ಗುವಾಹಟಿ( ಅಸ್ಸೋಂ) : ಇಸ್ರೋದಿಂದ ಚಂದ್ರಯಾನ - 3 ಉಡಾವಣೆಗೆ ಕ್ಷಣಗಣನೆ ಪ್ರಾರಂಭವಾಗಿದೆ. ಶುಕ್ರವಾರ ಮಧ್ಯಾಹ್ನ 2.35ಕ್ಕೆ ನಭಕ್ಕೆ ಹಾರಲಿರುವ ಮೂರನೇ ಲೂನರ್ ಮಿಷನ್ ಚಂದ್ರಯಾನ- 3 ಉಡಾವಣೆ ಹಿಂದಿನ ಪ್ರಮುಖ ವ್ಯಕ್ತಿಗಳಲ್ಲಿ ತೇಜ್‌ಪುರ ವಿಶ್ವವಿದ್ಯಾಲಯದ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ಎಂಜಿನಿಯರಿಂಗ್ ವಿಭಾಗದ ಪದವೀಧರ ಚಯನ್ ದತ್ತಾ ಅವರು ಕೂಡ ಒಬ್ಬರು. ಈ ಮೂಲಕ ಅಸ್ಸೋಂನ ವಿಜ್ಞಾನಿಯೊಬ್ಬರು ಭಾರತ ಮತ್ತು ಪ್ರಪಂಚದ ವೈಜ್ಞಾನಿಕ ಲೋಕಕ್ಕೆ ಒಂದು ಮಹತ್ವದ ಮೈಲಿಗಲ್ಲನ್ನು ಸ್ಥಾಪಿಸಲಿದ್ದಾರೆ.
ದತ್ತಾ, ಪ್ರಸ್ತುತ ಯುಆರ್ ರಾವ್ ಉಪಗ್ರಹ ಕೇಂದ್ರ, ಬಾಹ್ಯಾಕಾಶ ಇಲಾಖೆಯಲ್ಲಿ ವಿಜ್ಞಾನಿ/ಎಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಚಂದ್ರಯಾನ-3 ಗಾಗಿ ಉಪ ಯೋಜನಾ ನಿರ್ದೇಶಕರಾಗಿ ನೇಮಕಗೊಂಡಿದ್ದಾರೆ. ಈ ಜವಾಬ್ದಾರಿಯಲ್ಲಿ ದತ್ತಾ ಅವರು ಕಾರ್ಯಾಚರಣೆಯ ನಿರ್ಣಾಯಕ ಅಂಶಗಳನ್ನು ಮೇಲ್ವಿಚಾರಣೆ ಮಾಡುತ್ತಾರೆ. ನಿರ್ದಿಷ್ಟವಾಗಿ ಚಂದ್ರನ ಲ್ಯಾಂಡರ್‌ನ 'ಆನ್ ಬೋರ್ಡ್ ಕಮಾಂಡ್ ಟೆಲಿಮೆಟ್ರಿ, ಡೇಟಾ ಹ್ಯಾಂಡ್ಲಿಂಗ್ ಮತ್ತು ಸ್ಟೋರೇಜ್ ಸಿಸ್ಟಮ್' ಬಗ್ಗೆ ಮೇಲ್ವಿಚಾರಣೆ ಮಾಡುತ್ತಾರೆ. ಬಾಹ್ಯಾಕಾಶ ನೌಕೆಯ ಕಾರ್ಯಗಳನ್ನು ನಿಯಂತ್ರಿಸಲು ಈ ವ್ಯವಸ್ಥೆಯು ಅತ್ಯಗತ್ಯವಾಗಿದೆ. ಇದು ಕಕ್ಷೆಯ ಕೇಂದ್ರ ನರ್ವ್ ಸಿಸ್ಟಮ್ ಆಗಿ ಕಾರ್ಯನಿರ್ವಹಿಸುತ್ತದೆ.
ತೇಜ್‌ಪುರ ವಿಶ್ವವಿದ್ಯಾಲಯದ ಉಪಕುಲಪತಿ ಪ್ರೊ. ಶಂಭುನಾಥ್ ಸಿಂಗ್ ಈ ಬಗ್ಗೆ ಮಾತನಾಡಿದ್ದು, ಈ ಮಿಷನ್‌ನ ಮಹತ್ವವನ್ನು ತಿಳಿಸಿದರು. ಬಾಹ್ಯಾಕಾಶ ಪರಿಶೋಧನೆಗೆ ಭಾರತದ ಬದ್ಧತೆಯನ್ನು ಪ್ರದರ್ಶಿಸುವುದು ಮಾತ್ರವಲ್ಲದೇ ದೇಶದೊಳಗಿನ ಅಸಾಧಾರಣ ಪ್ರತಿಭೆ ಮತ್ತು ಪರಿಣತಿಯನ್ನು ಕೂಡ ಎತ್ತಿ ತೋರಿಸಲಿದೆ. ಅಸ್ಸೋಂನ ಲಖಿಂಪುರ ಜಿಲ್ಲೆಯಲ್ಲಿ ಜನಿಸಿದ ದತ್ತಾ ಅವರು ಚಂದ್ರಯಾನ-3 ರ ಉಡಾವಣಾ ನಿಯಂತ್ರಣ ಕಾರ್ಯಾಚರಣೆಗಳ ಮುಖ್ಯಸ್ಥರಾಗಿ ನೇಮಕಗೊಂಡಿರುವುದು ಅಸ್ಸೋಂ ಮತ್ತು ತೇಜ್‌ಪುರ ವಿಶ್ವವಿದ್ಯಾಲಯದ ಜನರಿಗೆ ಮಾತ್ರವಲ್ಲದೇ ಇಡೀ ದೇಶಕ್ಕೆ ಅಪಾರ ಹೆಮ್ಮೆಯ ಕ್ಷಣವಾಗಿದೆ ಎಂದು ಹೇಳಿದ್ದಾರೆ.