ಲಕ್ನೋ (ಉತ್ತರ ಪ್ರದೇಶ):ಮೈಕೊರೆಯುವ ಚಳಿ, ವಿಪರೀತವಾದ ಶೀತ ಮಾರುತಗಳು ಮತ್ತು ದಟ್ಟವಾದ ಮಂಜು ಆವರಿಸುತ್ತಿರುವ ಹಿನ್ನೆಲೆ ಲಕ್ನೋ ಜಿಲ್ಲಾಡಳಿತವು ಅಲ್ಲಿಯ ಶಾಲೆಗಳಿಗೆ ತಾತ್ಕಾಲಿಕ ರಜೆ ಘೋಷಿಸಿದೆ. "ಶೀತ ಮಾರುತಗಳ ಉಲ್ಬಣ ಆಗುತ್ತಿರುವುದರಿಂದ ಹಾಗೂ ಮಕ್ಕಳ ಆರೋಗ್ಯ ಹಿತದೃಷ್ಟಿಯಿಂದ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಮಂಗಳವಾರದಿಂದ ಜನವರಿ 6ರ ವರೆಗೆ 1 ರಿಂದ 8ನೇ ತರಗತಿಯ ವಿದ್ಯಾರ್ಥಿಗಳಿಗೆ ತರಗತಿಗಳನ್ನು ನಡೆಸದಿರಲು ಜಿಲ್ಲಾಡಳಿತ ತೀರ್ಮಾನಿಸಿದೆ. ಈ ಅವಧಿಯಲ್ಲಿ ಶಾಲೆಗಳಿಗೆ ರಜೆ ಇರಲಿದೆ" ಎಂದು ಜಿಲ್ಲಾಧಿಕಾರಿಗಳ ನಿರ್ದೇಶನದ ಮೇರೆಗೆ ಜಿಲ್ಲಾ ಶಿಕ್ಷಣಾಧಿಕಾರಿ ರಾಮ್ ಪ್ರವೇಶ್ ಅವರು ಆದೇಶ ಹೊರಡಿಸಿದ್ದಾರೆ.
"ಶೀತ ಮಾರುತಗಳ ಪರಿಣಾಮ ಸದ್ಯ ಲಕ್ನೋ ಜಿಲ್ಲೆ ಸೇರಿದಂತೆ ಇಡೀ ರಾಜ್ಯದಲ್ಲಿ ತಂಪಾದ ಮತ್ತು ಮಂಜಿನ ವಾತಾವರಣವಿದೆ. ದಿನದಿಂದ ದಿನಕ್ಕೆ ಚಳಿಯ ತೀವ್ರತೆ ಹೆಚ್ಚಾಗುತ್ತಿದೆ. ಮಕ್ಕಳಲ್ಲಿ ಶೀತ, ಕೆಮ್ಮು ಮತ್ತು ಜ್ವರದಂತಹ ಕಾಯಿಲೆಗಳ ಬರಬಹುದು. ಈ ಹಿನ್ನೆಲೆ 2024 ರ ಜನವರಿ 6ರ ವರೆಗೆ ಪೂರ್ವ ಪ್ರಾಥಮಿಕದಿಂದ 8ನೇ ತರಗತಿಯವರೆಗೆ ಜಿಲ್ಲಾಧಿಕಾರಿಗಳು ನೀಡಿದ ಸೂಚನೆ ಮೇರೆಗೆ ರಜೆ ಘೋಷಿಸಲಾಗಿದೆ. 9 ರಿಂದ 12 ನೇ ತರಗತಿಯವರೆಗೆ ಬೆಳಗ್ಗೆ 10 ರಿಂದ ಮಧ್ಯಾಹ್ನ 3ರ ವರೆಗೆ ಕಾರ್ಯನಿರ್ವಹಿಸಲು ಆದೇಶ ಹೊರಡಿಸಲಾಗಿದೆ. ಆದೇಶ ಪಾಲಿಸದ ಶಾಲೆಗಳ ವಿರುದ್ಧ ಇಲಾಖೆಯಿಂದ ಕ್ರಮ ಕೈಗೊಳ್ಳಲಾಗುವುದು ಎಂದು ರಾಮ್ ಪ್ರವೇಶ್ ಹೇಳಿದ್ದಾರೆ.