ನವದೆಹಲಿ:ದೇಶದ್ರೋಹಕ್ಕೆ ಸಂಬಂಧಿಸಿದ ಸೆಕ್ಷನ್ 124 ಎ ಸಿಂಧುತ್ವದ ಕುರಿತಂತೆ ಕೇಂದ್ರ ಸರ್ಕಾರ ನಿಲುವು ಬದಲಿಸಿದ ಬೆನ್ನಲ್ಲೇ ಸುಪ್ರೀಂಕೋರ್ಟ್ ಈ ಸಂಬಂಧ ಸಲ್ಲಿಕೆಯಾಗಿರುವ ಅರ್ಜಿಯ ವಿಚಾರಣೆಯನ್ನ ಮುಂದುವರೆಸಿದೆ. ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್‌ವಿ ರಮಣ, ನ್ಯಾ. ಸೂರ್ಯ ಕಾಂತ್ ಮತ್ತು ನ್ಯಾ ಹಿಮಾ ಕೊಹ್ಲಿ ಅವರನ್ನೊಳಗೊಂಡ ಪೀಠವು 124 ಎ ಕಾನೂನು ಮರು ಪರಿಶೀಲನೆ ಅರ್ಜಿ ವಿಚಾರಣೆ ನಡೆಸುತ್ತಿದೆ.
ಇಂದು ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್ ನಾಳೆಯೊಳಗೆ ಕಾನೂನು ಮರುಪರಿಶೀಲನೆ ಬಗ್ಗೆ ಪ್ರತಿಕ್ರಿಯೆ ನೀಡುವಂತೆ ಕೇಂದ್ರ ಸರ್ಕಾರವನ್ನು ಕೇಳಿದೆ. ಇದೇ ವೇಳೆ, ಕಾನೂನು ಮರುಪರಿಶೀಲನೆ ಪ್ರಕ್ರಿಯೆ ಪೂರ್ಣಗೊಳ್ಳಲು ಎಷ್ಟು ಸಮಯ ತೆಗೆದುಕೊಳ್ಳುತ್ತದೆ ಎಂದು ಭಾರತದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರನ್ನು ಪೀಠ ಪ್ರಶ್ನಿಸಿತು. ವಾದ ಮಂಡನೆ ಮಾಡಿದ ಸಾಲಿಸಿಟರ್ ಜನರಲ್, ನನಗೆ ನಿಖರವಾದ ಉತ್ತರವನ್ನು ನೀಡಲು ಸಾಧ್ಯವಾಗುತ್ತಿಲ್ಲ, ಪ್ರಕ್ರಿಯೆ ಪ್ರಾರಂಭವಾಗಿದೆ ಎಂದರು. ಆದರೆ ಇದೇ ವೇಳೆ ಅಭಿಪ್ರಾಯ ವ್ಯಕ್ತಪಡಿಸಿದ ಪೀಠ ಕಾನೂನು ದುರ್ಬಳಕೆ ಆಗುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿತು.
ನಾವು ಸ್ಪಷ್ಟವಾಗಿ ಹೇಳುತ್ತಿದ್ದೇವೆ. ನಮಗೆ ಸೂಚನೆಗಳು ಬೇಕಾಗಿವೆ. ನಾವು ನಿಮಗೆ ನಾಳೆಯವರೆಗೆ ಸಮಯ ನೀಡುತ್ತೇವೆ. ನಮ್ಮ ಕಾಳಜಿ ಇರುವುದು ಬಾಕಿ ಉಳಿದಿರುವ ಪ್ರಕರಣಗಳು ಮತ್ತು ಮುಂದಿನ ಪ್ರಕರಣಗಳನ್ನು ಸರ್ಕಾರ ಹೇಗೆ ನೋಡಿಕೊಳ್ಳುತ್ತದೆ ಎಂಬುದಾಗಿದೆ ಎಂದಿದೆ. ನೀವು ಕಾನೂನು ಮರು ಪರಿಶೀಲಿಸಿ ಮೂರ್ನಾಲ್ಕು ತಿಂಗಳು ಬೇಕಾಗಬಹುದೇ ಎಂದು ಪ್ರಶ್ನಿಸಿದ ನ್ಯಾಯಾಧೀಶರು ಕೇಂದ್ರ ಸರ್ಕಾರವಾಗಿ ನೀವು (ಕಾನೂನು ಮರುಪರಿಶೀಲನೆಗೆ) ಮನಸ್ಸು ಮಾಡುತ್ತಿರುವುದರಿಂದ ದೇಶದ್ರೋಹ ಕಾನೂನಿನಡಿ ಕ್ರಮ ಕೈಗೊಳ್ಳಬೇಡಿ ಎಂದು ರಾಜ್ಯಗಳಿಗೆ ಏಕೆ ಸೂಚಿಸುವುದಿಲ್ಲ? ಎಂದರು. ಈ ಕಾನೂನಿನಡಿ ಬಾಕಿ ಉಳಿದಿರುವ ಪ್ರಕರಣಗಳ ಬಗ್ಗೆ ತಿಳಿಸಲು ಮತ್ತು ಕಾನೂನನ್ನು ಮರುಪರಿಶೀಲಿಸುವವರೆಗೆ ನಾಗರಿಕರ ಹಿತಾಸಕ್ತಿಗಳನ್ನು ರಕ್ಷಿಸುವಂತೆ ಪೀಠ ಕೇಂದ್ರ ಸರ್ಕಾವನ್ನು ಕೇಳಿದೆ.