ನೋಯ್ದಾ (ಉತ್ತರ ಪ್ರದೇಶ):ಆನ್ಲೈನ್ ಗೇಮ್ನಲ್ಲಿ ಪರಿಚಯವಾದ ಗೆಳೆಯನಿಗಾಗಿ ಭಾರತಕ್ಕೆ ಅಕ್ರಮವಾಗಿ ಪ್ರವೇಶಿಸಿರುವ ಪಾಕಿಸ್ತಾನದ ಪ್ರಜೆ ಸೀಮಾ ಹೈದರ್ ಮಂಗಳವಾರ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಹಾಗೂ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್ಎಸ್ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಅವರಿಗೆ ರಾಖಿಗಳನ್ನು ರವಾನಿಸಿದ್ದಾರೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೂ ಸೀಮಾ ರಾಖಿಗಳ ಪೋಸ್ಟ್ ಮಾಡಿದ್ದಾರೆ.
ಇದನ್ನೂ ಓದಿ:ಅಕ್ರಮವಾಗಿ ಭಾರತಕ್ಕೆ ಬಂದ ಸೀಮಾ ಹೈದರ್ಗೆ ಸಿನಿಮಾ ಚಾನ್ಸ್.. ಬಾಲಿವುಡ್ ಚಿತ್ರದಲ್ಲಿ 'ರಾ' ಏಜೆಂಟ್ ಪಾತ್ರ?
ಸಹೋದರ ಹಾಗೂ ಸಹೋದರಿಯರ ಮಧುರ ಬಾಂಧವ್ಯದ ಸಂಕೇತವಾದ ರಕ್ಷಾ ಬಂಧನ ಹಬ್ಬವನ್ನು ಆಗಸ್ಟ್ 30ರಂದು ಭಾರತದಾದ್ಯಂತ ಆಚರಿಸಲಾಗುತ್ತದೆ. ಅಲಂಕಾರಿಕ ಮಣಿಗಳು ಹಾಗೂ ದಾರದಿಂದ ತಯಾರಿಸಿದ ರಾಖಿಗಳನ್ನು ಸಹೋದರರ ಕೈಗೆ ಕಟ್ಟುವ ಮೂಲಕ ಸಹೋದರಿಯರು ವಿಶೇಷ ಹಬ್ಬ ಆಚರಿಸುತ್ತಾರೆ. ಈ ರಾಖಿ ಹಬ್ಬ ರಕ್ಷಣೆಯ ಸಂಕೇತವನ್ನು ಬಿಂಬಿಸುತ್ತವೆ. ಇದರ ನಡುವೆ ಪ್ರಧಾನಿ ಮೋದಿ ಸೇರಿ ಪ್ರಮುಖರಿಗೆ ಕಳುಹಿಸುವ ನಿಟ್ಟಿಬಲ್ಲಿ ಪಾಕಿಸ್ತಾನಿ ಪ್ರಜೆಯಾದ 30 ವರ್ಷದ ಸೀಮಾ ಹೈದರ್ ರಾಖಿಗಳನ್ನು ಪ್ಯಾಕ್ ಮಾಡುತ್ತಿರುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
''ದೇಶದ ಜವಾಬ್ದಾರಿಯನ್ನು ಹೆಗಲ ಮೇಲೆ ವಹಿಸಿಕೊಂಡಿರುವ ನನ್ನ ಆತ್ಮೀಯ ಸಹೋದರರಿಗೆ ಸರಿಯಾದ ಸಮಯಕ್ಕೆ ತಲುಪಿಸುವ ನಿಟ್ಟಿನಲ್ಲಿ ರಾಖಿಗಳನ್ನು ಮುಂಚಿತವಾಗಿ ಪೋಸ್ಟ್ ಮಾಡುತ್ತಿದ್ದೇನೆ. ನನಗೆ ತುಂಬಾ ಸಂತೋಷವಾಗಿದೆ. ಜೈ ಶ್ರೀರಾಮ್, ಜೈ ಹಿಂದ್, ಹಿಂದೂಸ್ಥಾನ್ ಜಿಂದಾಬಾದ್'' ಎಂದು ಸೀಮಾ ವಿಡಿಯೋವೊಂದರಲ್ಲಿ ಹೇಳಿದ್ದಾರೆ. ಅಲ್ಲದೇ, ಸೀಮಾ ತಮ್ಮ ಮಕ್ಕಳೊಂದಿಗೆ ಸೇರಿಕೊಂಡು ರಾಖಿಗಳನ್ನು ಫ್ಯಾಕ್ ಮಾಡುತ್ತಿದ್ದು, ಹಿನ್ನೆಲೆಯಲ್ಲಿ ''ಭಾಯ್ ಮೇರೆ ರಾಖಿ ಕೇ ಬಂಧನ್ ಕೋ ನಿಭಾನಾ.." (ಸಹೋದರ ನನ್ನ ರಾಖಿಯ ಬಂಧವನ್ನು ಪೂರೈಸು..) ಎಂಬ ಹಿಂದಿ ಹಾಡು ಕೇಳುತ್ತಿರುವ ಮತ್ತೊಂದು ವಿಡಿಯೋ ಸಹ ಹರಿದಾಡುತ್ತಿದೆ.