ಇಂಫಾಲ (ಮಣಿಪುರ): ಶಂಕಿತ ಬುಡಕಟ್ಟು ಉಗ್ರಗಾಮಿಗಳ ಗುಂಡಿಗೆ ಉಪವಿಭಾಗದ ಪೊಲೀಸ್ ಅಧಿಕಾರಿಯೊಬ್ಬರು ಸಾವನ್ನಪ್ಪಿರುವ ಘಟನೆ ಮಣಿಪುರದ ತೆಂಗನೌಪಾಲ್ ಜಿಲ್ಲೆಯ ಮೋರೆಹ ಎಂಬಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕುಕಿ- ಝೋ ಸಮುದಾಯದ ಜನರ ಪ್ರಾಬಲ್ಯವಿರುವ ಈಸ್ಟರ್ನ್ ಗ್ರೌಂಡ್ನಲ್ಲಿ ಹೊಸದಾಗಿ ನಿರ್ಮಿಸಲಾದ ಹೆಲಿಪ್ಯಾಡ್ ಅನ್ನು ಪರಿಶೀಲನೆ ನಡೆಸುತ್ತಿದ್ದ ವೇಳೆ ದಂಗೆಕೋರರ ಗುಂಪೊಂದು ಪೊಲೀಸರ ಮೇಲೆ ಗುಂಡು ಹಾರಿಸಿದೆ. ಈ ವೇಳೆ ಮೋರೆಹ ಎಸ್‌ಡಿಪಿಒ ಚಿಂಗ್ತಮ್ ಆನಂದ್ ಅವರಿಗೆ ಬುಲೆಟ್ ತಗುಲಿದೆ. ತಕ್ಷಣ ಅವರನ್ನು ಮೋರೆಹದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಯಿತು. ಅಲ್ಲಿ ಅವರು ಕೊನೆಯುಸಿರೆಳೆದರು. ಉಗ್ರರನ್ನು ಬಂಧಿಸಲು ಆ ಪ್ರದೇಶದಲ್ಲಿ ತೀವ್ರ ಕಾರ್ಯಾಚರಣೆ ಆರಂಭಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ವಿಶೇಷವಾಗಿ ಮೊರೆಹದಲ್ಲಿ ನೆಲೆಗೊಂಡಿರುವ ಹಲವಾರು ನಾಗರಿಕ ಸಮಾಜ ಸಂಘಟನೆಗಳು ಗಡಿ ಪಟ್ಟಣದಿಂದ ರಾಜ್ಯ ಪಡೆಗಳನ್ನು ತೆಗೆದುಹಾಕಲು ಒತ್ತಾಯಿಸಿದ ವಾರದ ನಂತರ ಈ ಘಟನೆ ನಡೆದಿದೆ. ಮಣಿಪುರದ ಪೊಲೀಸರು ಕಳೆದೆರಡು ದಿನಗಳಲ್ಲಿ, ಮೈಟೈಸ್ನ ಖಾಲಿ ನಿವಾಸಗಳಿಂದ ಪೀಠೋಪಕರಣಗಳು ಹಾಗೂ ಇತರ ಗೃಹೋಪಯೋಗಿ ವಸ್ತುಗಳನ್ನು ಕದ್ದಿದ್ದಾರೆ ಹಾಗೂ ಅಕ್ರಮವಾಗಿ ಭಾರತದ ಗಡಿಯನ್ನು ದಾಟಿದ್ದಾರೆ ಎನ್ನುವ ಆರೋಪದ ಮೇಲೆ 10ಕ್ಕೂ ಹೆಚ್ಚು ಮ್ಯಾನ್ಮಾರ್ ಪ್ರಜೆಗಳನ್ನು ಬಂಧಿಸಿದ್ದಾರೆ.