ದುಮ್ಕಾ (ಜಾರ್ಖಂಡ್): ತನ್ನೊಂದಿಗೆ ಎರಡನೇ ಮದುವೆಯಾಗಲು ನಿರಾಕರಿಸಿದ ಯುವತಿಗೆ ವ್ಯಕ್ತಿಯೋರ್ವ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದು, ಚಿಕಿತ್ಸೆ ಫಲಿಸದೆ ಯುವತಿ ಸಾವನ್ನಪ್ಪಿರುವ ಘಟನೆ ಜಾರ್ಖಂಡ್ನಲ್ಲಿ ನಡೆದಿದೆ. ದುಮ್ಕಾ ಜಿಲ್ಲೆಯ ಭಾಲ್ಕಿ ಗ್ರಾಮದ 19 ವರ್ಷದ ಮಾರುತಿ ಕುಮಾರಿ ಎಂಬ ಯುವತಿಯೇ ಮೃತ ದುರ್ದೈವಿಯಾಗಿದ್ದಾರೆ. ಬೆಂಕಿ ಹಚ್ಚಿದ್ದ ಆರೋಪಿಯನ್ನು ರಾಕೇಶ್ ರಾವುತ್ ಎಂದು ಗುರುತಿಸಲಾಗಿದೆ.
ಸಂತ್ರಸ್ತೆ ಮತ್ತು ಆರೋಪಿ ರಾಜೇಶ್ ರಾವುತ್ 2019ರಿಂದ ಸ್ನೇಹ ಹೊಂದಿದ್ದರು. ಇದೇ ಫೆಬ್ರವರಿ ತಿಂಗಳಲ್ಲಿ ರಾಜೇಶ್ ರಾವುತ್ ಬೇರೊಂದು ಯುವತಿಯನ್ನು ಮದುವೆಯಾಗಿದ್ದರು. ಆದರೂ, ಮಾರುತಿ ಕುಮಾರಿಯನ್ನೇ ಮದುವೆಯಾಗಲು ಬಯಸಿದ್ದರು. ಆದರೆ, ತನ್ನ ಪ್ರಸ್ತಾಪ ಒಪ್ಪಲು ನಿರಾಕರಿಸಿದಾಗ ಆರೋಪಿ ಸುಟ್ಟು ಹಾಕುವುದಾಗಿ ಜೀವ ಬೆದರಿಕೆ ಹಾಕಿದ್ದ ಎಂದು ಹೇಳಲಾಗಿದೆ.
ಮಲಗಿದ್ದಾಗ ಬೆಂಕಿ ಹಚ್ಚಿದ ಪ್ರಿಯಕರ: ಅಂತೆಯೇ, ಗುರುವಾರ ರಾತ್ರಿ ಮಲಗಿದ್ದಾಗ ಮಾರುತಿ ಕುಮಾರಿ ಮೇಲೆ ಆರೋಪಿ ರಾಜೇಶ್ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ. ಈ ಘಟನೆಯಲ್ಲಿ ಯುವತಿಗೆ ಗಂಭೀರವಾದ ಸುಟ್ಟು ಗಾಯಗಳಾಗಿದ್ದವು. ಮೊದಲಿಗೆ ದುಮ್ಕಾದಲ್ಲಿರುವ ಫುಲೋ ಜಾನೋ ವೈದ್ಯಕೀಯ ಕಾಲೇಜಿಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಆಕೆಯ ಸ್ಥಿತಿ ಹದಗೆಟ್ಟಿದ್ದರಿಂದ ರಾಂಚಿಯ ರಾಜೇಂದ್ರ ವೈದ್ಯಕೀಯ ವಿಜ್ಞಾನ ಸಂಸ್ಥೆ(ರಿಮ್ಸ್)ಗೆ ಸ್ಥಳಾಂತರಿಸಲಾಗಿತ್ತು. ಆದರೆ, ಆಸ್ಪತ್ರೆಯಲ್ಲಿ ಚಿಕಿತ್ಸೆ ಸ್ಪಂದಿಸದೇ ಯುವತಿ ಮೃತಪಟ್ಟಿದ್ದಾರೆ.