ಶ್ರೀನಗರ (ಜಮ್ಮು ಮತ್ತು ಕಾಶ್ಮೀರ): ಕಣಿವೆ ನಾಡು ಜಮ್ಮು ಮತ್ತು ಕಾಶ್ಮೀರದಲ್ಲಿ ಚೊಚ್ಚಲ ಜಿ20 ಸಭೆಗೆ ಅಂತಿಮ ಸಿದ್ಧತೆಗಳು ಆರಂಭವಾಗಿದೆ. ಜಿ20 ಸಭೆ ಹಿನ್ನೆಲೆಯಲ್ಲಿ ಶ್ರೀನಗರದಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಸಭೆಯ ಮುಖ್ಯ ಸ್ಥಳದಲ್ಲಿ ಕಮಾಂಡೋಗಳ ನಿಯೋಜಿಸಲಾಗಿದ್ದು, ಬಂದೋಬಸ್ತ್ ಹೆಚ್ಚಿಸಲಾಗಿದೆ. ಶ್ರೀನಗರದ ಸಿಟಿ ಸೆಂಟರ್ ಲಾಲ್ ಚೌಕ್ ಮತ್ತು ದಾಲ್ ಸರೋವರದ ದಡದಲ್ಲಿರುವ ಶೇರಿ ಕಾಶ್ಮೀರ ಇಂಟರ್ ನ್ಯಾಷನಲ್ ಕನ್ವೆನ್ಷನ್ ಸೆಂಟರ್ (ಎಸ್‌ಕೆಐಸಿಸಿ) ಸುತ್ತಲೂ ಕಮಾಂಡೋಗಳ ಭದ್ರತೆ ಒದಗಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು 'ಈಟಿವಿ ಭಾರತ್'ಗೆ ತಿಳಿಸಿದ್ದಾರೆ.
ಪ್ರಸ್ತುತ ವರ್ಷ ಜಿ20 ರಾಷ್ಟ್ರಗಳ ಅಧ್ಯಕ್ಷತೆ ವಹಿಸಿರುವ ಭಾರತವು ದೇಶದ 50 ಪ್ರಮುಖ ನಗರಗಳಲ್ಲಿ ಸರಣಿ ಸಭೆಗಳನ್ನು ಹಮ್ಮಿಕೊಂಡಿದೆ. ಕಣಿವೆ ನಾಡು ಜಮ್ಮು ಮತ್ತು ಕಾಶ್ಮೀರದ ಶ್ರೀನಗರದಲ್ಲಿ ಮೇ 22 ರಿಂದ 24ರವರೆಗೆ ಮಹತ್ವದ ಸಭೆ ನಡೆಯಲಿದೆ. ಈ ವರ್ಷ ಸೆಪ್ಟೆಂಬರ್‌ನಲ್ಲಿ ನವದೆಹಲಿಯಲ್ಲಿ ನಡೆಯಲಿರುವ ಜಿ-20 ಶೃಂಗಸಭೆಗೂ ಮುನ್ನ ಶ್ರೀನಗರ ಸೇರಿದಂತೆ ಹಲವಡೆ ಸಭೆಗಳು ನಡೆಯಲಿವೆ.
ಶ್ರೀನಗರದಲ್ಲಿ ಜಿ20 ಸಭೆ ಹಿನ್ನೆಲೆಯಲ್ಲಿ ಹೆಚ್ಚಿನ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ಜಮ್ಮು - ಕಾಶ್ಮೀರ ಪೊಲೀಸರು, ಭಾರತೀಯ ಸೇನೆಯ ಯೋಧರೊಂದಿಗೆ ಕಮಾಂಡೋಗಳನ್ನೂ ಬಿಗಿ ಭದ್ರತೆ ನಿಯೋಜಿಸಲಾಗಿದೆ. ಹೆಚ್ಚುವರಿ ಕ್ರಮವಾಗಿ ಶ್ರೀನಗರದ ಅನೇಕ ಶಾಲೆಗಳಿಗೆ ಮಂಗಳವಾರದಿಂದ ರಜೆ ಘೋಷಿಸಲಾಗಿದೆ. ಇತರಡೆಗಳಲ್ಲಿ ಬುಧವಾರದಿಂದ ಜಿ-20 ಸಭೆ ಮುಕ್ತಾಯದವರೆಗೆ ಶಾಲೆಗಳು ಮುಚ್ಚುವಂತೆ ಸೂಚಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ಮಾಹಿತಿ ನೀಡಿದ್ದಾರೆ.