ನವದೆಹಲಿ/ ಗ್ರೇಟರ್ ನೋಯ್ಡಾ:ತನ್ನ ಪ್ರಿಯಕರನಿಗಾಗಿ ಪಾಕಿಸ್ತಾನದ ಕರಾಚಿಯಿಂದ ಭಾರತಕ್ಕೆ ಬಂದಿರುವ ಸೀಮಾ ಹೈದರ್ 'ಹರ್ಘರ್ ತಿರಂಗಾ' ಅಭಿಯಾನದಲ್ಲಿ ಪಾಲ್ಗೊಂಡು, ಭಾರತ ಜಿಂದಾಬಾದ್, ಪಾಕಿಸ್ತಾನ ಮುರ್ದಾಬಾದ್ ಎಂದು ಘೋಷಣೆ ಕೂಗಿದ್ದಾರೆ. ಕುಟುಂಬ ಸಮೇತರಾಗಿ ಮನೆಯ ಮೇಲೆ ತ್ರಿವರ್ಣ ಧ್ವಜಾರೋಹಣದಲ್ಲಿ ಪಾಲ್ಗೊಂಡಿದ್ದಾರೆ. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಸೀಮಾ ಹೈದರ್ ಮತ್ತು ಪ್ರಿಯಕರ ಸಚಿನ್ ಮೀನಾ ಅವರ ಪರವಾಗಿ ಕೋರ್ಟ್ನಲ್ಲಿ ವಾದ ಮಂಡಿಸುತ್ತಿರುವ ವಕೀಲ ಎಪಿ ಸಿಂಗ್ ಅವರನ್ನು ಗ್ರೇಟರ್ ನೋಯ್ಡಾದಲ್ಲಿ ಭೇಟಿ ಮಾಡಲು ಬಂದಿದ್ದರು. ಈ ವೇಳೆ ಎಲ್ಲರೂ ಸೇರಿ ಮನೆಯ ಮೇಲೆ ಹರ್ಘರ್ ತಿರಂಗಾ ಅಭಿಯಾನದ ಭಾಗವಾಗಿ ತ್ರಿವರ್ಣ ಧ್ವಜವನ್ನು ಹಾರಿಸಿದರು. ಈ ವೇಳೆ ಸೀಮಾ ಗುಲಾಂ ಹೈದರ್, ಭಾರತ್ ಮಾತಾ ಕೀ ಜೈ ಮತ್ತು ವಂದೇ ಮಾತರಂ ಘೋಷಣೆಗಳನ್ನು ಕೂಗಿದರು. ಇದರ ಜೊತೆಗೆ ಪಾಕಿಸ್ತಾನ ಮುರ್ದಾಬಾದ್ ಎಂದೂ ಹೇಳಿದ್ದಾರೆ. ಇದನ್ನು ವಿಡಿಯೋದಲ್ಲಿ ಕಾಣಬಹುದು.
ತ್ರಿವರ್ಣ ಧ್ವಜ ಹಿಡಿದ ಸೀಮಾ:ಭಾರತ ಸರ್ಕಾರ ಕರೆ ನೀಡಿರುವ ತ್ರಿವರ್ಣ ಧ್ವಜ ಅಭಿಯಾನವನ್ನು ಬೆಂಬಲಿಸುವುದಾಗಿ ಹೇಳಿರುವ ಸೀಮಾ ಹೈದರ್, ಅಭಿಯಾನದ ಅಂಗವಾಗಿ ತಮ್ಮ ಮನೆಯ ಛಾವಣಿಯ ಮೇಲೆ ಧ್ವಜವನ್ನು ಹಾರಿಸಿದ್ದಾರೆ. ಈ ವೇಳೆ ಅವರು ತ್ರಿವರ್ಣಗಳ ಸೀರೆಯನ್ನು ಧರಿಸಿದ್ದರು. ತಲೆಗೆ ಜೈ ಮಾತಾ ಎಂಬ ಬರೆದ ಪಟ್ಟಿಯನ್ನು ಕಟ್ಟಿಕೊಂಡಿದ್ದರು. ಕೊರಳಿಗೆ ತ್ರಿವರ್ಣ ಧ್ವಜ ಬಟ್ಟೆಯನ್ನು ಸುತ್ತಿಕೊಂಡಿದ್ದರು. ಕೈಯಲ್ಲೂ ಧ್ವಜ ಹಿಡಿದುಕೊಂಡಿದ್ದರು.