ನವದೆಹಲಿ: ದೇಶದ 75ನೇ ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ದೆಹಲಿಯ ಕೆಂಪು ಕೋಟೆಯ ಬಳಿ ಡ್ರೋನ್ ನಿಗ್ರಹ ವ್ಯವಸ್ಥೆಯನ್ನು ಸ್ಥಾಪಿಸಲಾಗಿದೆ. ಈ ವ್ಯವಸ್ಥೆಯು ಸುಮಾರು 4 ಕಿಮೀ ವ್ಯಾಪ್ತಿಯೊಳಗೆ ಒಂದೇ ಸಮಯದಲ್ಲಿ ಅನೇಕ ಡ್ರೋನ್‌ಗಳನ್ನು ಪತ್ತೆಹಚ್ಚುವ ಮತ್ತು ನಿಷ್ಕ್ರಿಯಗೊಳಿಸುವ ಸಾಮರ್ಥ್ಯವನ್ನು ಹೊಂದಿದೆ.
ಇಡೀ ದೇಶ ಸ್ವಾತಂತ್ರ್ಯ ಅಮೃತ ಮಹೋತ್ಸವವನ್ನು ಆಚರಿಸಲು ಸಜ್ಜಾಗಿರುವ ಬೆನ್ನಲ್ಲೇ ಭಯೋತ್ಪಾದಕರ ದಾಳಿ ಭೀತಿ ಕೂಡ ಎದುರಾಗಿದೆ. ಈ ಸಂಬಂಧ ಈಗಾಗಲೇ ಗುಪ್ತಚರ ಇಲಾಖೆ (ಇಂಟಲಿಜೆನ್ಸ್ ಬ್ಯೂರೋ) ಐದು ಹೊಸ ಎಚ್ಚರಿಕೆಗಳನ್ನು ನೀಡಿದೆ. ಸ್ವಾತಂತ್ರ್ಯ ದಿನಾಚರಣೆಯ ಮೊದಲು ರಾಷ್ಟ್ರ ರಾಜಧಾನಿ ದೆಹಲಿ ಮತ್ತು ಇತರ ಹಲವಾರು ನಗರಗಳಲ್ಲಿ ಸಂಭವನೀಯ ಭಯೋತ್ಪಾದಕ ದಾಳಿಗಳ ಬಗ್ಗೆ ಮುನ್ನೆಚ್ಚರಿಕೆ ನೀಡಲಾಗಿದೆ.
ಪ್ರಮುಖವಾಗಿ ಸೋಮವಾರ ಕೆಂಪು ಕೋಟೆಯಲ್ಲಿ ನಡೆಯಲಿರುವ ಧ್ವಜಾರೋಹಣ ಸಮಾರಂಭದ ವೇಳೆ ಭಯೋತ್ಪಾದಕರು ಐಇಡಿಗಳನ್ನು ಬಳಸಬಹುದೆಂಬ ಎಚ್ಚರಿಕೆಯನ್ನೂ ಕೊಟ್ಟಿದೆ. ಏತನ್ಮಧ್ಯೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ಭಯೋತ್ಪಾದಕ ಸಂಘಟನೆಗಳೊಂದಿಗೆ ನಂಟು ಹೊಂದಿದ್ದ ಶಂಕಿತನನ್ನು ಭಯೋತ್ಪಾದಕ ನಿಗ್ರಹ ದಳ ಬಂಧಿಸಿದೆ. ಹೀಗಾಗಿ ಹೈ ಅಲರ್ಟ್ ವಹಿಸಲಾಗುತ್ತಿದೆ.
ಕೆಂಪು ಕೋಟೆ ಬಳಿ ಹದ್ದಿನ ಕಣ್ಣಿಡಲಾಗಿದ್ದು, 400 ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ವೈಮಾನಿಕ ಉಪಕರಣಗಳು ಮತ್ತು ಡ್ರೋನ್‌ಗಳು ಸೇರಿದಂತೆ ಮಾನವಸಹಿತ ಅಥವಾ ಮಾನವರಹಿತವಾಗಿ ವಸ್ತುಗಳಿಂದ ಯಾವುದೇ ಬೆದರಿಕೆಯನ್ನು ಎದುರಿಸಲು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಒಂದು ದಿನ ಮುಂಚಿತವಾಗಿಯೇ ಡ್ರೋನ್ ನಿಗ್ರಹ ವ್ಯವಸ್ಥೆಯನ್ನು ಸ್ಥಾಪಿಸಲಾಗಿದೆ. ಈ ವ್ಯವಸ್ಥೆ ಮತ್ತು ಅದರ ಪಕ್ಕದಲ್ಲಿ ಸ್ಥಾಪಿಸಲಾದ ಜಾಮರ್‌ನ ಸಹಾಯದಿಂದ ಡ್ರೋನ್‌ಗಳನ್ನು ಪತ್ತೆಹಚ್ಚುವ ಮತ್ತು ನಿಷ್ಕ್ರಿಯಗೊಳಿಸಲು ಸಾಧ್ಯವಾಗಲಿದೆ ಎಂದು ಡಿಆರ್‌ಡಿಒ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.