬಂದ ಬಳಿಕ 1,300 ಕಿ.ಮೀ ದೂರದಲ್ಲಿ ವಾಸಿಸುತ್ತಿದ್ದ ಈ ಇಬ್ಬರ ನಡುವೆ ನಾಟಕೀಯ ಪ್ರೇಮಕಥೆ ತೆರೆದುಕೊಂಡಿತ್ತು.
ಇದನ್ನೂ ಓದಿ:ಪಾಕಿಸ್ತಾನಿ ಮಹಿಳೆ ಸೀಮಾ ಹೈದರ್ ವಿಚಾರಣೆಗೆ ಒಳಪಡಿಸಿದ ATS
ಸದ್ಯ ದೆಹಲಿ ಸಮೀಪದ ಗ್ರೇಟರ್ ನೋಯ್ಡಾದ ರಬುಪುರ ಪ್ರದೇಶದಲ್ಲಿ ಸೀಮಾ ಪ್ರಾವಿಷನ್ ಸ್ಟೋರ್ ನಡೆಸುತ್ತಿರುವ ಪ್ರಿಯಕರ ಸಚಿನ್ ಜೊತೆಗೆ ವಾಸಿಸುತ್ತಿದ್ದಾರೆ. ಇದರ ನಡುವೆ ಉತ್ತರ ಪ್ರದೇಶದ ಎಟಿಎಸ್ ಅಧಿಕಾರಿಗಳು ಸಚಿನ್ ಹಾಗೂ ಸೀಮಾ ಅವರನ್ನು ಪ್ರತ್ಯೇಕವಾಗಿ ವಿಚಾರಣೆಗೆ ಒಳಪಡಿಸಲಾಗಿದೆ. ವಿಚಾರಣೆ ವೇಳೆ ಸೀಮಾ ಹೈದರ್ಗೆ ಕೇಳಿದ 13 ಪ್ರಶ್ನೆಗಳು ಮತ್ತು ಆಕೆ ನೀಡಿದ ಉತ್ತರಗಳ ವಿವರಣೆ ಹೀಗಿದೆ..
ಪ್ರಶ್ನೆ 1: ಎರಡು ಪಾಸ್ಪೋರ್ಟ್ಗಳ ಮೂಲ ಯಾವುದು?
ಸೀಮಾ: ಈ ಹಿಂದೆ ಪಾಸ್ಪೋರ್ಟ್ನಲ್ಲಿ ಸೀಮಾ ಎಂದು ಮಾತ್ರ ಬರೆಯಲಾಗಿತ್ತು ಎಂದು ಕಳೆದ ಹತ್ತು ದಿನಗಳಿಂದ ಹೇಳುತ್ತಿದ್ದೇನೆ. ಇದರಿಂದ ನಾನು ಸಮಸ್ಯೆ ಎದುರಿಸುತ್ತಿದ್ದೇನೆ. ಅದಕ್ಕಾಗಿಯೇ ಸೀಮಾ ಗುಲಾಮ್ ಹೈದರ್ ಹೆಸರಿನಲ್ಲಿ ಎರಡನೇ ಪಾಸ್ಪೋರ್ಟ್ ಮಾಡಲಾಗಿದೆ. ಇದನ್ನು ಬಿಟ್ಟು ಬೇರೇನೂ ಇಲ್ಲ.
ಪ್ರಶ್ನೆ 2: ನಿಮಗೆ ಪಾಕಿಸ್ತಾನದ ಸೇನೆಯಲ್ಲಿರುವ ಸಹೋದರ ಮತ್ತು ಚಿಕ್ಕಪ್ಪ ಇದ್ದಾರೆಯೇ?, ಅವರು ನಿಮ್ಮನ್ನು ಇಲ್ಲಿಗೆ ಕಳುಹಿಸಿದ್ದಾರೆಯೇ ಅಥವಾ ಭಾರತಕ್ಕೆ ಹೋಗುವಂತೆ ಐಎಸ್ಐ ಹೇಳಿದೆಯೇ?
ಸೀಮಾ: ನಾನು ನನ್ನ ಅಣ್ಣ ಮತ್ತು ಚಿಕ್ಕಪ್ಪನನ್ನು ಭೇಟಿಯಾಗಿ ವರ್ಷಗಳೇ ಆಗಿದೆ. ಈ ಐಎಸ್ಐ ಅಂದ್ರೇನು?. ಕಳೆದ ಕೆಲವು ದಿನಗಳಲ್ಲಿ ನಾನು ಭಾರತಕ್ಕೆ ಬಂದಾಗ ಟಿವಿ ವಾಹಿನಿಯೊಂದರಲ್ಲಿ ಐಎಸ್ಐನ ಏಜೆಂಟ್ ಎಂದು ಕರೆದಾಗ ನನಗೆ ಈ ವಿಷಯ ತಿಳಿಯಿತು. ಸಚಿನ್ ಮೀನಾಗಾಗಿಯೇ ನೇಪಾಳದ ಮೂಲಕ ಭಾರತಕ್ಕೆ ಬಂದಿದ್ದೇನೆ.
ಪ್ರಶ್ನೆ 3: ನೀವು ಕರಾಚಿಯಲ್ಲಿ ವಾಸಿಸುತ್ತಿದ್ದಿರಿ ಮತ್ತು ನಿಮ್ಮ ಕುಟುಂಬ ಸದಸ್ಯರು ಪಾಕಿಸ್ತಾನಿ ಸೇನೆಯಲ್ಲಿದ್ದಾಗ ಐಎಸ್ಐ ಬಗ್ಗೆ ಕೇಳದೆ ಇರಲು ಹೇಗೆ ಸಾಧ್ಯ?. ನೀವು ಸ್ಮಾರ್ಟ್ಫೋನ್ ಬಳಸುತ್ತೀರಿ ಮತ್ತು ಪಬ್ಜಿನಂತಹ ಆಟಗಳನ್ನು ಆಡುತ್ತೀರಿ. ಹಾಗಾದರೆ ನಿಮಗೆ ಐಎಸ್ಐ ಬಗ್ಗೆ ಗೊತ್ತಿಲ್ಲವೇ?
ಸೀಮಾ: ನನ್ನ ಅರ್ಧ ಜೀವನವು ಮಕ್ಕಳನ್ನು ಬೆಳೆಸುವುದರಲ್ಲೇ ಕಳೆದಿದೆ. ಕಳೆದ ಐದು ವರ್ಷಗಳಿಂದ ನಾನು ಸಮಯ ಕಳೆಯಲು ಪಬ್ಜಿ ಆಡುತ್ತಿದ್ದೆ. ಹೀಗಿರುವಾಗ ಐಎಸ್ ಐಯಂತಹ ಮಾತುಗಳನ್ನು ಕೇಳಲು ಸಮಯವೇ ಇರಲಿಲ್ಲ.
ಪ್ರಶ್ನೆ 4: ಐಎಸ್ಐ ಪದವನ್ನು ಕೇಳಲು ನಿಮಗೆ ಸಮಯ ಸಿಗಲಿಲ್ಲವೇ?, ಐದನೇ ತರಗತಿಯವರೆಗೆ ಓದಿದ್ದರೂ ನಿಮ್ಮ ಇಂಗ್ಲಿಷ್ ತುಂಬಾ ಚೆನ್ನಾಗಿದೆಯಲ್ಲಾ?
ಸೀಮಾ: ನಾನು ಏನು ಕಲಿತಿದ್ದೇನೆ ಅದು ನಾನು 2019ರಲ್ಲಿ ಪಬ್ಜಿ ಆಡಲು ಪ್ರಾರಂಭಿಸಿದ ನಂತರವೇ ಕಲಿತಿರುವೆ. ನಾನು ವಿದ್ಯಾವಂತ ಹುಡುಗರು ಮತ್ತು ಪುರುಷರೊಂದಿಗೆ ಆಟವಾಡುತ್ತಿದ್ದೆ. ಆದ್ದರಿಂದ ನಾನು ಅವರಿಂದ ಇಂಗ್ಲಿಷ್ ಕಲಿತಿದ್ದೇನೆ.
ಈ ವೇಳೆ ಎಟಿಎಸ್ ಅಧಿಕಾರಿಯೊಬ್ಬರು ಒಂದು ಪುಟದಲ್ಲಿ ಇಂಗ್ಲಿಷ್ನಲ್ಲಿ ಕೆಲವು ಸಾಲುಗಳನ್ನು ಬರೆದು ಅದನ್ನು ಸೀಮಾಗೆ ಓದಲು ಕೊಟ್ಟರು. ಸೀಮಾ ಅದನ್ನು ತಕ್ಷಣ ಓದಿದರು.
ಪ್ರಶ್ನೆ 5: ನೀವು ನಿಮ್ಮ ಉರ್ದು, ಅರೇಬಿಕ್, ಸಿಂಧಿ ಭಾಷೆಯಲ್ಲಿ ಸಂವಹನ ಮಾಡುತ್ತಿಲ್ಲ. ಆದರೆ, ಹಿಂದಿಯಲ್ಲಿ ಮಾತನಾಡುತ್ತಿದ್ದೀರಿ ಮತ್ತು ನೀವು ಚೆನ್ನಾಗಿ ಇಂಗ್ಲಿಷ್ ಮಾತನಾಡುತ್ತಿದ್ದೀರಿ. ಇದಕ್ಕೆ ನಿಮಗೆ ತರಬೇತಿ ನೀಡಿದವರು ಯಾರು?, ನೀವು ಭಾರತದ ಜನರೊಂದಿಗೆ ಬೆರೆಯಲು ಅಲ್ಲಿ ಶುದ್ಧ ಹಿಂದಿಯಲ್ಲಿ ಮಾತನಾಡಲು ಹೇಳಲಾಗಿದೆಯೇ?. ನಿರಾಶ್ರಿತರು, ವಿಪತ್ತು ಮುಂತಾದ ಪದಗಳನ್ನು ನೀವು ಅತ್ಯಂತ ಶುದ್ಧವಾಗಿ ಮಾತನಾಡುತ್ತೀರಿ ಎಂದು ನಾವು ಕೇಳಿದ್ದೇವೆ.
ಸೀಮಾ: ಯಾರೂ ನನಗೆ ಕಲಿಸಿಲ್ಲ. ನಾನು ಇಲ್ಲಿಗೆ ಬಂದಿರುವುದು ನನ್ನ ಪ್ರೀತಿಗಾಗಿ ಎಂದು ಅನೇಕ ಸಂದರ್ಭಗಳಲ್ಲಿ ಹೇಳಿದ್ದೇನೆ. ಯಾರೂ ನನಗೆ ತರಬೇತಿ ನೀಡಿಲ್ಲ ಅಥವಾ ನನ್ನನ್ನು ಕಳುಹಿಸಿಲ್ಲ. ಸಚಿನ್ ಜೊತೆ ಮಾತನಾಡುವಾಗ ಹಿಂದಿ ಕಲಿತಿದ್ದೇನೆ.
ಪ್ರಶ್ನೆ 6: ಸಚಿನ್ ಮೀನಾ ಅವರೇ ಹಿಂದಿ ಸರಿಯಾಗಿ ಮಾತನಾಡುವುದಿಲ್ಲ. ಅವರ ಭಾಷೆಯಲ್ಲಿ ಪಶ್ಚಿಮ ಉತ್ತರ ಪ್ರದೇಶದ ಸ್ಪರ್ಶವಿದೆ. ನೀವು ಮಾತನಾಡುತ್ತಿರುವುದು ತರಬೇತಿ ಪಡೆದ ವ್ಯಕ್ತಿಯಂತೆ ಇದು ಹೇಗೆ ಸಾಧ್ಯ?