ನವದೆಹಲಿ:ಮಹಾಮಾರಿ ಕೊರೊನಾ ವೈರಸ್ ವಿರುದ್ಧ ದೇಶದಲ್ಲಿ ಎರಡು ಲಸಿಕೆಗಳು ಸಿದ್ಧಗೊಂಡಿದ್ದು, ಇದೀಗ ಕೇಂದ್ರ ಸರ್ಕಾರ ಮತ್ತೊಂದು ಹಂತದ ಡ್ರೈ ರನ್ ನಡೆಸಲು ಸಿದ್ಧವಾಗಿದೆ. ಈಗಾಗಲೇ ಜನವರಿ 2ರಂದು ಮೊದಲನೇ ಹಂತದ ಡ್ರೈ ರನ್ ನಡೆದಿದ್ದು, ಇದರ ಬೆನ್ನಲ್ಲೇ ಶುಕ್ರವಾರ ಎರಡನೇ ಹಂತದ ಡ್ರೈ ರನ್ ನಡೆಯಲಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಎಲ್ಲಾ ರಾಜ್ಯಗಳಲ್ಲೂ ಈ ಡ್ರೈ ರನ್ ನಡೆಯಲಿದ್ದು, ದೇಶದ ಜನರಿಗೆ ಕೋವಿಡ್-19 ಲಸಿಕೆ ಹಾಕಿಸುವ ಪೂರ್ವ ಪ್ರಯೋಗ–ಡ್ರೈ ರನ್ ಇದಾಗಿದೆ. ಶುಕ್ರವಾರ ದಿನವಿಡೀ ಡ್ರೈ ರನ್ ನಡೆಸಲಾಗುತ್ತದೆ ಎಂಬ ಮಾಹಿತಿ ಲಭ್ಯವಾಗಿದೆ.
ಕೋವಿಡ್ ಲಸಿಕೆ ಜನಸಾಮಾನ್ಯರಿಗೆ ವಿತರಣೆ ಮಾಡುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿರುವ ಕಾರಣ, ಕೇಂದ್ರ ಸರ್ಕಾರ ಈ ನಿರ್ಧಾರ ಕೈಗೊಂಡಿದೆ ಎಂದು ಹೇಳಲಾಗುತ್ತಿದೆ. ಈಗಾಗಲೇ ದೇಶದಲ್ಲಿ ಮೊದಲ ದಿನದ ಲಸಿಕೆ ನೀಡಿಕೆಯ ಪೂರ್ವ ಪ್ರಯೋಗ–ಡ್ರೈ ರನ್ ಯಶಸ್ವಿಯಾಗಿದೆ. ದೇಶದಲ್ಲಿ ಈಗಾಗಲೇ ಕೋವಿಶಿಲ್ಡ್ ಹಾಗೂ ಕೋವ್ಯಾಕ್ಸಿನ್ ಲಸಿಕೆ ತುರ್ತು ಬಳಕೆಗೆ ಭಾರತದ ಔಷಧ ಮಹಾನಿಯಂತ್ರಕ(ಡಿಸಿಜಿಐ) ಅನುಮತಿ ನೀಡಿದೆ.
ನಾಳೆ ಎಲ್ಲ ರಾಜ್ಯದ ಆರೋಗ್ಯ ಸಚಿವರೊಂದಿಗೆ ಸಭೆ
ಇದೇ ವಿಚಾರಕ್ಕೆ ಸಂಬಂಧಿಸಿದಂತೆ ನಾಳೆ ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್ ಎಲ್ಲಾ ರಾಜ್ಯಗಳ ಆರೋಗ್ಯ ಸಚಿವರೊಂದಿಗೆ ಮಹತ್ವದ ಸಭೆ ನಡೆಸಲಿದ್ದಾರೆ. ನಾಳೆ 12:30ಕ್ಕೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಯಲಿದ್ದು, ಡ್ರೈ ರನ್ ನಡೆಸುವ ಬಗ್ಗೆ ಮಹತ್ವದ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.