ವಾರಾಣಸಿ (ಉತ್ತರ ಪ್ರದೇಶ): ಮಕ್ಕಳಾಗದ ಮತ್ತು ಬಂಜೆತನದ ಕುರಿತಂತೆ ಸಮಾಜದಲ್ಲಿ ಆಗ್ಗಾಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಲೇ ಇರುತ್ತದೆ. ಎಷ್ಟೇ ವೈದ್ಯಕೀಯ ತಪಾಸಣೆಗಳಿಗೆ ಒಳಗಾದರೂ ಕೆಲ ದಂಪತಿಗಳಿಗೆ ಮಕ್ಕಳು ಆಗುವುದಿಲ್ಲ. ಇಂತಹ ಸಂದರ್ಭದಲ್ಲಿ ಚರ್ಚೆಗೆ ಬರುವ ಅಂಶವೇ ಬಂಜೆತನಕ್ಕೆ ಕಾರಣ ಮಹಿಳೆಯೋ ಅಥವಾ ಪುರುಷನೋ ಎಂಬುವುದು. ಈ ವೇಳೆ ಹೆಚ್ಚಿನ ಸಂದರ್ಭದಲ್ಲಿ ಮಹಿಳೆ ಎಂದರೆ ಮದುವೆಯಾಗಿ ಮನೆಗೆ ಬಂದ ಸೊಸೆಯನ್ನೇ ದೂಷಿಸಲಾಗುತ್ತದೆ. ಆದರೆ, ಇದೀಗ ಹೊಸ ವಿಷಯವನ್ನು ಬಹಿರಂಗ ಪಡಿಸಿದ್ದಾರೆ.
ಇದನ್ನೂ ಓದಿ:ಕೋವಿಡ್ ಲಸಿಕೆಗಳು ಬಂಜೆತನಕ್ಕೆ ಕಾರಣವಾ?: ಆರೋಗ್ಯ ಇಲಾಖೆ ಸ್ಪಷ್ಟನೆ ಹೀಗಿದೆ
ಉತ್ತರ ಪ್ರದೇಶದ ವಾರಾಣಸಿಯಲ್ಲಿರುವ ಬನಾರಸ್ ಹಿಂದೂ ವಿಶ್ವವಿದ್ಯಾಲಯ (ಬಿಎಚ್‌ಯು)ದಲ್ಲಿ ಮೂರು ದಿನಗಳ ಡಿಎನ್‌ಎ ಡಿಫೆನ್ಸ್ ಮೆಕ್ಯಾನಿಸಂ ಆಧಾರಿತ ಅಡ್ನೆಟ್ 2023ರ ಸಮ್ಮೇಳನ ಆಯೋಜಿಸಲಾಗಿದೆ. ಶನಿವಾರ ಎರಡನೇ ದಿನದ ಸಮ್ಮೇಳನದಲ್ಲಿ ಬಂಜೆತನ ವಿಷಯಕ್ಕೆ ಸಂಬಂಧಿಸಿದಂತೆ ಹೈದರಾಬಾದ್ನ ಸೆಲ್ಯುಲಾರ್ ಮತ್ತು ಮಾಲಿಕ್ಯುಲರ್ ಬಯಾಲಜಿ ಸೆಂಟರ್ (Centre for Cellular and Molecular Biology - CCMB) ನಿರ್ದೇಶಕ ಪ್ರೊ.ಕೆ.ತಂಗರಾಜ್ ಮಾತನಾಡಿದರು.
ಬಂಜೆತನ ಕುರಿತು ಹೇಳಿದ್ದೇನು?:ಬಂಜೆತನ ಬಗ್ಗೆ ಪ್ರೊ.ಕೆ.ತಂಗರಾಜ್ ಮಾಡಿದ ಭಾಷಣ ಕುರಿತ ಬಿಎಚ್‌ಯು ವಿಜ್ಞಾನಿ ಪ್ರೊ.ಜ್ಞಾನೇಂದ್ರ ಚೌಬೆ ವಿವರಣೆ ನೀಡಿದ್ದಾರೆ. ನಮ್ಮ ಸಮಾಜದಲ್ಲಿ ಮಕ್ಕಳಾಗದಿರಲು ಸೊಸೆಯನ್ನೇ ಹೊಣೆಗಾರರನ್ನಾಗಿಸಲಾಗುತ್ತದೆ. ಆದರೆ, ಅದು ಹಾಗಲ್ಲ. ಸುಮಾರು 90 ಪ್ರತಿಶತ ಪ್ರಕರಣಗಳಲ್ಲಿ ಸಂತಾನಹೀನತೆಗೆ ಹುಡುಗನ ತಾಯಿ ಹೆಚ್ಚು ಕಾರಣ ಎಂಬುವುದಾಗಿ ಸಂಶೋಧನೆಯು ಬಹಿರಂಗಪಡಿಸಿದೆ. ಹೀಗಾಗಿ ಬಂಜೆತನಕ್ಕೆ ಸೊಸೆಗಿಂತ ಹುಡುಗನ ತಾಯಿ ಹೆಚ್ಚು ಜವಾಬ್ದಾರರಾಗಬಹುದು ಎಂದು ಪ್ರೊ. ತಂಗರಾಜ್ ಮಾಹಿತಿ ನೀಡಿದರು ಅಂತಾ ಜ್ಞಾನೇಂದ್ರ ಚೌಬೆ ಹೇಳಿದರು.