ಚಂಡೀಗಢ (ಪಂಜಾಬ್):ಮಾಜಿ ಕ್ರಿಕೆಟಿಗ, ಪಂಜಾಬ್ ಕಾಂಗ್ರೆಸ್ನ ಮಾಜಿ ಅಧ್ಯಕ್ಷ ನವಜೋತ್ ಸಿಂಗ್ ಸಿಧು ಜೈಲಿನಿಂದ ಬಿಡುಗಡೆಯಾಗಿದ್ದಾರೆ. 34 ವರ್ಷದ ಹಿಂದಿನ ರೋಡ್ ರೇಜ್ ಪ್ರಕರಣದಲ್ಲಿ ಒಂದು ವರ್ಷ ಜೈಲು ಶಿಕ್ಷೆಗೆ ಗುರಿಯಾಗಿದ್ದ ಸಿಧು ಕಳೆದ ಮೇ ತಿಂಗಳಿಂದ ಜೈಲಿನಲ್ಲಿದ್ದಾರೆ. ಇಂದು ಪಟಿಯಾಲ ಸೆಂಟ್ರಲ್ ಜೈಲಿನಿಂದ ಬಿಡುಗಡೆಯಾಗಿ ಹೊರ ಬಂದಿದ್ದಾರೆ.
ಸಿಧು ಜೈಲಿನಿಂದ ಬಿಡುಗಡೆ ಹಿನ್ನೆಲೆಯಲ್ಲಿ ಅಭಿಮಾನಿಗಳು ಮತ್ತು ಬೆಂಬಲಿಗರು ಸ್ವಾಗತಿಸಲು ಜೈಲಿನ ಮುಂದೆ ಬೆಳಗ್ಗೆಯಿಂದಲೇ ನೆರೆದಿದ್ದರು. ಹೊರ ಬರುತ್ತಿದ್ದಂತೆ ಸಿಧು ತಮ್ಮ ಬೆಂಬಲಿಗರತ್ತ ಕೈ ಜೋಡಿ ನಮಸ್ಕಾರ ಮಾಡಿದರು. ಮತ್ತೊಂದೆಡೆ, ಇದಕ್ಕೂ ಮುನ್ನವೇ ರಾಜ್ಯ ಸರ್ಕಾರ ನವಜೋತ್ ಸಿಂಗ್ ಸಿಧು ಭದ್ರತೆಯನ್ನು ಝೆಡ್ ಪ್ಲಸ್ನಿಂದ ವೈ ಶ್ರೇಣಿಗೆ ಕಡಿತಗೊಳಿಸಿ ಶಾಕ್ ನೀಡಿದೆ.
ಇದೇ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ನವಜೋತ್ ಸಿಂಗ್ ಸಿಧು, ಸದ್ಯಕ್ಕೆ ಪ್ರಜಾಪ್ರಭುತ್ವ ಎಂಬುದೇ ಇಲ್ಲ. ಪಂಜಾಬ್‌ನಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿ ಮಾಡುವ ಪಯತ್ನ ನಡೆಯುತ್ತಿದೆ. ಅಲ್ಪಸಂಖ್ಯಾತರನ್ನು ಗುರಿಯಾಗಿಸಲಾಗುತ್ತಿದೆ. ಪಂಜಾಬ್ ರಾಜ್ಯವನ್ನು ದುರ್ಬಲಗೊಳಿಸಲು ಪ್ರಯತ್ನಿಸಿದರೆ, ನೀವೇ ದುರ್ಬಲರಾಗುತ್ತೀರಿ ಎಂದು ವಿರೋಧಿಗಳಿಗೆ ಎಚ್ಚರಿಸಿದರು.
ಇದನ್ನೂ ಓದಿ:ಭಾವುಕರಾಗಿ ಟ್ವೀಟ್ ಮಾಡಿದ ಸ್ತನ ಕ್ಯಾನ್ಸರ್ನಿಂದ ಬಳಲುತ್ತಿರುವ ನವಜೋತ್ ಸಿಧು ಪತ್ನಿ..
ಜೈಲು ರಾಜಕೀಯ ಪ್ರೇರಿತ ಎಂದಿದ್ದ ಪತ್ನಿ:ಕೆಲ ದಿನಗಳ ಹಿಂದೆ ನವಜೋತ್ ಸಿಂಗ್ ಸಿಧು ಅವರ ಪತ್ನಿ ನವಜೋತ್ ಕೌರ್ ಸುದ್ದಿಗಾರರೊಂದಿಗೆ ಮಾತನಾಡಿ, ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಮತ್ತು ಹಾಲಿ ಮುಖ್ಯಮಂತ್ರಿ ಭಗವಂತ್ ಮಾನ್ ವಿರುದ್ಧ ಗಂಭೀರ ಆರೋಪ ಮಾಡಿದ್ದರು. ಯಾವುದೇ ಅಪರಾಧ ಮಾಡದ ತನ್ನ ಪತಿಯನ್ನು ಬಂಧಿಸಲಾಗಿದೆ. ಪತಿಯನ್ನು ಜೈಲಿಗಟ್ಟಿರುವುದು ಸಂಪೂರ್ಣ ರಾಜಕೀಯ ಪ್ರೇರಿತವಾಗಿದೆ ಎಂದು ದೂರಿದ್ದರು.
ಅಲ್ಲದೇ, ಸಿಧು ನಿರಪರಾಧಿ ಎಂದು ಸಾಬೀತುಪಡಿಸುವ ಪೆನ್ಡ್ರೈವ್ಅನ್ನು ನಾನು ಸಿಎಂಗೆ ಸಲ್ಲಿಸಿದ್ದೆ. ಆದರೆ, ಸಿಎಂ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದೂ ಪತ್ನಿ ನವಜೋತ್ ಕೌರ್ ಆರೋಪಿಸಿದ್ದರು. ಇನ್ನು, ಕ್ಯಾನ್ಸರ್‌ನಿಂದಾಗಿ ಬಳಲುತ್ತಿರುವ ಸಿಧು ಪತ್ನಿ ಕಳೆದ ಕೆಲವು ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನೊಂದೆಡೆ, ಪಂಜಾಬ್ ರಾಜಕೀಯದಲ್ಲಿ ನವಜೋತ್ ಸಿಂಗ್ ಸಿಧು ಪ್ರಬಲ ವ್ಯಕ್ತಿಯಾಗಿದ್ದಾರೆ. 2004ರಿಂದ 2016ರವರೆಗೆ ಬಿಜೆಪಿಯಲ್ಲಿದ್ದ ಅವರು, ಮೂರು ಬಾರಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದ್ದರು. ನಂತರ 2017ರಲ್ಲಿ ಕಾಂಗ್ರೆಸ್‌ಗೆ ಸೇರ್ಪಡೆಯಾಗಿದ್ದರು.
ಸಿಧು ರೋಡ್ ರೇಜ್ ಕೇಸ್ ಹಿನ್ನೆಲೆ:1988ರಲ್ಲಿ ಪಾರ್ಕಿಂಗ್ ವಿಷಯವಾಗಿ ನವಜೋತ್ ಸಿಂಗ್ ಸಿಧು ಹಾಗೂ ಮತ್ತೊಬ್ಬ ವ್ಯಕ್ತಿ ನಡುವೆ ಗಲಾಟೆ ನಡೆದಿತ್ತು. ಈ ವೇಳೆ ಸಿಧು ಜಗಳವಾಡಿದ್ದ ವ್ಯಕ್ತಿ ಸಾವನ್ನಪ್ಪಿದರು. ಈ ಸಾವಿಗೆ ಹೃದಯಾಘಾತ ಕಾರಣ ಎಂದು ಹೇಳಲಾಗಿದ್ದರೂ, ಗಲಾಟೆ ವೇಳೆ ತೀವ್ರವಾಗಿ ಆ ವ್ಯಕ್ತಿಗೆ ಗಾಯಗಳಾಗಿದ್ದವು ಎನ್ನಲಾಗಿತ್ತು. ಈ ಪ್ರಕರಣವನ್ನು ಆರಂಭದಲ್ಲಿ ಸೆಷನ್ಸ್ ನ್ಯಾಯಾಲಯ ವಜಾಗೊಳಿಸಿತ್ತು. ಆದರೆ, ನಂತರ 2006ರ ಡಿಸೆಂಬರ್ನಲ್ಲಿ ಹೈಕೋರ್ಟ್ ಸಿದ್ದು ಮತ್ತು ಸಹಚರ ಸಂಧು ಎಂಬಾತನಿಗೆ ತಲಾ ಮೂರು ವರ್ಷಗಳ ಜೈಲು ಶಿಕ್ಷೆ ಮತ್ತು 1 ಲಕ್ಷ ರೂ. ದಂಡ ವಿಧಿಸಿತ್ತು.
ಈ ಘಟನೆ ನಡೆದಾಗ ಕ್ರಿಕೆಟಿಗರಾಗಿದ್ದ ಸಿಧು, ಹೈಕೋರ್ಟ್ ಶಿಕ್ಷೆ ಪ್ರಕಟಿಸುವ ಸಂದರ್ಭದಲ್ಲಿ ರಾಜಕೀಯ ಪ್ರವೇಶಿಸಿದ್ದರು. ಇದಾದ ನಂತರ ಹೈಕೋರ್ಟ್ ಆದೇಶವನ್ನು ಸಿಧು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು. ಇದರ ಮಧ್ಯೆ ಸಿಧು ದೋಷಿ ಎಂದು ಸಾಬೀತಾದ ಹಿನ್ನೆಲೆಯಲ್ಲಿ ಲೋಕಸಭೆ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇದರ ನಂತರ 2018ರಲ್ಲಿ ಸುಪ್ರೀಂ ಕೋರ್ಟ್ ಸಿಧುರನ್ನು ಸೆಕ್ಷನ್ 323ರ ಅಡಿಯಲ್ಲಿ ತಪ್ಪಿತಸ್ಥ ಎಂದು ಘೋಷಿಸಿ, ಸಾವಿಗೆ ಸಂಬಂಧಿಸಿದಂತೆ 304ರಡಿ ತಪ್ಪಿತಸ್ಥರಲ್ಲ ಎಂದು ತೀರ್ಪು ನೀಡಿತ್ತು. ಹೀಗಾಗಿ ದಂಡ ವಿಧಿಸಿ ಬಿಡುಗಡೆ ಮಾಡಲಾಗಿತ್ತು. ಆದಾಗ್ಯೂ, ಅದೇ 2018ರಲ್ಲಿ ಈ ತೀರ್ಪಿನ ವಿರುದ್ಧ ಸಲ್ಲಿಸಲಾದ ಮರುಪರಿಶೀಲನಾ ಅರ್ಜಿಯನ್ನು ಆಲಿಸಲು ಸುಪ್ರೀಂಕೋರ್ಟ್ ಒಪ್ಪಿಕೊಂಡಿತ್ತು. ಇದಾದ ನಂತರ 2022ರಂದು ಮೇ ತಿಂಗಳಲ್ಲಿ ಸುಪ್ರೀಂ ತನ್ನ ಈ ಹಿಂದಿನ ತೀರ್ಪಿಗೆ ತಡೆ ನೀಡುವ ಮೂಲಕ ಸಿಧುವಿಗೆ ಒಂದು ವರ್ಷ ಜೈಲು ಕಾಯಂ ಮಾಡಿತ್ತು.
ಇದನ್ನೂ ಓದಿ:ನವಜೋತ್ ಸಿಂಗ್ ಸಿಧುಗೆ ದೊರೆಯದ ಬಿಡುಗಡೆ ಭಾಗ್ಯ: ಸಿಟ್ಟಿಗೆದ್ದ ಪತ್ನಿಯ ಪ್ರತಿಕ್ರಿಯೆ ಹೇಗಿದೆ ಗೊತ್ತಾ?