ಪ್ರಯಾಗ್ರಾಜ್(ಉತ್ತರಪ್ರದೇಶ) :ಅಖಾರ ಪರಿಷತ್ ಅಧ್ಯಕ್ಷ ಮಹಾಂತ ನರೇಂದ್ರ ಗಿರಿ ಅವರ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ನಿನ್ನೆ ಪತ್ತೆಯಾಗಿತ್ತು. ಸ್ಥಳದಲ್ಲಿ ಸೂಸೈಡ್ ನೋಟ್ ಕೂಡ ಲಭ್ಯವಾಗಿತ್ತು. ಸೂಕ್ತ ತನಿಖೆಗೆ ಅನೇಕ ಆಗ್ರಹಗಳು ಕೇಳಿ ಬರುತ್ತಿದೆ. ಇಂದು ಮರಣೋತ್ತರ ಪರೀಕ್ಷೆ ನಡೆಯಲಿದೆ.
ಬಘಂಬ್ರಿ ಗಡ್ಡಿ ಮಠದಲ್ಲಿನ ಅವರ ಕೋಣೆಯಲ್ಲಿ ನರೇಂದ್ರ ಗಿರಿ ಅವರ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ ಆಗಿರುವುದು ಅನೇಕ ಅನುಮಾನಗಳಿಗೆ ಕಾರಣವಾಗಿದೆ. ಪ್ರಕರಣದ ತನಿಖೆ ಹಲವು ವಿಚಾರಗಳನ್ನು ತೆರೆದಿಡುತ್ತಿದ್ದು, ತನಿಖೆ ಚುರುಕುಗೊಂಡಿದೆ.
ಕಳೆದ ಕೆಲ ತಿಂಗಳಿಂದ ನರೇಂದ್ರ ಗಿರಿ ಹಾಗೂ ಅವರ ಶಿಷ್ಯ ಆನಂದ ಗಿರಿ ಅವರ ನಡುವೆ ಮನಸ್ತಾಪವಿತ್ತು. ದೇವಾಲಯದ ಹಣ ದುರುಪಯೋಗ ಮಾಡಿಕೊಂಡಿದ್ದಾರೆ ಎಂಬ ಕಾರಣಕ್ಕಾಗಿ ಆನಂದ ಗಿರಿ ವಿರುದ್ಧ ಕ್ರಮಕೈಗೊಳ್ಳಲಾಗಿತ್ತು. ಇದಾದ ಬಳಿಕ ಅವರನ್ನ ಮಠದಿಂದ ಹೊರ ಹಾಕಲಾಗಿತ್ತು. ಹೀಗಾಗಿ, ನರೇಂದ್ರ ಗಿರಿ ವಿರುದ್ಧ ಅವರು ಅನೇಕ ರೀತಿಯ ಹೇಳಿಕೆ ನೀಡಿ, ಗಂಭೀರ ಆರೋಪ ಮಾಡಿದ್ದರು. ಇದರಿಂದ ನರೇಂದ್ರ ಗಿರಿ ಅಸಮಾಧಾನಗೊಂಡಿದ್ದರು ಎನ್ನಲಾಗಿದೆ.
ಡೆತ್ನೋಟ್ನಲ್ಲೇನಿದೆ?
ಡೆತ್ನೋಟ್ನಲ್ಲಿ, ಶಿಷ್ಯ ಆನಂದ ಗಿರಿ ನನಗೆ ಅವಮಾನಗೊಳಿಸಲು ಪ್ರಯತ್ನ ಪಟ್ಟಿದ್ದರು. ಹುಡುಗಿಯೊಂದಿಗೆ ನನ್ನ ಮಾರ್ಫ್ (ನಕಲಿ) ಫೋಟೋ ಇಟ್ಟುಕೊಂಡು ಅದನ್ನು ಸಾರ್ವಜನಿಕ ವಲಯದಲ್ಲಿ ಶೀಘ್ರದಲ್ಲೇ ಬಿಡುಗಡೆ ಮಾಡಲು ಸಿದ್ಧತೆ ನಡೆಸಿದ್ದರು. ಆನಂದ ಗಿರಿ ಕಂಪ್ಯೂಟರ್ನಲ್ಲಿ ಫೋಟೋಗಳು ಇದ್ದವು.
ಅಲ್ಲದೇ ಆನಂದ ಗಿರಿ ಕೂಡ, ಈ ಫೋಟೋ ಎಲ್ಲೆಡೆ ಹರಡಿದರೆ ಎಷ್ಟು ಜನರಿಗೆ ನಿಮ್ಮ ಮುಗ್ಧತೆಯನ್ನು ಸಾಬೀತುಪಡಿಸುತ್ತೀರಿ? ಎಂದು ನನ್ನನ್ನು ಕೇಳಿದ್ದರು. ನಾನು ಸಮಾಜದಲ್ಲಿ ಘನತೆಯಿಂದ ಬದುಕಿದ ವ್ಯಕ್ತಿ. ಈ ಅವಮಾನ ತಾಳಲಾರೆನು. ಹಾಗಾಗಿ ಆತ್ಮಹತ್ಯೆಗೆ ಶರಣಾಗುತ್ತಿದ್ದೇನೆ ಎಂದು ಡೆತ್ ನೋಟ್ನಲ್ಲಿ ಬರೆದಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಇದನ್ನೂ ಓದಿ:ನರೇಂದ್ರ ಗಿರಿ ನಿಗೂಢ ಸಾವಿನ ತನಿಖೆಯನ್ನು CBIಗೆ ವಹಿಸಬೇಕು: ಕೋರ್ಟ್ ಮೊರೆ ಹೋದ ಸುನಿಲ್ ಚೌಧರಿ
ತನಿಖೆ ಚುರುಕುಗೊಂಡಿದೆ. ಗಿರಿ ಅನೇಕ ಜನರೊಂದಿಗೆ ಅನೇಕ ಭಿನ್ನಾಭಿಪ್ರಾಯಗಳನ್ನು ಹೊಂದಿದ್ದರು. ಬ್ಲ್ಯಾಕ್ಮೈಲ್ ಸಿದ್ಧಾಂತವನ್ನು ಕಡೆಗಣಿಸಲಾಗದು. ಆನಂದ್ ಗಿರಿಯ ಹೊರತಾಗಿ ಇದರ ಹಿಂದೆ ಅನೇಕ ಪ್ರಭಾವಿ ವ್ಯಕ್ತಿಗಳಿದ್ದಾರೆ. ತನಿಖೆ ಮಾಡಬೇಕಾಗಿದೆ ಎಂದು ಬಘಂಬ್ರಿ ಮಠದ ಶಿಷ್ಯರೊಬ್ಬರು ಹೇಳಿದ್ದಾರೆ.
ಇನ್ನೂ ಅಂತ್ಯಸಂಸ್ಕಾರ ಸಂದರ್ಭದಲ್ಲಿ ನಗರದ ವಿವಿಧ ಪ್ರದೇಶಗಳಿಂದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಬರುವ ನಿರೀಕ್ಷೆಯಿದೆ. ಇದನ್ನು ಗಮನದಲ್ಲಿಟ್ಟುಕೊಂಡು, ನಗರ ಪ್ರದೇಶದ ಒಂದರಿಂದ 12 ನೇ ತರಗತಿ ವರೆಗಿನ ಎಲ್ಲ ಶಾಲೆಗಳನ್ನು ಮುಚ್ಚುವಂತೆ ಆದೇಶ ಹೊರಡಿಸಲಾಗಿದೆ. ಇದರೊಂದಿಗೆ, ನಗರದಲ್ಲಿ ನಡೆಯುತ್ತಿರುವ ಕೋಚಿಂಗ್ ತರಗತಿಗಳು ಕೂಡ ಈ ಆದೇಶವನ್ನು ಅನುಸರಿಸಬೇಕಾಗಿದೆ.
ಇಂದು ಪೋಸ್ಟ್ಮಾರ್ಟಂ
ಇವತ್ತು ಮಹಾಂತ ನರೇಂದ್ರ ಗಿರಿ ಅವರ ಪೋಸ್ಟ್ ಮಾರ್ಟಂ ನಡೆಯಲಿದೆ. ಇದಾದ ಬಳಿಕ ಅವರ ಅಂತ್ಯಕ್ರಿಯೆ ನಡೆಯಲಿದೆ. ಈ ನಡುವೆ ಪ್ರಯಾಗರಾಜ್ನಲ್ಲಿ ಇಂದೂ ಕೂಡಾ ಶಾಲಾ ಕಾಲೇಜುಗಳು ಬಂದ್ ಆಗಿವೆ.