ನವದೆಹಲಿ :ದೇಶದ ಕೃಷಿ ಕ್ಷೇತ್ರದ ಮೇಲೆ ಕೋವಿಡ್ ಎರಡನೇ ಅಲೆ ಯಾವುದೇ ರೀತಿಯಲ್ಲಿ ಪರಿಣಾಮ ಬೀರುವುದಿಲ್ಲ ಎಂದು ನೀತಿ ಆಯೋಗದ ಸದಸ್ಯ (ಕೃಷಿ) ರಮೇಶ್ ಚಂದ್ ಭಾನುವಾರ ಹೇಳಿದ್ದಾರೆ.
ಸಬ್ಸಿಡಿ, ದರ ಮತ್ತು ತಂತ್ರಜ್ಞಾನದಲ್ಲಿನ ನೀತಿಗಳು ಹೆಚ್ಚಾಗಿ ಅಕ್ಕಿ, ಗೋಧಿ ಮತ್ತು ಭತ್ತದ ಪರವಾಗಿದ್ದು, ಖರೀದಿ ಮತ್ತು ದ್ವಿದಳ ಧಾನ್ಯಗಳಿಗೆ ಅನುಕೂಲಕರವಾದ ಕನಿಷ್ಠ ಬೆಂಬಲ ಬೆಲೆ ನೀತಿಯ ಅಗತ್ಯವಿದೆ ಎಂದು ಚಂದ್ ಪಿಟಿಐಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.
ಮೇ ತಿಂಗಳ ಆರಂಭದೊಂದಿಗೆ ಗ್ರಾಮೀಣ ಪ್ರದೇಶದಲ್ಲಿ ಕೋವಿಡ್-19 ಪ್ರಕರಣಗಳ ಹರಡುವಿಕೆಯೂ ಆರಂಭವಾಯಿತು. ಮೇ ತಿಂಗಳಲ್ಲಿ ಕೃಷಿ ಚಟುವಟಿಕೆಗಳು ವಿಶೇಷವಾಗಿ, ಭೂ ಆಧಾರಿತ ಚಟುವಟಿಕೆಗಳು ಕನಿಷ್ಠ ಮಟ್ಟದಲ್ಲಿರುತ್ತವೆ.
ಮೇ ತಿಂಗಳಲ್ಲಿ ಯಾವುದೇ ಬೆಳೆ ಬಿತ್ತನೆ ಮಾಡುವುದಿಲ್ಲ, ಸ್ವಲ್ಪ ತರಕಾರಿಗಳು ಮತ್ತು ಕೆಲವು ಆಫ್-ಸೀಸನ್ ಬೆಳೆಗಳನ್ನು ಹೊರತುಪಡಿಸಿ ಯಾವುದೇ ಬೆಳೆ ಕೊಯ್ಲು ಮಾಡಲಾಗುವುದಿಲ್ಲ ಎಂದು ಅವರು ವಿವರಿಸಿದರು.
ಮಾರ್ಚ್ ತಿಂಗಳ ಆರಂಭ ಅಥವಾ ಏಪ್ರಿಲ್ ಮಧ್ಯಭಾಗದಿಂದ ಕೃಷಿ ಚಟುವಟಿಕೆಗಳು ಆರಂಭವಾಗುತ್ತವೆ. ನಂತರ ಕಡಿಮೆಯಾಗಿ, ಮುಂಗಾರು ಆರಂಭದೊಂದಿಗೆ ಮತ್ತೆ ಗರಿಷ್ಠ ಪ್ರಮಾಣದ ಚಟುವಟಿಕೆಗಳು ನಡೆಯುತ್ತವೆ.
ಆದ್ದರಿಂದ ಮೇ ತಿಂಗಳಿನಿಂದ ಜೂನ್ ಮಧ್ಯದವರೆಗೂ ಕಾರ್ಮಿಕರ ಕೊರತೆ ಇದ್ದರೂ, ಇದು ಕೃಷಿ ವಲಯದ ಮೇಲೆ ಯಾವುದೇ ರೀತಿಯ ಪರಿಣಾಮ ಬೀರಲಿದೆ ಎಂದು ಅನಿಸುವುದಿಲ್ಲ ಎಂದು ಚಂದ್ ಹೇಳಿದರು.
ದ್ವಿದಳ ಧಾನ್ಯಗಳ ಉತ್ಪಾದನೆಯಲ್ಲಿ ದೇಶ ಏಕೆ ಇನ್ನೂ ಸ್ವಾವಲಂಬಿಯಾಗಿಲ್ಲ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಚಂದ್, ನೀರಾವರಿ ಅಡಿಯಲ್ಲಿ ದ್ವಿದಳ ಧಾನ್ಯ ಉತ್ಪಾದನೆ ಹೆಚ್ಚಾಗುವ ಅಗತ್ಯವಿದೆ. ಅದು ಉತ್ಪಾದನೆಯಲ್ಲಿ ಬಹಳಷ್ಟು ವ್ಯತ್ಯಾಸ ಮತ್ತು ಬೆಲೆಗಳಲ್ಲಿ ಸ್ಥಿರತೆಯನ್ನು ಮಾಡುತ್ತದೆ. 2021-22ರಲ್ಲಿ ಕೃಷಿ ಕ್ಷೇತ್ರದ ಬೆಳವಣಿಗೆ ಶೇ.3ಕ್ಕಿಂತಲೂ ಹೆಚ್ಚಾಗುತ್ತದೆ ಎಂದು ಅವರು ತಿಳಿಸಿದರು.