ಮುಂಬೈ:ಎರಡನೇ ಹಂತದ ಮಹಾಮಾರಿ ಕೊರೊನಾ ವೈರಸ್ ಹಾವಳಿ ಜೋರಾಗಿರುವ ಕಾರಣ ಮಹಾರಾಷ್ಟ್ರದಲ್ಲಿ ನಾಳೆಯಿಂದ ಸೆಕ್ಷನ್ 144 ಜಾರಿಗೊಳ್ಳಲಿದ್ದು, ಮಹತ್ವದ ಮಾರ್ಗಸೂಚಿ ಬಿಡುಗಡೆ ಮಾಡಿ ಅಲ್ಲಿನ ಸರ್ಕಾರ ಆದೇಶ ಹೊರಡಿಸಿದೆ.
ಮಹಾರಾಷ್ಟ್ರ ಜನರನ್ನುದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ, ನಾಳೆಯಿಂದ ಮುಂದಿನ 15 ದಿನಗಳ ಕಾಲ ಮಹಾರಾಷ್ಟ್ರದಲ್ಲಿ ಸೆಕ್ಷನ್ 144 ಜಾರಿಗೊಳ್ಳಲಿದೆ ಎಂದು ತಿಳಿಸಿದ್ದಾರೆ. ಇದರ ಜತೆಗೆ ಧಾರ್ಮಿಕ ಸ್ಥಳ, ಪೂಜಾ ಸ್ಥಳ, ಶಾಲೆ-ಕಾಲೇಜು, ಕೋಚಿಂಗ್ ಸೆಂಟರ್, ತರಗತಿಗಳು, ಪುರುಷರು ಹಾಗೂ ಮಹಿಳೆಯರ ಪಾರ್ಲರ್ ನಾಳೆಯಿಂದ ಬಂದ್ ಇರಲಿವೆ.
ಯಾವುದೆಲ್ಲ ಬಂದ್!?
ಸಿನಿಮಾ ಥಿಯೇಟರ್, ಜಿಮ್, ಕ್ರೀಡಾ ಸಂಕೀರ್ಣ, ಸಿನಿಮಾ, ಧಾರಾವಾಹಿ ಚಿತ್ರೀಕರಣ, ಹೋಟೆಲ್, ರೆಸ್ಟೋರೆಂಟ್ ಬಂದ್ ಇರಲಿದ್ದು, ಹೋಂ ಡೆಲಿವರಿಗೆ ಅವಕಾಶ ನೀಡಲಾಗಿದೆ. ಅನಗತ್ಯವಾಗಿ ಮನೆಯಿಂದ ಹೊರ ಬರುವಂತಿಲ್ಲ. ಅಗತ್ಯ ಸೇವೆ ಬಿಟ್ಟು ಇತರ ಎಲ್ಲ ಸೇವೆ ಬಂದ್ ಆಗಲಿದ್ದು, ನಾಳೆ ಸಂಜೆಯಿಂದಲೇ ಈ ನಿಯಮ ಜಾರಿಗೊಳ್ಳಲಿವೆ.
ಇದನ್ನೂ ಓದಿ: ಮಹಾರಾಷ್ಟ್ರದಲ್ಲಿಲ್ಲ ಲಾಕ್ಡೌನ್: ನಾಳೆಯಿಂದ ರಾಜ್ಯಾದ್ಯಂತ ಸೆಕ್ಷನ್ 144 ಜಾರಿ!
ಯಾವುದಕ್ಕೆ ಅನುಮತಿ?
ಅಗತ್ಯ ಸೇವೆಗಳಿಗೆ ಬಸ್ ಹಾಗೂ ರೈಲು ಸಂಚಾರ ಇರಲಿದ್ದು, ಮುಂಬೈ ಉಪನಗರ ರೈಲು ಸೇವೆ ಲಭ್ಯವಿರಲಿದೆ. ಪೆಟ್ರೋಲ್ ಪಂಪ್, ನಿರ್ಮಾಣ ಕಾರ್ಯ ಮುಂದುವರೆಯಲಿವೆ.
ಬಡವರಿಗೆ, ಕೂಲಿ ಕಾರ್ಮಿಕರಿಗೆ ಮುಂದಿನ ಒಂದು ತಿಂಗಳವರೆಗೆ ಮೂರು ಕೆಜಿ ಗೋಧಿ ಹಾಗೂ ಎರಡು ಕೆಜಿ ಅಕ್ಕಿ ಉಚಿತವಾಗಿ ನೀಡಲು ನಿರ್ಧರಿಸಲಾಗಿದೆ. ಆದಿವಾಸಿಗಳಿಗೆ 2 ಸಾವಿರ ರೂ., ಕಾರ್ಮಿಕರಿಗೆ 1500 ರೂ. ಧನಸಹಾಯ ನೀಡಲಾಗುವುದು ಎಂದು ಅವರು ಇದೇ ವೇಳೆ ತಿಳಿಸಿದರು. ಪಡಿತರ ಚೀಟಿ ಇರುವವರಿಗೆ ಮುಂದಿನ ಮೂರು ತಿಂಗಳ ಕಾಲ ಉಚಿತ ರೇಷನ್ ನೀಡಲು ನಿರ್ಧಾರ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಮಹಾಮಾರಿ ಕೊರೊನಾ ವೈರಸ್ ವಿರುದ್ಧ ಹೋರಾಟ ಮುಂದುವರೆಯಲಿದ್ದು, ರಾಜ್ಯಾದ್ಯಂತ ನಾಳೆ ರಾತ್ರಿ 8 ಗಂಟೆಯಿಂದ ಬ್ರೇಕ್ ದ ಚೈನ್ ಅಭಿಯಾನ ಆರಂಭಗೊಳ್ಳಿದೆ ಎಂದು ತಿಳಿಸಿದರು. ಪ್ರಮುಖವಾಗಿ ಕೋವಿಡ್ ಹೊಡೆದೋಡಿಸಲು ಸೇನೆಯ ಸಹಾಯ ಪಡೆದುಕೊಳ್ಳಲಾಗುವುದು ಎಂದಿದ್ದಾರೆ.