ಮುಂಬೈ: ಟ್ಯಾಕ್ಸಿಯಲ್ಲಿ ಕುಳಿತಿದ್ದ ಇಬ್ಬರು ವ್ಯಕ್ತಿಗಳು ಮುಕೇಶ್ ಅಂಬಾನಿ ಅವರ ನಿವಾಸದ ವಿಳಾಸ ಕೇಳಿದ್ದಾರೆ ಎಂದು ಕಾರು ಚಾಲಕನೆೋರ್ವ ಮುಂಬೈ ಪೊಲೀಸರಿಗೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಏಷ್ಯಾದ ನಂಬರ್ ಒನ್ ಶ್ರೀಮಂತ, ಉದ್ಯಮಿ ಮುಕೇಶ್ ಅಂಬಾನಿ ಅವರ ನಿವಾಸ ಆಂಟಿಲಿಯಾ ಹೊರಗೆ ಭದ್ರತೆ ಹೆಚ್ಚಿಸಲಾಗಿದೆ.
ವಿವರ:
ಪ್ರವಾಸಿ ಟ್ಯಾಕ್ಸಿಯಲ್ಲಿ ಕುಳಿತಿದ್ದ ಇಬ್ಬರು ಪ್ರಯಾಣಿಕರು ಮುಂಬೈನಲ್ಲಿರುವ ಮುಖೇಶ್ ಅಂಬಾನಿ ಅವರ ಐಷಾರಾಮಿ ಮನೆಯ ವಿಳಾಸವನ್ನು ಕೇಳಿದ್ದಾರೆ ಎಂದು ಟ್ಯಾಕ್ಸಿ ಡ್ರೈವರ್ ಕಂಟ್ರೋಲ್ ರೂಂಗೆ ಕರೆ ಮಾಡಿ ಹೇಳಿದ್ದಾನೆ. ಪ್ರಯಾಣಿಕರು ಬ್ಯಾಗ್ ಹೊತ್ತೊಯ್ದಿದ್ದರು ಎಂದೂ ಚಾಲಕ ಪೊಲೀಸರಿಗೆ ತಿಳಿಸಿದ್ದಾನೆ ಎನ್ನಲಾಗಿದೆ.
ಈ ಸಂಬಂಧ ಪ್ರತಿಕ್ರಿಯಿಸಿರುವ ಮುಂಬೈ ಪೊಲೀಸರು, ಪ್ರಕರಣದ ಸತ್ಯಾಸತ್ಯತೆಗಳನ್ನು ಪರಿಶೀಲಿಸುತ್ತಿದ್ದೇವೆ. ಇಬ್ಬರು ಪ್ರಯಾಣಿಕರನ್ನು ಹುಡುಕಲು ನಗರದ ವಿವಿಧ ಮಾರ್ಗಗಳಲ್ಲಿ ಬ್ಯಾರಿಕೇಡ್‌ಗಳನ್ನು ಹಾಕಲಾಗಿದೆ ಎಂದು ಹೇಳಿದ್ದಾರೆ.
ಈ ವರ್ಷದ ಫೆಬ್ರವರಿ 25 ರಂದು ಮುಂಬೈನ ಆಂಟಿಲಿಯಾ ಬಳಿ ನಿಲ್ಲಿಸಿದ್ದ ಸ್ಕಾರ್ಪಿಯೋದಲ್ಲಿ ಜಿಲೆಟಿನ್ ಕಡ್ಡಿಗಳು ಪತ್ತೆಯಾದ ನಂತರ ಆಂಟಿಲಿಯಾ ಹೆಚ್ಚು ಸುದ್ದಿಯಲ್ಲಿದೆ. ಅಂಬಾನಿ ಕುಟುಂಬದ ಒಡೆತನದ ವಾಹನದ ನಂಬರ್ ಪ್ಲೇಟ್‌ನೊಂದಿಗೆ ಜಿಲೆಟಿನ್ ಕಡ್ಡಿಗಳು ತುಂಬಿದ್ದ ಕಾರು ಹಾಗೂ ಅದರಲ್ಲಿದ್ದ ಬೆದರಿಕೆ ಪತ್ರವನ್ನು ಪೊಲೀಸರು ವಶಪಡಿಸಿಕೊಂಡಿದ್ದರು. ಇದೇ ಪ್ರಕರಣದ ಆರೋಪದಲ್ಲಿ ಅಮಾನತುಗೊಂಡಿದ್ದ ಎಎಸ್‌ಐ ಸಚಿನ್ ವಾಜೆ ಅವರನ್ನು ರಾಷ್ಟ್ರೀಯ ತನಿಖಾ ದಳ-ಎನ್‌ಐಎ ಬಂಧಿಸಿತ್ತು.
ಅಂಬಾನಿ ಕುಟುಂಬವು ಲಂಡನ್‌ನ ಸ್ಟೋಕ್ ಪಾರ್ಕ್‌ನಲ್ಲಿ ವಾಸಿಸುವ ಯೋಜನೆ ಹಾಕಿಕೊಂಡಿದೆ ಎಂಬ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗುತ್ತಿದೆ. ಇದಕ್ಕೆ ಯಾವುದೇ ಆಧಾರವಿಲ್ಲವೆಂದು ಪ್ರಕಟಣೆ ಮೂಲಕ ಅಂಬಾನಿ ಕುಟುಂಬ ಸ್ಪಷ್ಟನೆ ನೀಡಿತ್ತು.
ಇದನ್ನೂ ಓದಿ:ಭಾರತ ಬಿಟ್ಟು ಪ್ರಪಂಚದ ಬೇರೆಲ್ಲಿಯೂ ನಾವು ಶಿಫ್ಟ್ ಆಗುವುದಿಲ್ಲ ಎಂದ ಅಂಬಾನಿ