ಚೆನ್ನೈ:ತಮಿಳು ನಾಡಿನ ಗಾಂಧಿಗ್ರಾಮ ಗ್ರಾಮೀಣ ವಿಶ್ವವಿದ್ಯಾಯಲಯದಲ್ಲಿ ಇಂದು ಘಟಿಕೋತ್ಸವ ಕಾರ್ಯಕ್ರಮ ನಡೆಯಲಿದ್ದು, ಈ ಸಮಾರಂಭಕ್ಕೆ ಪ್ರಧಾನಿ ನರೇಂದ್ರ ಮೋದಿ ಆಗಮಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ತಮಿಳುನಾಡು ಪೊಲೀಸರು ರಾಜ್ಯದ ಮಧುರೈ ಮತ್ತು ದಿಂಡಿಗಲ್ ಜಿಲ್ಲೆಗಳಲ್ಲಿ ಬಿಗಿ ಭದ್ರತೆ ಕೈಗೊಂಡಿದ್ದಾರೆ.
ಬೆಂಗಳೂರಿನಿಂದ ಹೊರಟ ಪ್ರಧಾನಿ ಮೋದಿ ಮಧ್ಯಾಹ್ನ ಮಧುರೈ ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದು, ಅಲ್ಲಿಂದ ಹೆಲಿಕಾಪ್ಟರ್ ಮೂಲಕ ಗಾಂಧಿಗ್ರಾಮ ವಿಶ್ವವಿದ್ಯಾಲಯದ ಘಟಿಕೋತ್ಸವಕ್ಕೆ ತಲುಪಲಿದ್ದಾರೆ. ಆದರೆ, ಈ ಪ್ರದೇಶದಲ್ಲಿ ಭಾರಿ ಮಳೆಯಾಗಲಿದೆ ಎಂದು ಐಎಂಡಿ ಮುನ್ಸೂಚನೆ ನೀಡಿದ್ದು, ಪ್ರಧಾನಿಗಳ ಭೇಟಿಗಾಗಿ ಪೊಲೀಸರು ಬ್ಯಾಕಪ್ ಯೋಜನೆಯೊಂದಿಗೆ ಮಧುರೈ ವಿಮಾನ ನಿಲ್ದಾಣದಿಂದ ಗಾಂಧಿಗ್ರಾಮ ಗ್ರಾಮಾಂತರ ವಿಶ್ವವಿದ್ಯಾಲಯದವರೆಗೆ ಎಂಟು ಕಾರುಗಳ ಭದ್ರತಾ ಕಣ್ಗಾವಲು ವ್ಯವಸ್ಥೆ ಮಾಡಿದ್ದಾರೆ.
ಇಳಯರಾಜ ಮತ್ತು ಉಮಯಾಲಪುರಂ ಶಿವರಾಮನ್ ಅವರಿಗೆ ಗೌರವ ಡಾಕ್ಟರೇಟ್ :ಘಟಿಕೋತ್ಸವ ಸಮಾರಂಭದಲ್ಲಿ ತಮಿಳುನಾಡು ರಾಜ್ಯಪಾಲ ಆರ್.ಎನ್. ರವಿ ಹಾಗೂ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಕೂಡ ಉಪಸ್ಥಿತರಿರಲಿದ್ದಾರೆ. ಗಾಂಧಿಗ್ರಾಮ್ ವಿಶ್ವವಿದ್ಯಾನಿಲಯವು ಖ್ಯಾತ ಸಂಗೀತ ವಿದ್ವಾಂಸರಾದ ಇಳಯರಾಜ ಮತ್ತು ಉಮಯಾಲಪುರಂ ಶಿವರಾಮನ್ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಿದ್ದಾರೆ.