ಮುಂಬೈ(ಮಹಾರಾಷ್ಟ್ರ):ಮುಂಬೈನ ಕೊಲಾಬಾದಲ್ಲಿರುವ ಛಾಬ್ರಾ ಹೌಸ್ ಮತ್ತೊಮ್ಮೆ ಉಗ್ರರ ಕೆಂಗಣ್ಣಿಗೆ ಗುರಿಯಾಗುವ ಸಾಧ್ಯತೆ ಇದೆ. ಏಕೆಂದರೆ ತನಿಖಾಧಿಕಾರಿಗಳು ಪುಣೆಯಲ್ಲಿ ಬಂಧಿತ ಉಗ್ರರೊಂದಿಗೆ ಕೊಲಾಬಾದಲ್ಲಿರುವ ತಾಜ್ ಹೋಟೆಲ್ ಬಳಿಯ ಛಾಬ್ರಾ ಹೌಸ್ ಫೋಟೋಗಳನ್ನು ಪತ್ತೆ ಮಾಡಿದ್ದಾರೆ.
ಬಂಧಿತ ಉಗ್ರರು ಮುಂಬೈಗೆ ಬಂದು ಛಾಬ್ರಾ ಹೌಸ್ ಮೇಲೆ ದಾಳಿ ನಡೆಸಬಹುದು ಎಂದು ಶಂಕಿಸಲಾಗಿದೆ. ಹೀಗಾಗಿ ಮುಂಬೈ ಪೊಲೀಸರು ಕೊಲಾಬಾದಲ್ಲಿರುವ ಛಾಬ್ರಾ ಹೌಸ್ ಸುತ್ತಮುತ್ತಲಿನ ಪ್ರದೇಶದಲ್ಲಿ ಭಯೋತ್ಪಾದನಾ ನಿಗ್ರಹ ದಳದ ನೆರವಿನೊಂದಿಗೆ ಭದ್ರತೆ ಹೆಚ್ಚಿಸಿದ್ದಾರೆ. ಛಾಬ್ರಾ ಹೌಸ್, ಮುಂಬೈನಲ್ಲಿ 26/11 ಭಯೋತ್ಪಾದಕ ದಾಳಿಯ ಸಮಯದಲ್ಲಿ ಪ್ರಮುಖ ಗುರಿಗಳಲ್ಲಿ ಒಂದಾಗಿತ್ತು. ಈ ಛಾಬ್ರಾ ಹೌಸ್‌ನ ಗೂಗಲ್ ಚಿತ್ರವನ್ನು ರಾಜಸ್ಥಾನದಲ್ಲಿ ದಾಳಿ ಮಾಡಲು ಯೋಜಿಸುತ್ತಿದ್ದ ಇಬ್ಬರು ಆರೋಪಿಗಳಿಂದ ವಶಪಡಿಸಿಕೊಳ್ಳಲಾಗಿದೆ.
ಮುಂಬೈ ಪೊಲೀಸರಿಗೆ ಸಿಕ್ಕ ಮಾಹಿತಿ ಮೇರೆಗೆ ಪೊಲೀಸರು ಕೊಲಾಬಾದಲ್ಲಿರುವ ಯಹೂದಿ ಸಮುದಾಯ ಕೇಂದ್ರದಲ್ಲಿ ಭದ್ರತೆ ಹೆಚ್ಚಿಸಿದ್ದಾರೆ. ಮಹಾರಾಷ್ಟ್ರದ ಭಯೋತ್ಪಾದನಾ ನಿಗ್ರಹ ದಳ ಕೆಲ ದಿನಗಳ ಹಿಂದೆ ಪುಣೆ ಪೊಲೀಸರಿಂದ ಮೊಹಮ್ಮದ್ ಇಮ್ರಾನ್ ಮೊಹಮ್ಮದ್ ಯೂನಸ್ ಖಾನ್ ಮತ್ತು ಮೊಹಮ್ಮದ್ ಯೂನಸ್ ಮೊಹಮ್ಮದ್ ಯಾಕೂಬ್ ಸಾಕಿಯನ್ನು ಬಂಧಿಸಿತ್ತು. ಈ ಪ್ರಕರಣದ ತನಿಖೆಯ ವೇಳೆ ಪೊಲೀಸರು ಆತನಿಂದ ಛಾಬ್ರಾ ಹೌಸ್‌ನ ಗೂಗಲ್ ಚಿತ್ರವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಮಹಾರಾಷ್ಟ್ರ ಎಟಿಎಸ್ ನೀಡಿದ ಮಾಹಿತಿಯ ಪ್ರಕಾರ, ಶಂಕಿತ ಆರೋಪಿಗಳಿಂದ ಕೊಲಾಬಾದಲ್ಲಿರುವ ಛಾಬ್ರಾ ಹೌಸ್‌ನ ಕೆಲವು ಗೂಗಲ್ ಫೋಟೋಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದಾದ ಬಳಿಕ ಛಾಬ್ರಾ ಹೌಸ್ ನ ಭದ್ರತೆಯನ್ನು ಹೆಚ್ಚಿಸಲಾಗಿದೆ. ಛಾಬ್ರಾ ಹೌಸ್ ಈಗಾಗಲೇ ಹೆಚ್ಚಿನ ಭದ್ರತೆಯನ್ನು ಹೊಂದಿದೆ. ಈ ಪ್ರದೇಶದಲ್ಲಿ ಅಣಕು ಡ್ರಿಲ್ ಕೂಡ ನಡೆಸಲಾಯಿತು ಎಂದು ಕೊಲಾಬಾ ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಮಹಾರಾಷ್ಟ್ರ ಎಟಿಎಸ್ ಮುಂಬೈ ಪೊಲೀಸರಿಗೆ ಮಾಹಿತಿ ನೀಡಿದ ನಂತರ, ಕಂಬಾರ್ ಕಸತ್‌ನಲ್ಲಿರುವ ಯಹೂದಿ ಸಮುದಾಯ ಕೇಂದ್ರವಾದ ಛಾಬ್ರಾ ಹೌಸ್‌ನ ಭದ್ರತೆ ತಕ್ಷಣವೇ ಹೆಚ್ಚಿಸಲಾಗಿದೆ. ಬಂಧಿತ ಆರೋಪಿಗಳಿಬ್ಬರೂ ರಾಜಸ್ಥಾನದ ರತ್ಲಾಮ್ ನಿವಾಸಿಗಳಾಗಿದ್ದು, ಪ್ರಸ್ತುತ ಮಹಾರಾಷ್ಟ್ರ ಎಟಿಎಸ್ ವಶದಲ್ಲಿದ್ದಾರೆ ಎಂದು ತಿಳಿದು ಬಂದಿದೆ. ಸದ್ಯ ಮುಂಬೈ ಪೊಲೀಸರು 50 ಪೊಲೀಸ್ ಕಾನ್ಸ್ಟೇಬಲ್ಗಳು ಮತ್ತು ಅಧಿಕಾರಿಗಳನ್ನು ಛಾಬ್ರಾ ಹೌಸ್ ಪ್ರದೇಶದಲ್ಲಿ ನಿಯೋಜಿಸಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಇದನ್ನೂ ಓದಿ:ಮಣಿಪುರದಲ್ಲಿ ಶಂಕಿತ ಕುಕಿ ಉಗ್ರರ ದಾಳಿ.. 15 ಮಂದಿಗೆ ಗಾಯ
ಸ್ಫೋಟಕ್ಕೆ ಸಂಚು-ಐವರು ಶಂಕಿತ ಉಗ್ರರ ಬಂಧನ: ಇತ್ತೀಚೆಗೆ ಬೆಂಗಳೂರಿನಲ್ಲಿ ಭಾರಿ ಸ್ಫೋಟಕ್ಕೆ ಯೋಜನೆ ರೂಪಿಸಿದ್ದ ಐವರು ಶಂಕಿತ ಉಗ್ರರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದರು. ದೇಶದ್ರೋಹಿ ಚಟುವಟಿಕೆಗಳಲ್ಲಿ ಭಾಗಿಯಾಗುತ್ತಿದ್ದ ಮಾಹಿತಿ ಮೇರೆಗೆ ನಗರದ ಸಿಸಿಬಿ ಪೊಲೀಸರು ಐವರು ಶಂಕಿತ ಉಗ್ರರನ್ನು ಬಂಧಿಸಿದ್ದರು. ಸುಹೇಲ್, ಉಮರ್, ಜಾಹಿದ್, ಮುದಾಸಿರ್ ಹಾಗೂ ಫೈಜರ್ ಬಂಧಿತರು. ಈ ಆರೋಪಿಗಳಿಂದ ಸ್ಪೋಟಕ ವಸ್ತುಗಳು, 4 ವಾಕಿಟಾಕಿ, 7 ಕಂಟ್ರಿ ಮೇಡ್ ಪಿಸ್ತೂಲ್, 42 ಸಜೀವ ಗುಂಡುಗಳು, ಮದ್ದುಗುಂಡು, 2 ಡ್ರ್ಯಾಗರ್, 2 ಸೆಟಲೈಟ್ ಫೋನ್ ಹಾಗೂ 4 ಗ್ರೆನೈಡ್ ಪತ್ತೆಯಾಗಿದ್ದು, ವಶಕ್ಕೆ ಪಡೆಯಲಾಗಿತ್ತು.
ಇದನ್ನೂ ಓದಿ:ಬೆಂಗಳೂರಿನಲ್ಲಿ ಭಾರಿ ಸ್ಫೋಟಕ್ಕೆ ಸಂಚು: ಐವರು ಶಂಕಿತ ಉಗ್ರರ ಬಂಧನ, ತನಿಖೆ ತೀವ್ರ