ರಾಂಚಿ (ಜಾರ್ಖಂಡ್):ಕಾಡಾನೆ ದಾಳಿ ಹಿನ್ನೆಲೆಯಲ್ಲಿ ಜಾರ್ಖಂಡ್ನ ಇಟ್ಕಿ ಗ್ರಾಮದಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಜಾರ್ಖಂಡ್ನ ಐದು ಜಿಲ್ಲೆಗಳಲ್ಲಿ ಆನೆಗಳು ಅವಾಂತರ ಸೃಷ್ಟಿಸಿದ್ದು, ಇದುವರೆಗೆ ಹಲವು ಜನರನ್ನು ಬಲಿ ಪಡೆದಿದೆ. ಆನೆ ದಾಳಿಯಿಂದಾಗಿ ಇದುವರೆಗೆ ಸುಮಾರು 14 ಜನ ಸಾವನ್ನಪ್ಪಿದ್ದಾರೆ ಎಂದು ಪಿಸಿಸಿಎಫ್ ಶಶಿಕರ್ ಸಾಮಂತ್ ಮಾಹಿತಿ ನೀಡಿದ್ದಾರೆ. ಈ ಪ್ರಕಾರ ಹಜಾರಿಬಾಗ್‌ನಲ್ಲಿ ಒಂದೇ ಆನೆ ಮೂವರನ್ನು ತುಳಿದು ಸಾಯಿಸಿದೆ. ಇಲ್ಲಿಂದ ಆನೆಯನ್ನು ಚತರಾದ ಕಾಡಿಗೆ ಓಡಿಸಲಾಗಿದ್ದು, ಅಲ್ಲಿಯೂ ಒಬ್ಬ ವ್ಯಕ್ತಿಯ ಮೇಲೆ ಮದಗಜ ದಾಳಿ ನಡೆಸಿದೆ ಎಂದು ತಿಳಿದು ಬಂದಿದೆ.
ಅಷ್ಟೇ ಅಲ್ಲದೆ ಲತೇಹರ್‌ನಲ್ಲಿ ಒಬ್ಬ ವ್ಯಕ್ತಿಯ ಮೇಲೆ ಆನೆ ದಾಳಿ ನಡೆಸಿ ಬಲಿ ಪಡೆದಿದೆ. ಲತೇಹರ್ ನಂತರ ಲೋಹರ್ದಗಾ ಜಿಲ್ಲೆಯನ್ನು ಪ್ರವೇಶಿಸಿದ ಆನೆ 48 ಗಂಟೆಗಳಲ್ಲಿ ಸುಮಾರು ಐದು ಜನರನ್ನು ಬಲಿ ಪಡೆದುಕೊಂಡಿದೆ. ಸದ್ಯ ಆನೆಯು ಲೋಹರ್ದಗಾದಿಂದ ರಾಂಚಿಯ ಇಟ್ಕಿ ಪೊಲೀಸ್ ಠಾಣೆ ವ್ಯಾಪ್ತಿಯನ್ನು ಪ್ರವೇಶಿಸಿದ್ದು, ಇಲ್ಲಿನ ವಿವಿಧ ಗ್ರಾಮಗಳಿಗೆ ನುಗ್ಗಿರುವ ಮದ ಏರಿರುವ ಆನೆ, ಇದುವರೆಗೆ ನಾಲ್ವರನ್ನ ಕೊಂದು ಹಾಕಿದೆ. ಇದರಲ್ಲಿ ಮೂವರು ಪುರುಷರು ಮತ್ತು ಒಬ್ಬ ಮಹಿಳೆ ಸೇರಿದ್ದಾರೆ. ಹಜಾರಿಬಾಗ್, ಚತರಾ, ಲತೇಹರ್, ಲೋಹರ್ದಗಾ ಮತ್ತು ರಾಂಚಿಯಲ್ಲಿ ಇದುವರೆಗೆ 14 ಜನರನ್ನು ಆನೆ ಬಲಿ ಪಡೆದಿದೆ. ಇಲ್ಲಿನ ಸುತ್ತಮುತ್ತಲ ಪ್ರದೇಶಗಳ ಜನರಲ್ಲಿ ಆತಂಕದ ಪರಿಸ್ಥಿತಿ ನಿರ್ಮಾಣವಾಗಿದೆ.
ಆನೆ ಕಾಟದ ಹಿನ್ನೆಲೆಯಲ್ಲಿ ನಿಷೇಧಾಜ್ಞೆ ಜಾರಿ:ಆನೆ ದಾಳಿ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯ ಮನವಿಯ ಮೇರೆಗೆ ಇಟ್ಕಿ ಪ್ರದೇಶದಲ್ಲಿ ಸೆಕ್ಷನ್ 144 ನಿಷೇಧಾಜ್ಞೆ ವಿಧಿಸಲಾಗಿದೆ ಎಂದು ರಾಂಚಿಯ ಎಸ್‌ಡಿಒ ಮಾಹಿತಿ ನೀಡಿದ್ದಾರೆ. ಈ ಪ್ರದೇಶದಲ್ಲಿ ನಾಲ್ಕು ಅಥವಾ ಅದಕ್ಕಿಂತ ಹೆಚ್ಚು ಜನರು ಒಂದೇ ಸ್ಥಳದಲ್ಲಿ ಸೇರುವಂತಿಲ್ಲ. ಜನ ಜಮಾಯಿಸಿದರೆ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಮಾಹಿತಿಯಲ್ಲಿ ತಿಳಿಸಲಾಗಿದೆ.