ಮುಂಬೈ(ಮಹಾರಾಷ್ಟ್ರ):ಮಕ್ಕಳಿಗೆ ರಕ್ಷಕರಾಗಿ ಇರಲಿ ಎಂದು ಶಾಲೆಯಲ್ಲಿ ಭದ್ರತಾ ಸಿಬ್ಬಂದಿಯನ್ನು ನೇಮಕ ಮಾಡಿರ್ತಾರೆ. ಬೇಲಿಯೇ ಎದ್ದು ಹೊಲ ಮೇಯ್ದಂತೆ, ಭದ್ರತಾ ಸಿಬ್ಬಂದಿಯೇ 15 ವರ್ಷದ ವಿದ್ಯಾರ್ಥಿನಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಈ ಬಗ್ಗೆ ದಾಖಲಾದ ದೂರಿನ ಮೇರೆಗೆ ಸೆಕ್ಯುರಿಟಿ ಗಾರ್ಡ್ನನ್ನು ಬಂಧಿಸಲಾಗಿದೆ.
ಶಾಲೆಗೆ ಬರುತ್ತಿದ್ದ ವಿದ್ಯಾರ್ಥಿನಿಯ ಪರಿಚಯ ಬೆಳೆಸಿಕೊಂಡ ಆರೋಪಿ, ಬರುಬರುತ್ತ ಸಲುಗೆಯಿಂದ ನಡೆದುಕೊಂಡಿದ್ದಾನೆ. ಬಾಲಕಿಯೂ ಆತನೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದಳು. ಇದನ್ನೇ ದುರುಪಯೋಗಪಡಿಸಿಕೊಂಡ ಸೆಕ್ಯೂರಿಟಿ ಗಾರ್ಡ್ ಶಾಲೆ ಬಿಟ್ಟ ಬಳಿಕ ವಿದ್ಯಾರ್ಥಿನಿಯನ್ನು ಹಿಂಬಾಲಿಸಿಕೊಂಡು ಹೋಗುವುದು, ಅಸಭ್ಯವಾಗಿ ವರ್ತಿಸಲು ಶುರುಮಾಡಿದ್ದ.
ಅಲ್ಲದೇ, ಅಪ್ರಾಪ್ತೆಯ ಫೋನ್ ನಂಬರ್ ಪಡೆದುಕೊಂಡು ವಿಡಿಯೋ ಕಾಲ್ ಮಾಡಿ ಕಿರುಕುಳ ನೀಡುತ್ತಿದ್ದ. ಇಷ್ಟಕ್ಕೆ ಬಿಡದ ಆತ ವಿಡಿಯೋ ಕಾಲ್ನಲ್ಲಿ ವಿವಸ್ತ್ರಳಾಗುವಂತೆ ಒತ್ತಾಯ ಮಾಡುತ್ತಿದ್ದನಂತೆ. ಶಾಲೆಯಲ್ಲಿ ಶೌಚಾಲಯಕ್ಕೆ ಕರೆದೊಯ್ದು ಅಲ್ಲಿಯೂ ಅನುಚಿತವಾಗಿ ನಡೆದುಕೊಳ್ಳುತ್ತಿದ್ದ. ಈ ವಿಚಾರವನ್ನು ಯಾರಿಗಾದರೂ ಹೇಳಿದರೆ ಕೊಲೆ ಮಾಡುವುದಾಗಿ ವಿದ್ಯಾರ್ಥಿನಿಗೆ ಬೆದರಿಕೆ ಹಾಕಿದ್ದಾನೆ.
ಇದರಿಂದ ತೀವ್ರವಾಗಿ ನೊಂದಿದ್ದ ಬಾಲಕಿ ಮನೆಯಲ್ಲಿ ಅಳುತ್ತಿರುವಾಗ ಕಂಡ ತಾಯಿ ವಿಚಾರಿಸಿದ್ದಾರೆ. ಬಾಲಕಿ ನಡೆದ ಘಟನೆಯನ್ನು ವಿವರಿಸಿದಾಗ ಕುಟುಂಬಸ್ಥರು ಈ ಬಗ್ಗೆ ಶಾಲೆಯ ಆಡಳಿತ ಮಂಡಳಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಪೊಲೀಸರಿಗೂ ದೂರು ನೀಡಿದ್ದಾರೆ. ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ.
ಓದಿ:ಮದ್ಯದ ಅಮಲಿನಲ್ಲಿ ದಾರಿ ಮಧ್ಯೆ ತೇಲಾಡಿದ ನಾರಿ: ವಿಡಿಯೋ ವೈರಲ್