ದುರ್ಗ್ (ಛತ್ತೀಸ್‌ಗಢ):ಅಜಾತಶತ್ರು ಎಂದೇ ಖ್ಯಾತಿಯಾದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ 98ನೇ ಜಯಂತಿ ಭಾನುವಾರ ಆಚರಿಸಲಾಯಿತು. ಅದ್ಭುತ ಸಂಸದೀಯ ಪಟುವಿನ ಪ್ರತಿಮೆ ಅನಾವರಣಗೊಳಿಸುವ ವಿಚಾರಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಕಾರ್ಯಕರ್ತರ ಮಧ್ಯೆ ಛತ್ತೀಸ್ಗಢದಲ್ಲಿ ಮಾರಾಮಾರಿ ನಡೆದಿದೆ.
ದುರ್ಗ್ ನಗರದ ಅಟಲ್ ಸ್ಮೃತಿ ಉದ್ಯಾನದಲ್ಲಿ ಬಿಜೆಪಿಯಿಂದ ವಾಜಪೇಯಿ ಅವರ ಪ್ರತಿಮೆ ನಿರ್ಮಾಣ ಮಾಡಲಾಗಿದೆ. ಇದನ್ನು ಕಾಂಗ್ರೆಸ್ ವಿರೋಧಿಸುತ್ತ ಬಂದಿದೆ. ಭಾನಿವಾರ ಮಾಜಿ ಪ್ರಧಾನಿಗಳ ಜನ್ಮ ದಿನದ ಹಿನ್ನೆಲೆಯಲ್ಲಿ ಪ್ರತಿಮೆಯನ್ನು ಉದ್ಘಾಟಿಸಲು ಬಿಜೆಪಿ ಮುಂದಾಗಿತ್ತು. ಇದಕ್ಕೆ ಕಾಂಗ್ರೆಸ್ ತೀವ್ರ ವಿರೋಧ ವ್ಯಕ್ತಪಡಿಸಿದ್ದರಿಂದ ಗಲಾಟೆ ಸಂಭವಿಸಿದೆ.
ಬಿಜೆಪಿ ಸಂಸದ ವಿಜಯ್ ಬಘೇಲ್ ಅವರು ಅಟಲ್ ಬಿಹಾರಿ ವಾಜಪೇಯಿ ಅವರ ಪ್ರತಿಮೆಯನ್ನು ಅನಾವರಣಗೊಳಿಸಲು ಮುಂದಾದಾಗ ಆಕ್ಷೇಪ ವ್ಯಕ್ತಪಡಿಸಿದ ಕಾಂಗ್ರೆಸ್ ಕಾರ್ಯಕರ್ತರು, ಇದಕ್ಕಾಗಿ ರಾಜ್ಯ ಸರ್ಕಾರದಿಂದ ಸೂಕ್ತ ಅನುಮತಿ ಪಡೆದಿಲ್ಲ ಎಂದು ಆರೋಪಿಸಿದರು.