ಜಾರ್ಖಂಡ್:ಗುರುಗಳು ಎಂದರೆ ದೇವರಿಗೆ ಸಮಾನ ಅಂತಾರೆ. ಅಂತಹ ವಿದ್ಯೆ ಕಲಿಸುವ ಗುರುಗಳನ್ನು ಜಾರ್ಖಂಡ್ನ ವಿದ್ಯಾರ್ಥಿಗಳು ಮರಕ್ಕೆ ಕಟ್ಟಿ ಥಳಿಸಿದ ಅಮಾನವೀಯ ಘಟನೆ ಇಂದು ನಡೆದಿದೆ. ಪರೀಕ್ಷೆಯಲ್ಲಿ ಕಡಿಮೆ ಅಂಕ ನೀಡಿದ್ದಕ್ಕೆ ಅನುತೀರ್ಣ ಆದ ವಿದ್ಯಾರ್ಥಿಗಳು ಸಭೆ ನಡೆಸುವ ನೆಪದಲ್ಲಿ ಶಿಕ್ಷಕರನ್ನು ಕರೆದು ಮರಕ್ಕೆ ಕಟ್ಟಿ ಹಲ್ಲೆ ಮಾಡಿದ್ದಾರೆ.
ಜಾರ್ಖಂಡ್ನ ದುಮ್ಕಾದ ಹಳ್ಳಿಯೊಂದರ ಶಾಲಾ ವಿದ್ಯಾರ್ಥಿಗಳು ಈ ನೀಚ ಕೃತ್ಯ ಎಸಗಿದವರು. ತಮಗೆ ಶಿಕ್ಷಕರು ಕಡಿಮೆ ಅಂಕಗಳನ್ನು ನೀಡಿದರು ಎಂದು ಎಲ್ಲ ಶಿಕ್ಷಕರನ್ನು ಕರೆದು ಬಳಿಕ ಅವರನ್ನು ಮರಕ್ಕೆ ಕಟ್ಟಿಹಾಕಿದ್ದಾರೆ. ನಂತರ ಎಲ್ಲರ ಮೇಲೆ ಹಲ್ಲೆ ನಡೆಸಿದ್ದರಿಂದ ಗುರುಗಳು ಗಾಯಗೊಂಡಿದ್ದಾರೆ. ಬಳಿಕ ಅವರನ್ನು ಬಂಧನದಿಂದ ಮುಕ್ತ ಮಾಡಿದ್ದಾರೆ.
ಘಟನೆಯ ಬಗ್ಗೆ ಪ್ರತಿಕ್ರಿಯಿಸಿರುವ ಅಲ್ಲಿನ ವಿಸ್ತರಣಾಧಿಕಾರಿ. "ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಅಂಕಗಳನ್ನು ಕಡಿಮೆ ನೀಡಿದ ಕಾರಣಕ್ಕಾಗಿ ಶಿಕ್ಷಕರನ್ನು ಥಳಿಸಲಾಗಿದೆ. ಈ ಬಗ್ಗೆ ಶಿಕ್ಷಕರಿಂದ ಯಾವುದೇ ಪ್ರತಿಕ್ರಿಯೆ ಸಿಕ್ಕಿಲ್ಲ. ಘಟನೆಯ ಬಗ್ಗೆ ಮಾಹಿತಿ ಪಡೆಯಲಾಗಿದೆ" ಎಂದು ತಿಳಿಸಿದರು.
"ವಿದ್ಯಾರ್ಥಿಗಳು ಸಭೆ ನಡೆಸುವ ನೆಪದಲ್ಲಿ ನಮಗೆ ಕರೆ ಮಾಡಿದರು. ಬಳಿಕ ಜಮಾಯಿಸಿದ್ದ ಎಲ್ಲ ಮಕ್ಕಳು ಪರೀಕ್ಷೆಯಲ್ಲಿ ನಪಾಸಾಗಿದ್ದೇವೆ. ಪ್ರಾಯೋಗಿಕ ಅಂಕಗಳನ್ನು ಕಡಿಮೆ ನೀಡಿದ್ದೇ ಇದಕ್ಕೆ ಕಾರಣ ಎಂದು ದೂರಿದರು. ಈ ಅಂಕಗಳನ್ನು ಶಾಲೆಯ ಮುಖ್ಯೋಪಾಧ್ಯಾಯರು ನೀಡಬೇಕಿತ್ತು. ಅವರು ಮಾರ್ಕ್ಸ್ ಅನ್ನು ಕೊಡದ ಕಾರಣ ಈ ರೀತಿ ಆಗಿದೆ. ಆದರೆ, ವಿದ್ಯಾರ್ಥಿಗಳು ನಮ್ಮನ್ನು ಥಳಿಸಿದರು ಎಂದು ಹಲ್ಲೆಗೊಳಗಾದ ಶಿಕ್ಷಕ ಕುಮಾರ್ ಸುಮನ್ ತಮ್ಮ ನೋವನ್ನು ತೋಡಿಕೊಂಡರು.
ಓದಿ:ಇಲ್ಲಿ ನಾಲ್ಕು ವರ್ಷದ ಮಕ್ಕಳಿಗೂ ಕೆಲಸ...! ಸಂಬಳ ಎಷ್ಟು ಗೊತ್ತಾ?