ಜಮ್ಮು:ಸುಂದರ ಕಣಿವೆ ಜಮ್ಮು ಕಾಶ್ಮೀರ ಉಗ್ರರ ಉಪಟಳದಿಂದ ಬೆಂದಿದೆ. ಇದನ್ನು ಹೋಗಲಾಡಿಲು ಸರ್ಕಾರ ಅನೇಕ ಕ್ರಮಗಳನ್ನು ಕೈಗೊಂಡಿದ್ದರೂ ಬಂದೂಕಿನ ಸದ್ದು ಮಾತ್ರ ನಿಂತಿಲ್ಲ. ಇದೀಗ ಕಣಿವೆಯ 57 ಶಾಲೆಗಳು, ರಸ್ತೆಗಳಿಗೆ ಹುತಾತ್ಮರು ಮತ್ತು ಗಣ್ಯರ ಹೆಸರನ್ನು ಮರುನಾಮಕರಣ ಮಾಡಿದೆ. ರಾಷ್ಟ್ರಸೇವೆಯಲ್ಲಿ ಪ್ರಾಣತ್ಯಾಗ ಮಾಡಿದವರ ಹೆಸರನ್ನು ಶಾಶ್ವತವಾಗಿ ಸ್ಮರಿಸಲು ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ನೇತೃತ್ವದ ಸರ್ಕಾರ ಮುಂದಾಗಿದೆ.
2017 ರಲ್ಲಿ ಶ್ರೀನಗರದ ಜಾಮಿಯಾ ಮಸೀದಿ ಮುಂದೆ ಹತ್ಯೆಯಾದ ಕಾಶ್ಮೀರಿ ಪಂಡಿತ ಮಖನ್ ಲಾಲ್ ಬಿಂದ್ರೂ ಮತ್ತು ಡಿಎಸ್ಪಿ ಮೊಹಮ್ಮದ್ ಅಯೂಬ್ ಪಂಡಿತ್ ಸೇರಿದಂತೆ ಗಣ್ಯರ ಹೆಸರನ್ನು ರಸ್ತೆ, ಶಾಲೆಗಳಿಗೆ ನೀಡಲು ಸರ್ಕಾರ ಅನುಮತಿಸಿದೆ ಎಂದು ಸರ್ಕಾರದ ಕಾರ್ಯದರ್ಶಿ ಪಿಯೂಷ್ ಸಿಂಗ್ಲಾ ಅವರು ಹೊರಡಿಸಿದ ಆದೇಶದಲ್ಲಿ ತಿಳಿಸಿದ್ದಾರೆ.
ಬಾಲಕಿಯರ ಶಾಲೆಗೆ ಅಧಿಕಾರಿಯ ಹೆಸರು:ಶ್ರೀನಗರದ ಫಾರ್ಮಸಿಯೊಂದರ ಮಾಲೀಕರಾಗಿದ್ದ ಪಂಡಿತ್ ಮಖನ್ ಲಾಲ್ ಬಿಂದ್ರೂ ಅವರ ಹೆಸರನ್ನು ಶ್ರೀನಗರದ ನಾಝ್ನಿಂದ ಗೊನಿಖಾನ್ ಮಾರುಕಟ್ಟೆಗೆ ಸಂಪರ್ಕಿಸುವ ರಸ್ತೆಗೆ ನಾಮಕರಣ ಮಾಡಲಾಗಿದೆ. ಅದರಂತೆ ಖಾನ್ಯಾರ್ನಲ್ಲಿನ ಬಾಲಕಿಯರ ಸರ್ಕಾರಿ ಶಾಲೆಗೆ ಡಿಎಸ್ಪಿ ಮೊಹಮ್ಮದ್ ಅಯೂಬ್ ಪಂಡಿತ್ ಅವರ ಹೆಸರಿಡಲಾಗಿದೆ. ಅಯೂಬ್ ಪಂಡಿತ್ ಅವರನ್ನು 2017 ರ ಜೂನ್ 23 ರಂದು ಜಾಮಿಯಾ ಮಸೀದಿ ಬಳಿಗೆ ಎಳೆದು ತಂದು ವಿವಸ್ತ್ರಗೊಳಿಸಿ ಕಬ್ಬಿಣದ ರಾಡ್‌ಗಳಿಂದ ಹೊಡೆದು ಕೊಲ್ಲಲಾಗಿತ್ತು.
ಶೌರ್ಯ ಮೆರೆದ ಅಧಿಕಾರಿಯ ನೆನಪು:ಗಗ್ವಾಲ್ (ಕಥುವಾ) ನಲ್ಲಿರುವ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಗೆ ಮೇಜರ್ ರೋಹಿತ್ ಕುಮಾರ್ ಹೆಸರಿಟ್ಟರೆ, ಭಯೋತ್ಪಾದಕರಿಂದ ಹತ್ಯೆಗೀಡಾದ ಇನ್ಸ್‌ಪೆಕ್ಟರ್ ಶಬೀರ್ ಅಹ್ಮದ್ ಭಟ್ ಅವರ ಹೆಸರನ್ನು ಶಂಸಾಬಾದ್‌ನ ಸರ್ಕಾರಿ ಪ್ರಾಥಮಿಕ ಶಾಲೆಗೆ ಇಡಲಾಗಿದೆ. 2017 ರಲ್ಲಿ ಉಗ್ರಗಾಮಿಗಳೊಂದಿಗಿನ ಕಾದಾಟದಲ್ಲಿ ಕೊಲ್ಲಲ್ಪಟ್ಟ ಸಬ್ಇನ್ಸ್ಪೆಕ್ಟರ್ ಇಮ್ರಾನ್ ಹುಸೇನ್ ತಕ್ ಅವರ ಹೆಸರನ್ನು ಬಸಂತ್‌ಗಢದ ಸರ್ಕಾರಿ ಹೈಯರ್ ಸೆಕೆಂಡರಿಗೆ ಹೆಸರಿಸಲಾಗಿದೆ. ಸಾಹಸಕ್ಕಾಗಿ ಅವರಿಗೆ ಮರಣೋತ್ತರವಾಗಿ ಶೌರ್ಯ ಚಕ್ರವನ್ನು ನೀಡಲಾಗಿದೆ.