ಕರ್ನಾಟಕ

karnataka

ETV Bharat / bharat

ರಾಯಗಡ ಭೂಕುಸಿತದಲ್ಲಿ ಸಾವಿನ ಸಂಖ್ಯೆ 16ಕ್ಕೇರಿಕೆ; ಸಮರೋಪಾದಿಯಲ್ಲಿ ರಕ್ಷಣಾ ಕಾರ್ಯ, 119 ಮಂದಿಗಾಗಿ ಶೋಧ ತೀವ್ರ

ಭಾರಿ ಮಳೆಯಿಂದಾಗಿ ರಾಯಗಢದ ಇರ್ಶಲವಾಡಿಯಲ್ಲಿ ಸ್ಥಗಿತಗೊಂಡಿದ್ದ ಎನ್‌ಡಿಆರ್‌ಎಫ್‌ ರಕ್ಷಣಾ ಕಾರ್ಯಾಚರಣೆ ಇಂದು ಮತ್ತೆ ಪ್ರಾರಂಭಗೊಂಡಿದೆ. ಮಾಹಿತಿ ಪ್ರಕಾರ, ಈವರೆಗೆ 16 ಮಂದಿಯ ಮೃತದೇಹಗಳು ಪತ್ತೆಯಾಗಿವೆ. 27ಕ್ಕೂ ಹೆಚ್ಚು ಮಂದಿಯನ್ನು ರಕ್ಷಿಸಲಾಗಿದೆ. 17 ಮನೆಗಳು ನೆಲಸಮವಾಗಿವೆ.

By

Published : Jul 21, 2023, 10:32 AM IST

landslide
ಇರ್ಶಲವಾಡಿಯಲ್ಲಿ ರಕ್ಷಣಾ ಕಾರ್ಯಾಚರಣೆ ಪುನರಾರಂಭ

ಮುಂಬೈ:ಮಹಾರಾಷ್ಟ್ರ ಕರಾವಳಿಯ ರಾಯಗಡ ಜಿಲ್ಲೆಯ ಇರ್ಶಲ್ವಾಡಿ ಕುಗ್ರಾಮದಲ್ಲಿ ಸಂಭವಿಸಿದ ಭೀಕರ ಭೂಕುಸಿತದಿಂದ ಹಲವಾರು ಮನೆಗಳು ನೆಲಸಮವಾಗಿದ್ದು, ಇದುವರೆಗೆ ಕನಿಷ್ಠ 16 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಭಾರಿ ಮಳೆಯ ನಡುವೆಯೂ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯಿಂದ (ಎನ್‌ಡಿಆರ್‌ಎಫ್‌) ರಕ್ಷಣಾ ಮತ್ತು ಶೋಧ ಕಾರ್ಯಾಚರಣೆ ಇಂದು ಬೆಳಗ್ಗೆಯಿಂದ ಪುನರಾರಂಭವಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮುಂಬೈನಿಂದ ಸುಮಾರು 80 ಕಿ.ಮೀ ದೂರದಲ್ಲಿರುವ ಕರಾವಳಿ ಜಿಲ್ಲೆ ಖಲಾಪುರ್ ತೆಹಸಿಲ್ ವ್ಯಾಪ್ತಿಯ ಬೆಟ್ಟದ ಇಳಿಜಾರಿನಲ್ಲಿರುವ ಬುಡಕಟ್ಟು ಗ್ರಾಮದಲ್ಲಿ ಬುಧವಾರ ರಾತ್ರಿ 11 ಗಂಟೆ ಸುಮಾರಿಗೆ ಭೂಕುಸಿತ ಸಂಭವಿಸಿತು. ಗ್ರಾಮದ ಒಟ್ಟು 228 ನಿವಾಸಿಗಳ ಪೈಕಿ ಇದುವರೆಗೆ 16 ಮಂದಿಯ ಮೃತದೇಹ ಪತ್ತೆಯಾಗಿದ್ದು, 27ಕ್ಕೂ ಹೆಚ್ಚು ಜನರನ್ನು ರಕ್ಷಿಸಲಾಗಿದೆ. 93 ಮಂದಿಯನ್ನು ಪತ್ತೆ ಹಚ್ಚಲಾಗಿದೆ. ಒಟ್ಟು 119 ಗ್ರಾಮಸ್ಥರು ನಾಪತ್ತೆಯಾಗಿದ್ದಾರೆ. ಇವರಲ್ಲಿ ಮದುವೆ ಸೇರಿದಂತೆ ತೋಟದ ಕೆಲಸಕ್ಕಾಗಿ ಗ್ರಾಮದಿಂದ ಹೊರಗೆ ಹೋದವರು ಸೇರಿದ್ದಾರೆ. ಗ್ರಾಮದಲ್ಲಿರುವ ಸುಮಾರು 50 ಮನೆಗಳ ಪೈಕಿ 17 ಮನೆಗಳು ಭೂಕುಸಿತದಿಂದ ನೆಲಸಮವಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ :ಮಹಾರಾಷ್ಟ್ರ: ಭೀಕರ ಭೂಕುಸಿತದಲ್ಲಿ 10ಕ್ಕೇರಿದ ಸಾವಿನ ಸಂಖ್ಯೆ, ಅವಶೇಷಗಳಡಿ ಸಿಲುಕಿರುವ 30 ಮನೆಗಳ 100 ಮಂದಿ!

"ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯು ರಾಯಗಢ ಪೊಲೀಸರು ಮತ್ತು ಸ್ಥಳೀಯ ಅಧಿಕಾರಿಗಳ ತಂಡಗಳೊಂದಿಗೆ ಗ್ರಾಮದಲ್ಲಿ ಎರಡನೇ ದಿನ ರಕ್ಷಣಾ ಕಾರ್ಯಾಚರಣೆ ಪ್ರಾರಂಭಿಸಿದೆ. ನಾಲ್ಕು ಎನ್‌ಡಿಆರ್‌ಎಫ್ ತಂಡಗಳು ಇಂದು ಬೆಳಗ್ಗೆ ಭೂಕುಸಿತ ಸ್ಥಳಕ್ಕೆ ತಲುಪಿವೆ. ಥಾಣೆ ವಿಪತ್ತು ನಿರ್ವಹಣಾ ಪಡೆ (ಟಿಡಿಆರ್‌ಎಫ್), ಸ್ಥಳೀಯ ವಿಪತ್ತು ನಿರ್ವಹಣಾ ಅಧಿಕಾರಿಗಳು, ರಾಯಗಢ ಪೊಲೀಸರು ಸಹ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಪ್ರತಿಕೂಲ ಹವಾಮಾನ ಮತ್ತು ಕತ್ತಲೆಯಿಂದಾಗಿ ನಿನ್ನೆ ರಾತ್ರಿ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿತ್ತು. ಇಂದು ಬೆಳಗ್ಗೆ 6.30ಕ್ಕೆ ಶೋಧ ಕಾರ್ಯಾಚರಣೆ ಮತ್ತೆ ಆರಂಭವಾಗಿದೆ" ಎಂದು ರಾಯಗಢ ಪೊಲೀಸ್ ವರಿಷ್ಠಾಧಿಕಾರಿ ಸೋಮಂತ್ ಘರ್ಗೆ ತಿಳಿಸಿದ್ದಾರೆ.

ಪರಿಹಾರ ಕಾರ್ಯಚರಣೆಗೆ ಹಲವು ತೊಡಕು: ರಕ್ಷಣಾ ಕಾರ್ಯ ನಡೆಸುತ್ತಿರುವ ಎನ್‌ಡಿಆರ್‌ಎಫ್ ಪಡೆಗಳು ಹಲವು ತೊಂದರೆಗಳನ್ನು ಎದುರಿಸುತ್ತಿವೆ. ಈ ಗ್ರಾಮಕ್ಕೆ ಸುಸಜ್ಜಿತ ರಸ್ತೆಯೇ ಇಲ್ಲ. ಬೆಟ್ಟವನ್ನು ದಾಟಿ ಇರ್ಶಲವಾಡಿ ತಲುಪಬೇಕು. ಇದರಿಂದ ಅಗತ್ಯ ಉಪಕರಣಗಳನ್ನು ಸುಲಭವಾಗಿ ಸಾಗಿಸಲು ಸಾಧ್ಯವಾಗುತ್ತಿಲ್ಲ ಎಂದು ಉಪಮುಖ್ಯಮಂತ್ರಿ ಅಜಿತ್ ಪವಾರ್ ಹಾಗೂ ರಕ್ಷಣಾ ತಂಡದ ಅಧಿಕಾರಿಗಳು ತಿಳಿಸಿದ್ದಾರೆ.

ಘಟನಾ ಸ್ಥಳಕ್ಕೆ ಮುಖ್ಯಮಂತ್ರಿ ಶಿಂಧೆ ಭೇಟಿ: ಮುಖ್ಯಮಂತ್ರಿ ಏಕನಾಥ್​ ಶಿಂಧೆ ಗುರುವಾರ ಇರ್ಶಾಲವಾಡಿಗೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದರು. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, "ಭೂಕುಸಿತ ಪೀಡಿತ ಗ್ರಾಮಗಳ ಪಟ್ಟಿಯಲ್ಲಿ ಇರ್ಶಲವಾಡಿ ಇರಲಿಲ್ಲ. ಅವಶೇಷಗಳ ಅಡಿಯಲ್ಲಿ ಸಿಲುಕಿರುವವರನ್ನು ರಕ್ಷಿಸುವುದು ನಮ್ಮ ಆದ್ಯತೆ. ನಾಗರಿಕರಿಗೆ ಸಹಾಯ ಮಾಡಲು ಎರಡು ಹೆಲಿಕಾಪ್ಟರ್‌ಗಳನ್ನು ಸಿದ್ಧಪಡಿಸಲಾಗಿದೆ" ಎಂದರು.

ಇದನ್ನೂ ಓದಿ :ಚಂಡೀಗಢ- ಮನಾಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಏಕಮುಖ ಸಂಚಾರ ಪುನರಾರಂಭ: ದ್ವಿಮುಖ ಸಂಚಾರಕ್ಕೆ ಬೇಕು ಮತಷ್ಟು ಸಮಯ..

ABOUT THE AUTHOR

...view details