ನವದೆಹಲಿ :ವಿಮಾನ ನಿಲ್ದಾಣಗಳಲ್ಲಿ ಪ್ರಯಾಣಿಕರಿಗೆ ನೀಡಲಾಗುವ ಬೋರ್ಡಿಂಗ್ ಪಾಸ್ಗಳಿಗೆ ವಿಧಿಸಲಾಗುವ ಶುಲ್ಕವನ್ನು ಶೀಘ್ರವೇ ಪರಿಶೀಲಿಸಲಾಗುವುದು ಎಂದು ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಹೇಳಿದ್ದಾರೆ. ಬೋರ್ಡಿಂಗ್ ಪಾಸ್ಗಳಿಗೆ ಸ್ಪೈಸ್ಜೆಟ್ ವಿಮಾನಯಾನ ಸಂಸ್ಥೆ ಶುಲ್ಕ ವಿಧಿಸಿದ್ದರ ಬಗ್ಗೆ ಪ್ರಯಾಣಿಕನೊಬ್ಬ ಸಚಿವರ ಗಮನಕ್ಕೆ ಟ್ವೀಟ್ ಮೂಲಕ ತಂದಿದ್ದರು.
ಈ ಬಗ್ಗೆ ಪ್ರತಿಕ್ರಿಯಿಸಿರುವ ಸಚಿವರು, ನಿಮ್ಮ ಆಕ್ಷೇಪವನ್ನು ಒಪ್ಪಿಕೊಳ್ಳುವೆ. ಈ ಬಗ್ಗೆ ಆದಷ್ಟು ಬೇಗ ಪರಿಶೀಲಿಸಿ ಇತ್ಯರ್ಥಕ್ಕೆ ಬರಲಾಗುವುದು ಎಂದು ಟ್ವೀಟ್ ಮೂಲಕ ಪ್ರತಿಕ್ರಿಯಿಸಿದ್ದಾರೆ. ಕೆಲ ವಿಮಾನಯಾನ ಸಂಸ್ಥೆಗಳು ಪ್ರಯಾಣಿಕರಿಗೆ ಬೋರ್ಡಿಂಗ್ ಪಾಸ್ ನೀಡಲು ಶುಲ್ಕ ವಿಧಿಸುತ್ತಿದ್ದು, ಇದು ಹೆಚ್ಚುವರಿಯಾಗಿದೆ.