ಹೈದರಾಬಾದ್ (ತೆಲಂಗಾಣ) :ಸಿಕಂದರಾಬಾದ್‌ನ ಸ್ವಪ್ನಲೋಕ ಕಾಂಪ್ಲೆಕ್ಸ್ನಲ್ಲಿ ನಡೆದ ಅಗ್ನಿ ಅವಘಡದಿಂದ ಮಲ್ಟಿಲೆವೆಲ್ ಮಾರ್ಕೆಟಿಂಗ್ ಹಗರಣವೊಂದು ಬಯಲಿಗೆ ಬಂದಿದೆ. ಇಲ್ಲಿ ಕಾರ್ಯಾಚರಿಸುತ್ತಿದ್ದ ಖಾಸಗಿ ಕಂಪನಿಯು ಅಮಾಯಕರಿಂದ ಲಕ್ಷಾಂತರ ರೂಪಾಯಿ ಪಡೆದು ವಂಚಿಸುತ್ತಿರುವುದು ಬೆಳಕಿಗೆ ಬಂದಿದೆ. ಅಗ್ನಿ ಅವಘಡದಲ್ಲಿ ಮೃತಪಟ್ಟ 6 ಮಂದಿಯೂ ಈ ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ. ಇನ್ನು, ಈ ಕಂಪೆನಿಯು ಬಿಎಂ5 ಕಾಲ್ ಸೆಂಟರ್ ಹೆಸರಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಇದರ ಹಿಂದೆ ಇದು ಮಲ್ಟಿ ಲೆವೆಲ್ ಮಾರ್ಕೆಟಿಂಗ್ ಕೆಲಸ ನಿರ್ವಹಿಸುತ್ತಿದ್ದುದಾಗಿ ತಿಳಿದುಬಂದಿದೆ.
ಈ ಎಲ್ಲ ಗಂಭೀರ ಆರೋಪಗಳ ನಡುವೆಯೂ ಈ ಕಂಪೆನಿಯು ಮುಕ್ತವಾಗಿ ನಿರ್ವಹಿಸುತ್ತಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ಈ ಕಂಪನಿಯ ಕಚೇರಿಯಲ್ಲಿ ಸುಮಾರು 40ಕ್ಕೂ ಹೆಚ್ಚು ಯುವತಿಯರು ಕೆಲಸ ನಿರ್ವಹಿಸುತ್ತಿದ್ದರು. ಗುರುವಾರ ಅಗ್ನಿ ಅವಘಡ ಸಂಭವಿಸುವ 20 ನಿಮಿಷಗಳ ಮುಂಚಿತವಾಗಿ ಆಫೀಸಿನಿಂದ ಜನರು ತೆರಳಿದ್ದರು ಎಂದು ತಿಳಿದುಬಂದಿದೆ. ಆದರೆ ಉಳಿದ ಆರು ಮಂದಿ ಅಗ್ನಿ ಅವಘಡಕ್ಕೆ ಸಿಲುಕಿ ಜೀವ ಕಳೆದುಕೊಂಡಿದ್ದಾರೆ. ಮೃತರೆಲ್ಲರೂ ಕಂಪೆನಿಯಲ್ಲಿ ಕಳೆದ ಎರಡು ಮೂರು ವರ್ಷಗಳಿಂದ ಏಜೆಂಟ್ಗಳಾಗಿ ಕಾರ್ಯನಿರ್ವಹಿಸುತ್ತಿದ್ದರು. ಮೃತರನ್ನು ಪ್ರಮೀಳಾ, ವೆನ್ನೆಲಾ, ಶ್ರಾವಣಿ, ಶಿವ, ತ್ರಿವೇಣಿ, ಪ್ರಶಾಂತ್ ಎಂದು ಗುರುತಿಸಲಾಗಿದೆ. ಮೃತರೆಲ್ಲರೂ 25 ವರ್ಷದ ಅಸುಪಾಸಿನವರು ಎಂದು ತಿಳಿದುಬಂದಿದೆ.
ಈ ಖಾಸಗಿ ಕಂಪನಿಗೆ ಉದ್ಯೋಗಕ್ಕೆ ಸೇರುವ ಮುನ್ನ ಆಡಳಿತ ಮಂಡಳಿಯು ಪ್ರತಿಯೊಬ್ಬರಿಂದ ಸುಮಾರು ಒಂದೂವರೆ ಲಕ್ಷದಿಂದ ಮೂರು ಲಕ್ಷ ರೂಪಾಯಿ ಸಂಗ್ರಹಿಸುತ್ತಿತ್ತು ಎಂದು ಮೃತರ ಸ್ನೇಹಿತರೊಬ್ಬರು ಬಹಿರಂಗಪಡಿಸಿದ್ದಾರೆ. ಮೊದಲು ಸೇರುವ ವ್ಯಕ್ತಿಯು ಇನ್ನೆರಡು ಜನರನ್ನು ಸೇರಿಸಿದರೆ ಅವರಿಗೆ ಕಮಿಷನ್ ಕೊಡಲಾಗುತ್ತಿತ್ತು. ಇಲ್ಲಿಗೆ ಸೇರುವ ಪ್ರತಿ ಸದಸ್ಯರು ಮುಂಗಡವಾಗಿ 30ರಿಂದ 40 ಸಾವಿರ ರೂಪಾಯಿ ಪಾವತಿಸಬೇಕು. ಬಳಿಕ ಉಳಿದ ಹಣವನ್ನು ಕಂತುಗಳಲ್ಲಿ ಪಾವತಿಸಿಬೇಕಿತ್ತು. ನಮ್ಮಿಂದ ತೆಗೆದುಕೊಂಡ ಹಣಕ್ಕೆ ಪ್ರತಿಯಾಗಿ ಸಣ್ಣ ಗಡಿಯಾರ ಅಥವಾ ಡಿನ್ನರ್ ಸೆಟ್ ಮುಂತಾದವುಗಳನ್ನು ಕೊಡುತ್ತಿದ್ದರು. ಇವರು ಕೊಡುತ್ತಿದ್ದ ವಾಚ್ ಬೆಲೆ ರೂ.50 ಸಾವಿರ ಎಂದು ಅವರು ಹೇಳುತ್ತಿದ್ದರು. ಆದರೆ ಅದರ ಬೆಲೆ ರೂ.2 ಸಾವಿರ ರೂಪಾಯಿ ಸಹ ಇಲ್ಲ. ಜೊತೆಗೆ ಮಧ್ಯದಲ್ಲಿ ಕೆಲಸ ಬಿಡುವಂತಿಲ್ಲ ಎಂದು ಬಾಂಡ್ ಬರೆಸಿಕೊಳ್ಳುತ್ತಿದ್ದರು ಎಂದು ತಿಳಿದುಬಂದಿದೆ.