ಅಯೋಧ್ಯೆ (ಉತ್ತರ ಪ್ರದೇಶ) :ಇಡೀ ವಿಶ್ವವೇ ಜನವರಿ 22 ರಂದು ಅಯೋಧ್ಯೆ ರಾಮ ಮಂದಿರದ ಉದ್ಘಾಟನೆ ಕಾರ್ಯಕ್ರಮಕ್ಕೆ ಕಾತರದಿಂದ ಎದುರು ನೋಡುತ್ತಿದೆ. ಇನ್ನೊಂದೆಡೆ ಉದ್ಘಾಟನೆಗೆ ದಿನಗಳು ಹತ್ತಿರ ಬರುತ್ತಿದಂತೆ ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಅವರ ಕೆತ್ತನೆಯಯಲ್ಲಿ ಮೂಡಿ ಬಂದಿರುವ ರಾಮಲಲ್ಲಾ ಮೂರ್ತಿ, ಭವ್ಯ ಮಂದಿರದಲ್ಲಿ ಪ್ರತಿಷ್ಠಾಪನೆಗೆ ಆಯ್ಕೆಯಾಗಿದೆ. ಈ ಕುರಿತು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೆ ಮಾಡಿಕೊಂಡಿದೆ.
ಚಂಪತ್ ರಾಯ್ರಿಂದ ಮಾಹಿತಿ: ಅರುಣ್ ಯೋಗಿರಾಜ್ ಕೆತ್ತಿದ ರಾಮನ ವಿಗ್ರಹವನ್ನು ಅಯೋಧ್ಯೆಯ ರಾಮಮಂದಿರದಲ್ಲಿ ಸ್ಥಾಪಿಸಲಾಗುತ್ತಿದೆ. ಈ ಬಗ್ಗೆ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ತಿಳಿಸಿದರು. ಅಯೋಧ್ಯೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ್ದು, ಯೋಗಿರಾಜ್ ಅವರು ಕೆತ್ತಿದ ಮೂರ್ತಿಯ ಪ್ರಾಣಪ್ರತಿಷ್ಠಾಪನೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ಜೋಶಿ ಟ್ವೀಟ್:"ಎಲ್ಲಿ ರಾಮನೋ ಅಲ್ಲಿ ಹನುಮನು" ಅಯೋಧ್ಯೆಯಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ಕೆ ವಿಗ್ರಹ ಆಯ್ಕೆ ಅಂತಿಮಗೊಂಡಿದೆ. ನಮ್ಮ ನಾಡಿನ ಹೆಸರಾಂತ ಶಿಲ್ಪಿ ನಮ್ಮ ಹೆಮ್ಮೆಯ ಶ್ರೀ @yogiraj_arun ಅವರು ಕೆತ್ತಿರುವ ಶ್ರೀರಾಮನ ವಿಗ್ರಹ ಪುಣ್ಯಭೂಮಿ ಅಯೋಧ್ಯೆಯಲ್ಲಿ ಪ್ರತಿಷ್ಠಾಪನೆಗೊಳ್ಳಲಿದೆ. ರಾಮ ಹನುಮರ ಅವಿನಾಭಾವ ಸಂಬಂಧಕ್ಕೆ ಇದು ಮತ್ತೊಂದು ನಿದರ್ಶನ. ಹನುಮನ ನಾಡು ಕರ್ನಾಟಕದಿಂದ ರಾಮಲಲ್ಲಾನಿಗೆ ಇದೊಂದು ಮಹತ್ವಪೂರ್ಣ ಸೇವೆ ಎಂದರೆ ತಪ್ಪಾಗಲಾರದು.’’ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಟ್ವೀಟ್ ಮಾಡಿದ್ದರು.