ಕರ್ನಾಟಕ

karnataka

ETV Bharat / bharat

ಲೋಕಸಭೆಯಲ್ಲಿ ಭಾರಿ ಭದ್ರತಾ ಲೋಪ: ಗ್ಯಾಲರಿಯಿಂದ ಕಲಾಪಕ್ಕೆ ನುಗ್ಗಿದ ಯುವಕ ಸೇರಿ ಇಬ್ಬರು ವಶಕ್ಕೆ - Parliament session

ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಭಾರಿ ಭದ್ರತಾ ಲೋಪ ಸಂಭವಿಸಿದೆ. ಆಗಂತುಕರು ಸಂಸದರೊಬ್ಬರ ಪಾಸ್​ ಪಡೆದುಕೊಂಡು ಸಂಸತ್​ ಪ್ರವೇಶಿಸಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ.

ಲೋಕಸಭೆಯಲ್ಲಿ ಭಾರೀ ಭದ್ರತಾ ಲೋಪ
ಲೋಕಸಭೆಯಲ್ಲಿ ಭಾರೀ ಭದ್ರತಾ ಲೋಪ

By ETV Bharat Karnataka Team

Published : Dec 13, 2023, 1:27 PM IST

Updated : Dec 14, 2023, 6:37 AM IST

ಲೋಕಸಭೆಯಲ್ಲಿ ಭಾರೀ ಭದ್ರತಾ ಲೋಪ: ಗ್ಯಾಲರಿಯಿಂದ ಕಲಾಪಕ್ಕೆ ನುಗ್ಗಿದ ಯುವಕ ಸೇರಿ ಇಬ್ಬರು ವಶಕ್ಕೆ

ನವದೆಹಲಿ:ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಭಾರಿ ಭದ್ರತಾ ಲೋಪ ಸಂಭವಿಸಿದೆ. ಲೋಕಸಭೆ ಕಲಾಪ ನಡೆಯುತ್ತಿದ್ದ ವೇಳೆ ಯುವಕನೊಬ್ಬ ವೀಕ್ಷಕರು ಕೂರುವ ಗ್ಯಾಲರಿಯಿಂದ ಸದನದೊಳಗೆ ಜಿಗಿದಿದ್ದಾನೆ. ಇದರಿಂದ ಕಲಾಪಕ್ಕೆ ಅಡ್ಡಿಯಾಯಿತು. ಕೂಡಲೇ ಆತನನ್ನು ವಶಕ್ಕೆ ಪಡೆಯಲಾಗಿದೆ. ಹೀಗಾಗಿ ಕಲಾಪ ಮುಂದೂಡಲಾಗಿದೆ.

ದಿಢೀರ್​​ ಗ್ಯಾಲರಿಯಿಂದ ಜಿಗಿದ ಯುವಕನೊಬ್ಬ ಸ್ಮೋಕ್​ ಕ್ರ್ಯಾಕರ್​ವೊಂದನ್ನು ಸ್ಪ್ರೇ ಮಾಡಿದ್ದಾನೆ. ಆಗ ಸದನದಲ್ಲಿದ್ದ ಸಚಿವರು, ಸಂಸದರು ಆತಂಕದಿಂದ ಹೊರ ಬಂದಿದ್ದಾರೆ. ಇದೇ ವೇಳೆ ಹೊರಗಿನ ಗೇಟ್​ ಬಳಿಯೂ ಯುವತಿಯೊಬ್ಬಳು ಇದೇ ರೀತಿ ಬಣ್ಣವನ್ನು ಸ್ಪ್ರೇ ಮಾಡಿದ್ದಾಳೆ. ಸಂಸತ್ ಭವನದ ಮೇಲಿನ ದಾಳಿಯ ವರ್ಷಾಚರಣೆಯಂದೇ ಈ ಭದ್ರತಾ ಲೋಪ ಆಗಿದೆ.

ಲೋಕಸಭೆಗೆ ನುಗ್ಗಿದ ಆರೋಪಿಯನ್ನು ಮನೋರಂಜನ್​ ಎಂದು ಗುರುತಿಸಲಾಗಿದೆ. ಅಲ್ಲದೇ, ಮತ್ತೊಬ್ಬನನ್ನು ಸಾಗರ್​ ಶರ್ಮಾ ಎಂದು ಗುರುತಿಸಲಾಗಿದ್ದು, ಆತನ ಬಳಿಯಿದ್ದ ಸಂದರ್ಶಕರ ಪಾಸ್‌ ಸಹ ಪತ್ತೆಯಾಗಿದೆ. ಇದರಿಂದ ಈತ ಹೆಸರು ಎಂದು ಗುರುತಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಸಂಸತ್ತಿನ ಹೊರಗೆ ನುಗ್ಗ ಪ್ರತಿಭಟನೆಯಲ್ಲಿ ತೊಡಗಿದ್ದ ಮತ್ತಿಬ್ಬರನ್ನೂ ಹೆಸರು ಸಹ ಬಹಿರಂಗವಾಗಿದೆ. ಹರಿಯಾಣದ ಹಿಸಾರ್ ಮೂಲದ 42 ವರ್ಷದ ನೀಲಾಮ್ ಹಾಗೂ ಮಹಾರಾಷ್ಟ್ರದ ಲಾತೂರ್​ ಮೂಲದ 25 ವರ್ಷದ ಅಮೋಲ್​ ಶಿಂಧೆ ಎಂದು ಗುರುತಿಸಲಾಗಿದೆ.

ಸಂಸದರ ಕಚೇರಿಯಿಂದ ಪಾಸ್​:ಬಂಧಿತರಲ್ಲಿ ಒಬ್ಬನಾಗಿರುವಸಾಗರ ಶರ್ಮಾ, ಸಂಸದ ಪ್ರತಾಪ್​ ಸಿಂಹ ಅವರ ಕಚೇರಿಯಿಂದ ಪಾಸ್ ಪಡೆದು ವೀಕ್ಷಕರಾಗಿ ಗ್ಯಾಲರಿಗೆ ಬಂದಿದ್ದರು ಎಂಬುದಾಗಿ ತಿಳಿದುಬಂದಿದೆ.

ಘಟನೆ ಬಗ್ಗೆ ಆತಂಕ ವ್ಯಕ್ತಪಡಿಸಿರುವ ಲೋಕಸಭೆ ಪ್ರತಿಪಕ್ಷ ನಾಯಕ ಅಧೀರ್​ ರಂಜನ್​ ಚೌಧರಿ, ''ಇದು ಸದನದಲ್ಲಿ ಗೊಂದಲ ಸೃಷ್ಟಿಸಿರುವ ಘಟನೆಯಾಗಿದೆ. ಇಬ್ಬರು ಯುವಕರು ಇದ್ದಕಿದ್ದಂತೆ ಗ್ಯಾಲರಿಯಿಂದ ಜಿಗಿದು ಸದನದೊಳಗೆ ನುಗ್ಗಿ ಬಂದರು. ಆಗ ತಮ್ಮ ಕೈಯಲ್ಲಿದ್ದ ಬಣ್ಣವನ್ನು ತೂರಿದರು. ಅವರನ್ನು ಸದನದಲ್ಲಿದ್ದ ಸಂಸದರೇ ಹಿಡಿದಿದ್ದಾರೆ. ನಂತರ ಭದ್ರತಾ ಸಿಬ್ಬಂದಿಗೆ ಒಪ್ಪಿಸಲಾಗಿದೆ. ಇದು ಖಂಡಿತ ಭದ್ರತಾ ಲೋಪ'' ಎಂದು ಹೇಳಿದ್ದಾರೆ.

ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿರುವ ಕಾಂಗ್ರೆಸ್​ ಸಂಸದ ಕಾರ್ತಿ ಚಿದಂಬರಂ, ''ದಿಢೀರ್​ ಇಬ್ಬರು ಯುವಕರು ಗ್ಯಾಲರಿಯಿಂದ ಜಿಗಿದು ಬಂದರು. ಅವರು ತಮ್ಮ ಕೈಯಲ್ಲಿ ಡಬ್​ಗಳನ್ನು ಹಿಡಿದುಕೊಂಡಿದ್ದರು. ಇವು ಸದನದಲ್ಲಿ ಹಳದಿ ಬಣ್ಣದ ಹೊಗೆ ಹರಡಿದವು. ಒಬ್ಬನು ಸ್ಪೀಕರ್​ ಚೇಂಬರ್​ನತ್ತ ನುಗ್ಗಲು ಯತ್ನಿಸಿದನು, ಅಲ್ಲದೇ ಯುವಕರು ಯಾವುದೋ ಘೋಷಣೆಯನ್ನು ಕೂಗುತ್ತಿದ್ದರು. ಇದು ಗಂಭೀರ ಭದ್ರತಾ ಲೋಪ. ಸಂಸತ್ ದಾಳಿಯ ವರ್ಷಾಚರಣೆ ದಿನವೇ ಇದು ನಡೆದಿದೆ'' ಎಂದು ಹೇಳಿದ್ದಾರೆ.

ಹೆಚ್ಚಿನ ನಿಗಾ ವಹಿಸಿ:ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಸಮಾಜವಾದಿ ಪಕ್ಷದ ಸಂಸದೆ ಡಿಂಪಲ್​ ಯಾದವ್​, ಇಬ್ಬರು ಆಗುಂತಕರು ವೀಕ್ಷಕರು ಅಥವಾ ಪತ್ರಕರ್ತರ ವೇಷದಲ್ಲಿ ಬಂದಿರುವ ಸಾಧ್ಯತೆಯಿದೆ. ಇದು ಸಂಸತ್​ ಭವನದ ಸುರಕ್ಷತೆ ಪ್ರಶ್ನಿಸುವಂತಹ ಘಟನೆ. ಇಲ್ಲಿ ಸಂಪೂರ್ಣ ಭದ್ರತಾ ಲೋಪವಾಗಿದೆ. ಈ ಪ್ರಕರಣವನ್ನು ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಿ, ಹೆಚ್ಚಿನ ನಿಗಾ ವಹಿಸಬೇಕು ಎಂದು ಒತ್ತಾಯಿಸಿದ್ದಾರೆ.

ಸಭಾಧ್ಯಕ್ಷತೆ ವಹಿಸಿದ್ದ ಸಂಸದರ ಹೇಳಿಕೆ:ಕಲಾಪಕ್ಕೆ ನುಗ್ಗಿದ ವ್ಯಕ್ತಿಗಳ ಮೇಲೆ ಕ್ರಮ ಜರುಗಿಸಲಾಗುವುದು. ಇದು ನಿಜಕ್ಕೂ ಭಯ ಹುಟ್ಟಿಸಿದೆ. ನಾನು ಸಭಾಧ್ಯಕ್ಷ ಪೀಠದ ಮೇಲೆ ಕೂತಿದ್ದಾಗ ಇಬ್ಬರು ವ್ಯಕ್ತಿಗಳು ಜನರ ಗ್ಯಾಲರಿಯಿಂದ ಜಂಪ್​ ಮಾಡಿದರು. ಆತ ಅಲ್ಲಿಂದ ಬಿದ್ದ ಎಂದು ತಿಳಿದುಕೊಂಡಿದ್ದೆವು. ಇನ್ನೊಬ್ಬರು ಕಂಬಿಗಳನ್ನು ಹಿಡಿದುಕೊಂಡು ಬರುತ್ತಿದ್ದರು. ತಕ್ಷಣವೇ ಕಲಾಪವನ್ನು ಮುಂದೂಡಿದೆ. ಇದಕ್ಕೆ ಸಂಬಂಧಿಸಿದಂತೆ ಸ್ಪೀಕರ್​ ಓಂ ಬಿರ್ಲಾ ಅವರಿಗೆ ಮಾಹಿತಿ ನೀಡಿದ್ದೇವೆ. ಅವರು ಈ ಬಗ್ಗೆ ಕ್ರಮ ಜರುಗಿಸುತ್ತಾರೆ. ರಕ್ಷಣಾ ಸಚಿವ ರಾಜನಾಥ್​ ಸಿಂಗ್​ ಅವರು ಇದ್ದಾಗಲೇ ಈ ಘಟನೆ ನಡೆದಿದೆ ಎಂದು ಅವರು ತಿಳಿಸಿದರು.

ಇದನ್ನೂ ಓದಿ:ಶಬರಿಮಲೆಯಲ್ಲಿ ಭಾರೀ ಜನದಟ್ಟಣೆ: ಅವ್ಯವಸ್ಥೆ ವಿರುದ್ಧ ಸಿಡಿದ ಭಕ್ತರಿಂದ ಪ್ರತಿಭಟನೆ

Last Updated : Dec 14, 2023, 6:37 AM IST

ABOUT THE AUTHOR

...view details