ಕರ್ನಾಟಕ

karnataka

ಪಾನಮತ್ತರಾಗಿದ್ದ ಸಿಎಂ ಮಾನ್​ರನ್ನು ವಿಮಾನದಿಂದ ಕೆಳಗಿಳಿಸಲಾಗಿತ್ತಾ?: ಏನಿದು ಹೊಸ ವಿವಾದ

By

Published : Sep 20, 2022, 8:44 PM IST

Updated : Sep 20, 2022, 9:39 PM IST

ಪಾನಮತ್ತರಾಗಿದ್ದರು ಎಂಬ ಕಾರಣಕ್ಕೆ ಪಂಜಾಬ್ ಸಿಎಂ ಭಗವಂತ್ ಮಾನ್ ಅವರನ್ನು ದೆಹಲಿಗೆ ಬರುತ್ತಿದ್ದ ವಿಮಾನದಿಂದ ಜರ್ಮನಿಯ ಫ್ರಾಂಕ್‌ಫರ್ಟ್ ವಿಮಾನ ನಿಲ್ದಾಣದಲ್ಲಿ ಕೆಳಗಿಸಲಾಗಿತ್ತು ಎಂಬ ಆರೋಪ ಕೇಳಿ ಬಂದಿದೆ.

scindia-says-will-look-into-allegations-that-punjab-cm-was-deplaned-for-being-drunk
ಪಾನಮತ್ತರಾಗಿದ್ದ ಸಿಎಂ ಮಾನ್​ರನ್ನು ವಿಮಾನದಿಂದ ಕೆಳಗಿಸಲಾಗಿತ್ತಾ?

ನವದೆಹಲಿ: ಜರ್ಮನಿಯಲ್ಲಿ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರನ್ನು ವಿಮಾನದಿಂದ ಕೆಳಗಿಸಲಾಗಿದೆ ಎಂಬ ವಿಷಯ ರಾಜಕೀಯ ಆರೋಪ ಮತ್ತು ಪ್ರತ್ಯಾರೋಪಗಳಿಗೆ ಕಾರಣವಾಗಿದೆ. ಪಾನಮತ್ತರಾಗಿದ್ದರು ಎಂಬ ಕಾರಣಕ್ಕೆ ಭಗವಂತ್ ಮಾನ್ ಅವರನ್ನು ಕೆಳಗಿಸಲಾಗಿದೆ ಎಂದು ಪ್ರತಿಪಕ್ಷಗಳು ಆರೋಪ ಮಾಡಿದ್ದರೆ, ಇದನ್ನು ಆಮ್ ಆದ್ಮಿ ಪಕ್ಷವು ಆಧಾರರಹಿತ ಎಂದು ತಳ್ಳಿ ಹಾಕಿದೆ. ಇದರ ನಡುವೆ ಈ ಘಟನೆ ಬಗ್ಗೆ ಪರಿಶೀಲಿಸುವುದಾಗಿ ಕೇಂದ್ರ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ತಿಳಿಸಿದ್ದಾರೆ.

ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಹೂಡಿಕೆದಾರರನ್ನು ಆಕರ್ಷಿಸಲು ಜರ್ಮನಿ ಪ್ರವಾಸ ಕೈಗೊಂಡಿದ್ದರು. ತಮ್ಮ ಎಂಟು ದಿನಗಳ ಪ್ರವಾಸದ ಬಳಿಕ ಸೋಮವಾರ ಮರಳಿದ್ದಾರೆ. ಆದರೆ, ಪಾನಮತ್ತರಾಗಿದ್ದರು ಎಂಬ ಕಾರಣಕ್ಕೆ ದೆಹಲಿಗೆ ಬರುತ್ತಿದ್ದ ವಿಮಾನದಿಂದ ಫ್ರಾಂಕ್‌ಫರ್ಟ್ ವಿಮಾನ ನಿಲ್ದಾಣದಲ್ಲಿ ಅವರನ್ನು ಕೆಳಗಿಸಲಾಗಿತ್ತು ಎಂಬ ಆರೋಪ ಕೇಳಿ ಬಂದಿದೆ.

ಸೋಮವಾರ ಸಿಎಂ ಮಾನ್ ಅವರನ್ನು ಫ್ರಾಂಕ್‌ಫರ್ಟ್ ವಿಮಾನ ನಿಲ್ದಾಣದಲ್ಲಿ ಲುಫ್ಥಾನ್ಸ ವಿಮಾನದಿಂದ ಕೆಳಗಿಳಿಸಲಾಗಿತ್ತು ಎಂದು ಶಿರೋಮಣಿ ಅಕಾಲಿದಳ (ಎಸ್‌ಎಡಿ) ಮುಖ್ಯಸ್ಥ ಸುಖ್‌ಬೀರ್ ಸಿಂಗ್ ಬಾದಲ್ ಆರೋಪಿಸಿದ್ದಾರೆ. ಮತ್ತೊಂದೆಡೆ ಈ ವಿಷಯದ ಬಗ್ಗೆ ತನಿಖೆ ನಡೆಸಬೇಕೆಂದು ಒತ್ತಾಯಿಸಿ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರಿಗೆ ಕಾಂಗ್ರೆಸ್ ನಾಯಕ ಪರತಾಪ್ ಸಿಂಗ್ ಬಾಜ್ವಾ ಪತ್ರ ಬರೆದಿದ್ದಾರೆ.

ಈ ಬಗ್ಗೆ ಸುದ್ದಿಗಾರರಿಗೆ ಪ್ರತಿಕ್ರಿಯಿಸಿರುವ ಸಿಂಧಿಯಾ, ಇದು ವಿದೇಶದಲ್ಲಿ ನಡೆದ ಘಟನೆಯಾಗಿದೆ. ನಾವು ಸತ್ಯಾಸತ್ಯತೆ ಪರಿಶೀಲಿಸಿ ಖಚಿತಪಡಿಸಿಕೊಳ್ಳಬೇಕಿದೆ. ಇದರ ಮಾಹಿತಿಯನ್ನು ಲುಫ್ಥಾನ್ಸ ಏರ್‌ಲೈನ್‌ ಒದಗಿಸಬೇಕಿದೆ. ಸದ್ಯ ನನಗೆ ಮಾಹಿತಿ ಆಧಾರದ ಮೇಲೆ ನಾನು ಖಂಡಿತವಾಗಿಯೂ ಅದನ್ನು ಪರಿಶೀಲಿಸುತ್ತೇನೆ ಎಂದು ತಿಳಿಸಿದ್ದಾರೆ. ಇತ್ತ, ಸಿಎಂ ಭಗವಂತ್ ಮಾನ್ ಪಾನಮತ್ತರಾಗಿದ್ದರು ಎಂಬ ಕಾರಣಕ್ಕೆ ಕೆಳಗಿಸಲಾಗಿದೆ ಎನ್ನುವ ಆರೋಪವನ್ನು ಆಮ್ ಆದ್ಮಿ ಪಕ್ಷ ಆಧಾರರಹಿತ ಮತ್ತು ಸುಳ್ಳು ಆರೋಪ ಎಂದು ಹೇಳಿದೆ.

ಮಾನ್​ ವಿರುದ್ಧ ಅಸಂಬದ್ಧ ಆರೋಪ ಎಂದ ಕೇಜ್ರಿವಾಲ್:ಈ ನಡುವೆ ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್, ಪಂಜಾಬ್​ ಸಿಎಂ ಭಗವಂತ್ ಮಾನ್ ವಿರುದ್ಧ ಕೇಳಿದ ಬಂದ ಆರೋಪದ ಪ್ರತಿಕ್ರಿಯಿಸಿದ್ದಾರೆ. ಗುಜರಾತ್‌ನ ವಡೋದರಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕೇಜ್ರಿವಾಲ್, ಮಾನ್​ ಅವರ ಕೆಲಸದಲ್ಲಿ ತಪ್ಪು ಹುಡುಕಲು ಪ್ರತಿಪಕ್ಷಗಳಿಗೆ ಸಾಧ್ಯವಿಲ್ಲ. ಹೀಗಾಗಿ ಮಾನ್‌ ಅವರ ಹೆಸರ ಮೇಲೆ ಪ್ರತಿಪಕ್ಷಗಳು ಕೆಸರು ಎರಚುತ್ತಿವೆ ಮತ್ತು ಸುಳ್ಳುಗಳನ್ನು ಹರಡುತ್ತಿವೆ ಎಂದು ಟೀಕಿಸಿದ್ದಾರೆ.

75 ವರ್ಷಗಳ ನಂತರ ಪಂಜಾಬ್‌ಗೆ ಅತ್ಯಂತ ಪ್ರಾಮಾಣಿಕ ಮತ್ತು ಕಠಿಣ ಪರಿಶ್ರಮದ ಮುಖ್ಯಮಂತ್ರಿ ಸಿಕ್ಕಿದ್ದಾರೆ. ಈ ಹಿಂದೆ ಪಂಜಾಬ್‌ನಲ್ಲಿ ಯಾವುದೇ ಸರ್ಕಾರ ಮಾಡದ ಕೆಲಸಗಳನ್ನು ಕಳೆದ ಆರು ತಿಂಗಳಲ್ಲಿ ಮಾನ್ ಮಾಡಿದ್ದಾರೆ. ಮಾನ್‌ ವಿರುದ್ಧ ಮಾಡಿರುವ ಇವೆಲ್ಲ ಆರೋಪಗಳು ಸುಳ್ಳು ಹಾಗೂ ಎಲ್ಲ ಅಸಂಬದ್ಧ. ಮಾನ್ ಅವರನ್ನು ತಡೆಯಲು ಪ್ರತಿಪಕ್ಷಗಳು ಪ್ರಯತ್ನಿಸುತ್ತಿವೆ. ಆದರೆ, ಜನರು ಎಲ್ಲವನ್ನೂ ನೋಡುತ್ತಿದ್ದಾರೆ. ಅವರ ಕೆಲಸದಿಂದ ಜನತೆ ಸಂತೋಷಪಡುತ್ತಿದ್ದಾರೆ ಎಂದು ಕೇಜ್ರಿವಾಲ್ ಹೇಳಿದರು.

ಇದನ್ನೂ ಓದಿ:ವಿಡಿಯೋ: ಕೇಜ್ರಿವಾಲ್​ ಬರ್ತಿದ್ದಂತೆ 'ಮೋದಿ ಮೋದಿ' ಎಂಬ ಘೋಷಣೆ

Last Updated : Sep 20, 2022, 9:39 PM IST

ABOUT THE AUTHOR

...view details