ಸಾಂಬಾ (ಜಮ್ಮು ಮತ್ತು ಕಾಶ್ಮೀರ): ಇಂದು ಜಮ್ಮು ಪ್ರಾಂತ್ಯದ ಗಡಿ ಜಿಲ್ಲೆ ರಾಜೌರಿಯಲ್ಲಿ ನೆಲಬಾಂಬ್ ಸ್ಫೋಟದಲ್ಲಿ ಒಬ್ಬ ಅಗ್ನಿವೀರ್ ಯೋಧ ಸಾವನ್ನಪ್ಪಿ, ಇಬ್ಬರು ಗಾಯಗೊಂಡ ಘಟನೆ ನಡೆದಿದೆ. ಇದರ ಬೆನ್ನಲ್ಲೆ ಇದೀಗ ಜಮ್ಮು ಪ್ರಾಂತ್ಯದ ಸಾಂಬಾ ಜಿಲ್ಲೆಯ ಘಗ್ವಾಲ್ ಜರೈನ ಗಡಿ ಪ್ರದೇಶದ ಬಳಿ ಭದ್ರತಾ ಪಡೆಗಳು ಗಡಿಗೆ ಅಡ್ಡಲಾಗಿ ಸುರಂಗವೊಂದನ್ನು ಪತ್ತೆ ಹಚ್ಚಿದ್ದಾರೆ.
ಘಗ್ವಾಲ್ ಜರೈನ್ ಗಡಿ ಪ್ರದೇಶವನ್ನು ಭದ್ರತಾ ಪಡೆಗಳು ಸುತ್ತುವರೆದಿದ್ದು, ಸುರಂಗದ ಉದ್ದವನ್ನು ಪತ್ತೆಹಚ್ಚಲು ದೊಡ್ಡ ಪ್ರಮಾಣದ ಶೋಧ ಕಾರ್ಯಾಚರಣೆ ಪ್ರಾರಂಭಿಸಿವೆ. ಪಾಕಿಸ್ತಾನದಿಂದ ಭಾರತದಲ್ಲಿ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿರುವ ಜನರಿಗೆ ಅನುಕೂಲವಾಗುವಂತೆ, ಅವರಿಗೆ ಸರಕುಗಳು ಇತ್ಯಾದಿಗಳನ್ನು ಪೂರೈಸಲು ಹಾಗೂ ಗಡಿ ಉದ್ದಕ್ಕೂ ನುಸುಳುಕೋರರನ್ನು ಸಾಗಿಸಲು ಈ ಸುರಂಗ ಮಾರ್ಗವನ್ನು ಬಳಸುತ್ತಿರಬಹುದು ಎಂದು ಭದ್ರತಾ ಪಡೆ ಶಂಕೆ ವ್ಯಕ್ತಪಡಿಸಿದೆ.
ಗಡಿ ನಿಯಂತ್ರಣ ರೇಖೆ ಮತ್ತು ಅಂತಾರಾಷ್ಟ್ರೀಯ ಗಡಿಯಲ್ಲಿ ಪರಿಸ್ಥಿತಿ ಸಂಪೂರ್ಣವಾಗಿ ಚೆನ್ನಾಗಿರದ ಈ ಸಮಯದಲ್ಲೇ ಈ ಸುರಂಗವನ್ನು ಭದ್ರತಾ ಪಡೆಗಳು ಪತ್ತೆ ಹಚ್ಚಿರುವುದು ಚಿಂತಿಸುವ ಸಂಗತಿಯಾಗಿದೆ.
ನೆಲಬಾಂಬ್ ಸ್ಫೋಟದಲ್ಲಿ ಯೋಧ ಸಾವು:ಜಮ್ಮು ಮತ್ತು ಕಾಶ್ಮೀರದ ರಾಜೌರಿ ಜಿಲ್ಲೆಯ ನೌಶೇರಾ ಸೆಕ್ಟರ್ನ ಗಡಿ ನಿಯಂತ್ರಣ ರೇಖೆಯಲ್ಲಿ(ಎಲ್ಒಸಿ) ಗುರುವಾರ ನಡೆದ ನೆಲಬಾಂಬ್ ಸ್ಫೋಟದಲ್ಲಿ ಅಗ್ನಿವೀರ್ ಯೋಧನೊಬ್ಬ ಸಾವನ್ನಪ್ಪಿದ್ದು, ಇಬ್ಬರು ಯೋಧರು ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ವರದಿಗಳ ಪ್ರಕಾರ, ರಾಜೌರಿಯ ಮುಂದಿನ ಪ್ರದೇಶದಲ್ಲಿ ನೆಲಬಾಂಬ್ ಸ್ಫೋಟ ಸಂಭವಿಸಿದ್ದು, ಮೂವರು ಯೋಧರು ಗಾಯಗೊಂಡಿದ್ದರು. ಗಾಯಗೊಂಡ ಮೂವರು ಯೋಧರನ್ನು ಕಮಾಂಡ್ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಅಲ್ಲಿ ಒಬ್ಬರು ಸಾವನ್ನಪ್ಪಿದ್ದಾರೆ.
ಡ್ರೋನ್ ವಶಪಡಿಸಿಕೊಂಡ ಭದ್ರತಾ ಪಡೆ:ಇದಲ್ಲದೇ ಬುಧವಾರ ಸಾಂಬಾ ಜಿಲ್ಲೆಯ ಅಂತಾರಾಷ್ಟ್ರೀಯ ಗಡಿ ಬಳಿಯ ಮೈದಾನದಲ್ಲಿ ಭದ್ರತಾ ಪಡೆಗಳು ಡ್ರೋನ್ ವಶಪಡಿಸಿಕೊಂಡಿತ್ತು. ಚಂಬ್ಲಿಯಾಲ್ ಪ್ರದೇಶದ ಮೈದಾನವೊಂದರಲ್ಲಿ ಮಾವಿಕ್- 3 ಕ್ಲಾಸಿಕ್ ಮಾದರಿಯ ಕಣ್ಗಾವಲು ಡ್ರೋನ್ ಅನ್ನು ಬಿಎಸ್‌ಎಫ್ ಸಿಬ್ಬಂದಿ ವಶಪಡಿಸಿಕೊಂಡಿದ್ದಾರೆ. ಆ ಬಗ್ಗೆ ಬಿಎಸ್‌ಎಫ್ ತನಿಖೆ ನಡೆಸುತ್ತಿದೆ.
ಇದನ್ನೂ ಓದಿ:ಭಯೋತ್ಪಾದನೆ ಮಟ್ಟಹಾಕಲು ಭಾರತೀಯ ಸೇನೆಯಿಂದ 'ಆಪರೇಷನ್ ಸರ್ವಶಕ್ತಿ'
ಮತ್ತೊಂದೆಡೆ, ಗಣರಾಜ್ಯೋತ್ಸವದ ಹಿನ್ನೆಲೆ ಯಾವುದೇ ರೀತಿಯ ಭಯೋತ್ಪಾದಕ ಚಟುವಟಿಕೆಗಳು ನಡೆಯದಂತೆ ತಡೆಯಲು ಗಡಿ ಭದ್ರತಾ ಪಡೆ (ಬಿಎಸ್‌ಎಫ್) 'ಆಪರೇಷನ್ ಸರ್ದ್ ಹವಾ' ಎಂಬ ಕಾರ್ಯಾಚರಣೆ ಆರಂಭಿಸಿದೆ. ಪಾಕಿಸ್ತಾನದೊಂದಿಗೆ ಗಡಿ ಹಂಚಿಕೊಂಡಿರುವ ಜಮ್ಮು ಮತ್ತು ಕಾಶ್ಮೀರ, ಪಂಜಾಬ್, ಗುಜರಾತ್ ಮತ್ತು ರಾಜಸ್ಥಾನದಲ್ಲಿ ತೀವ್ರ ಎಚ್ಚರಿಕೆ ವಹಿಸಲಾಗಿದೆ.