ಇಡೀ ಜಗತ್ತಿಗೆ ಭಾರೀ ಪೆಟ್ಟು ನೀಡಿರುವ ಕೋವಿಡ್ ಆರ್ಥಿಕ ವ್ಯವಸ್ಥೆಯನ್ನೇ ಬುಡಮೇಲು ಮಾಡಿದೆ. ಕೊರೊನಾ ನಿಯಂತ್ರಿಸಲು ವಿಧಿಸಿದ ಲಾಕ್ಡೌನ್ ಆರ್ಥಿಕ ಚಟುವಟಿಕೆಗಳಿಗೆ ಹೊಡೆತ ನೀಡಿದೆ. ಈ ವರ್ಷ ಏಪ್ರಿಲ್-ಮೇ ತಿಂಗಳಲ್ಲಿ ಶುರುವಾದ ಕೋವಿಡ್, ಏಷ್ಯಾದ ಮೂರನೇ ಅತಿದೊಡ್ಡ ಆರ್ಥಿಕ ವ್ಯವಸ್ಥೆ ಹೊಂದಿರುವ ಭಾರತದ ಮೇಲೆ ತೀವ್ರ ಪರಿಣಾಮ ಬೀರಿದೆ.
ಆ ಸಮಯದಲ್ಲಿ ದಿನಕ್ಕೆ ನಾಲ್ಕು ಲಕ್ಷಕ್ಕೂ ಅಧಿಕ ಕೋವಿಡ್ ಪ್ರಕರಣಗಳು ವರದಿಯಾಗುತ್ತಿದ್ದವು. ನಾಲ್ಕು ಸಾವಿರ ಜನರು ಮೃತಪಡುತ್ತಿದ್ದರು. ಕಳೆದ 10 ದಿನಗಳಿಂದ ಕೊರೊನಾ ಕೇಸ್ ಕಡಿಮೆಯಾಗಿವೆ. ಸಾವುಗಳ ಸಂಖ್ಯೆಯಲ್ಲಿಯೂ ಗಣನೀಯವಾಗಿ ಇಳಿಕೆ ಕಂಡು ಬಂದಿದೆ.
ಕೋವಿಡ್ ವ್ಯಾಪಕವಾಗಿ ಹರಡಿದ ಪರಿಣಾಮ, ಸರಕು ಉತ್ಪಾದನೆ ಮತ್ತು ಸೇವೆಗಳಿಗೆ ನಿರ್ಬಂಧ ವಿಧಿಸಲಾಯಿತು. ಜೂನ್‌ನಲ್ಲಿ ಖರೀದಿ ವ್ಯವಸ್ಥಾಪಕರ ಸೂಚ್ಯಂಕ (ಪಿಎಂಐ)ದಿಂದ ಅಳೆಯಲ್ಪಟ್ಟ ಭಾರತದ ಉತ್ಪಾದನಾ ಚಟುವಟಿಕೆಯು ಮೇ ತಿಂಗಳಲ್ಲಿ ಶೇ.50.8ರಷ್ಟಿತ್ತು. ಆದರೆ, ಜೂನ್ ವೇಳೆಗೆ ಶೇ.48.1ಕ್ಕೆ ಇಳಿದಿದೆ. ಕಳೆದ 11 ತಿಂಗಳಲ್ಲಿಯೇ ಇದು ಮೊದಲ ಕುಸಿತವಾಗಿದೆ.
ಕೇವಲ ಭಾರತಕ್ಕೆ ಮಾತ್ರವಲ್ಲ, ಏಷ್ಯಾದ ಇತರೆ ರಾಷ್ಟ್ರಗಳಿಗೂ ಕೋವಿಡ್ ಭೀಕರತೆ ತಟ್ಟಿದೆ. ಆಕ್ಸ್‌ಫರ್ಡ್ ಎಕನಾಮಿಕ್ಸ್ನ ಮಾಹಿತಿ ಪ್ರಕಾರ ಜೂನ್ನ ಏಷ್ಯಾದಲ್ಲಿ ಪಿಎಂಐಗಳು ತೀವ್ರ ಆರ್ಥಿಕ ಕುಸಿತ ಕಂಡಿವೆ. ದಕ್ಷಿಣ ಕೊರಿಯಾ ಮತ್ತು ಫಿಲಿಪೈನ್ಸ್ ಹೊರತು ಪಡಿಸಿ ಉಳಿದ ಉಳಿದೆಲ್ಲಾ ದೇಶಗಳು ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿವೆ. ದೇಶೀಯ ಬೇಡಿಕೆಯ ಜತೆಗೆ ವಿದೇಶಿ ಬೇಡಿಕೆಗಳು ಇದ್ದಾಗ ಮಾತ್ರ ಉತ್ಪಾದನೆ ಹೆಚ್ಚಾಗಿ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ ಎಂದು ಅರ್ಥಶಾಸ್ತ್ರಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಏಷ್ಯಾ ಪಿಎಂಐ ಮೇ ತಿಂಗಳಲ್ಲಿ 53.9 ರಿಂದ ಜೂನ್ ವೇಳೆಗೆ 52.1ಕ್ಕೆ ಇಳಿದಿದ್ದರೆ, ಈಶಾನ್ಯ ಏಷ್ಯಾ ಪಿಎಂಐ 55.2 ರಿಂದ 53.8ಕ್ಕೆ ಇಳಿದಿದೆ. ಕೋವಿಡ್ ಹೊಡೆತದಿಂದಾಗಿ ಬಹುತೇಕ ಹಿಂದುಳಿದ ದೇಶಗಳು ದುರ್ಬಲ ರಾಷ್ಟ್ರಗಳಾಗಿ, ಮುಂದುವರಿಯುತ್ತಿದ್ದ ರಾಷ್ಟ್ರಗಳು ಹಿಂದುಳಿದ ರಾಷ್ಟ್ರಗಳಾಗಿ ಮಾರ್ಪಟ್ಟಿವೆ. ವೈರಸ್ನಿಂದಾಗಿ ಚೀನಾ ಮತ್ತು ಸಿಂಗಾಪುರ ಸೇರಿ ಏಷ್ಯಾದಲ್ಲಿ ರಫ್ತು ಕುಂಠಿತಗೊಂಡಿದೆ.
ಈ ಮಧ್ಯೆ, ಕೆಲವೇ ದಿನಗಳಲ್ಲಿ ಲಾಕ್ಡೌನ್ ಸಡಿಲಗೊಳ್ಳಲಿದೆ. ಜಾಗತಿಕ ಅಡೆತಡೆಗಳು ನಿವಾರಣೆಯಾಗುತ್ತವೆ ಎಂದು ಅರ್ಥಶಾಸ್ತ್ರಜ್ಞರು ತಿಳಿಸಿದ್ದಾರೆ. ಆದಾಗ್ಯೂ, ಅರ್ಥಶಾಸ್ತ್ರಜ್ಞರ ಪ್ರಕಾರ, ಮೂರನೇ ತ್ರೈಮಾಸಿಕದಲ್ಲಿ ಲಾಕ್‌ಡೌನ್‌ಗಳು ಸಡಿಲಗೊಳ್ಳುತ್ತವೆ ಮತ್ತು ಜಾಗತಿಕ ಅಡೆತಡೆಗಳು ಕಡಿಮೆಯಾಗುತ್ತವೆ.