ಶ್ರೀನಗರ (ಜಮ್ಮು ಮತ್ತು ಕಾಶ್ಮೀರ) : ಜಮ್ಮು ಮತ್ತು ಕಾಶ್ಮೀರದಲ್ಲಿ ರಕ್ಷಾ ಬಂಧನದ ಸಂಭ್ರಮ ಮನೆ ಮಾಡಿದೆ. ತಮ್ಮ ಒಡಹುಟ್ಟಿದವರಿಂದ ದೂರವಿದ್ದು, ಗಡಿಯಲ್ಲಿ ನಿಯೋಜಿಸಲಾದ ಭದ್ರತಾ ಪಡೆ ಸಿಬ್ಬಂದಿಗೆ ಸ್ಥಳೀಯ ಶಾಲಾ ವಿದ್ಯಾರ್ಥಿನಿಯರು ರಾಖಿ ಕಟ್ಟುವ ಮೂಲಕ ಸಂತಸ ಹಂಚಿಕೊಂಡರು. ಇಲ್ಲಿನ ಅಖ್ನೂರ್ ಸೆಕ್ಟರ್‌ನಲ್ಲಿ ಶಾಲಾ ಬಾಲಕಿಯರು ಭಾರತೀಯ ಸೇನಾ ಯೋಧರ ಕೈಗೆ ರಾಖಿಗಳನ್ನು ಕಟ್ಟಿ, ಹಣೆಗೆ ತಿಲಕವನ್ನು ಹಚ್ಚುವ ಮೂಲಕ ಸಹೋದರರ ಮೇಲಿನ ಪ್ರೀತಿಯನ್ನು ಪ್ರದರ್ಶಿಸಿದರು.
ಈ ವೇಳೆ ಮಾತನಾಡಿದ ವಿದ್ಯಾರ್ಥಿನಿಯೊಬ್ಬಳು "ಯೋಧರು ನಮ್ಮನ್ನು ರಕ್ಷಿಸಲು ಇಲ್ಲಿದ್ದಾರೆ. ಹಾಗಾಗಿ, ಅವರು ಸಹ ನಮ್ಮ ಒಡಹುಟ್ಟಿದವರೇ ಆಗಿದ್ದಾರೆ. ಸೈನಿಕರ ಸೇವೆಯನ್ನು ಗುರುತಿಸುವುದು ಮತ್ತು ನಮ್ಮ ಕರ್ತವ್ಯ ನಿಭಾಯಿಸುವುದು ನಮ್ಮೆಲ್ಲರ ಜವಾಬ್ದಾರಿ ಎಂದು ಭಾವಿಸುತ್ತೇನೆ. ನಾವು ಅವರ ಕೈಗಳಿಗೆ ಕಟ್ಟುವ ರಾಖಿಗಳು ಅವರನ್ನು ರಕ್ಷಿಸುತ್ತದೆ ಎಂಬ ನಂಬಿಕೆ ಇದೆ" ಎಂದು ಹೇಳಿದರು.
"ತಮ್ಮ ಮನೆ ಮತ್ತು ಪ್ರೀತಿಪಾತ್ರರಿಂದ ದೂರವಿರುವ ಯೋಧರು ರಕ್ಷಾ ಬಂಧನ ಆಚರಣೆಯಿಂದ ಹೊರಗುಳಿಯದಂತೆ ನೋಡಿಕೊಳ್ಳುವುದು ನಮ್ಮ ಉದ್ದೇಶ. ಆದ್ದರಿಂದ ಇಲ್ಲಿಗೆ ಬಂದು ರಾಖಿ ಕಟ್ಟಿದ್ದೇವೆ. ನಾವು ಅವರ ಸಹೋದರಿಯರಂತೆ. ಅವರಿಗೆ ದೇವರು ಸರ್ವಶಕ್ತಿ ಕರುಣಿಸಲೆಂದು ಪ್ರಾರ್ಥಿಸಿದ್ದೇವೆ. ಅವರನ್ನು ಸುರಕ್ಷಿತವಾಗಿಡಲಿ" ಎಂದು ರಕ್ಷಣಾ ಪಡೆಗಳೊಂದಿಗೆ ರಕ್ಷಾ ಬಂಧನ ಆಚರಿಸಿದ ಸ್ಥಳೀಯ ಸರಪಂಚ್ ಗೀತಾ ದೇವಿ ತಿಳಿಸಿದರು.
ಇದನ್ನೂ ಓದಿ :ಯಾವ ಸಮಯದಲ್ಲಿ ರಾಖಿ ಕಟ್ಟಿದರೆ ಉತ್ತಮ? : ರಾಶಿಚಕ್ರದ ಪ್ರಕಾರ ಯಾವ ಬಣ್ಣದ ರಾಖಿ ಕಟ್ಟಬೇಕೆಂದು ತಿಳಿಯಿರಿ