ಕಾನ್ಪುರ (ಉತ್ತರ ಪ್ರದೇಶ): ಸ್ವಾತಂತ್ರ್ಯ ಬಂದು 75 ವರ್ಷಗಳು ಪೂರೈಸಿರುವ ನಿಮಿತ್ತ ದೇಶಾದ್ಯಂತ ಅಮೃತ ಮಹೋತ್ಸವನ್ನು ಆಚರಿಸಲಾಗುತ್ತಿದೆ. ಸ್ವಾತಂತ್ರ್ಯೋತ್ಸವದ ಅಂಗವಾಗಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಏತನ್ಮಧ್ಯೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ಭಯೋತ್ಪಾದಕ ಸಂಘಟನೆಗಳೊಂದಿಗೆ ನಂಟು ಹೊಂದಿದ್ದ ಆರೋಪದ ಮೇಲೆ 19 ವರ್ಷದ ಶಂಕಿತನನ್ನು ಭಯೋತ್ಪಾದಕ ನಿಗ್ರಹ ದಳ ಬಂಧಿಸಿದೆ. ಅಲ್ಲದೇ, ಈತನ ಬಂಧನದ ನಂತರ ಹೈ ಅಲರ್ಟ್ ಘೋಷಿಸಲಾಗಿದೆ.
ಉಗ್ರ ಸಂಘಟನೆಯಾದ ಜೈಶ್-ಎ-ಮೊಹಮ್ಮದ್ ಜೊತೆ ನಂಟು ಹೊಂದಿದ್ದ ಮತ್ತು ಸಾಮಾಜಿಕ ಮಾಧ್ಯಮಗಳ ಮೂಲಕ ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದ ಹ್ಯಾಂಡ್ಲರ್‌ಗಳೊಂದಿಗೆ ಸಂಪರ್ಕ ಹೊಂದಿದ್ದ ಆರೋಪದಡಿ ಕಾನ್ಪುರದ ಹಬೀಬುಲ್ ಅಲಿಯಾಸ್ ಸೈಫುಲ್ಲಾ ಎಂಬಾತನನ್ನು ಬಂಧಿಸಲಾಗಿದೆ. ಕೆಲ ದಿನಗಳ ಹಿಂದೆಯಷ್ಟೇ ಬಂಧಿತನಾದ ಶಂಕಿತ ಭಯೋತ್ಪಾದಕ ನದೀಮ್‌ನ ಸಹಾಯಕ ಈ ಸೈಫುಲ್ಲಾ.
ಅಲ್ಲದೇ, ವಿಚಾರಣೆಯಲ್ಲಿ ನದೀಮ್ ತನಗೆ ಸೈಫುಲ್ಲಾ ಹಾಗೂ ನಾವಿರಿಬ್ಬರೂ ಜೈಶ್-ಎ-ಮೊಹಮ್ಮದ್ ಸಂಘಟನೆ ಜೊತೆಗೆ ಸಂಪರ್ಕ ಹೊಂದಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ಭಯೋತ್ಪಾದಕ ನಿಗ್ರಹ ದಳದ ಅಧಿಕಾರಿಗಳು ತಿಳಿಸಿದ್ದಾರೆ. ಜೊತೆಗೆ ಉತ್ತರ ಪ್ರದೇಶದ ಫತೇಪುರ್ ಜಿಲ್ಲೆಯಲ್ಲಿ ನೆಲೆಸಿದ್ದ ಈ ಸೈಫುಲ್ಲಾ, ಮೂಲತಃ ಬಿಹಾರದ ಮೋತಿಹಾರಿ ಜಿಲ್ಲೆಯವನು ಎಂದು ಮಾಹಿತಿ ನೀಡಿದ್ದಾರೆ.