ವಡೋದರಾ (ಗುಜರಾತ್) :ಶಿಕ್ಷಕ ವೃತ್ತಿ ಪವಿತ್ರವಾದುದು. ದೇಶ ಕಟ್ಟುವ ಮೊದಲ ಬುನಾದಿಯೇ ಶಿಕ್ಷಕರು. ಇಂತಹ ಹೊಣೆಗಾರಿಕೆಯ ವೃತ್ತಿಯಲ್ಲಿದ್ದುಕೊಂಡು ಮಾಡಬಾರದ್ದನ್ನು ಮಾಡಿರುವ ಇಬ್ಬರು ಶಿಕ್ಷಕರು ಜನರಿಂದ ಥಳಿತಕ್ಕೊಳಗಾಗಿ ವೃತ್ತಿಯಿಂದಲೇ ಅಮಾನತಾಗಿದ್ದಾರೆ.
ನಿನ್ನೆ (ಮಂಗಳವಾರ) 77ನೇ ಸ್ವಾತಂತ್ರ್ಯೋತ್ಸವ. ಇಡೀ ದೇಶ ಹಬ್ಬದ ಸಂಭ್ರಮದಲ್ಲಿತ್ತು. ವಡೋದರಾದ ಶಾಲೆಯೊಂದರಲ್ಲಿ ಧ್ವಜಾರೋಹಣ ಮಾಡಿದ ಬಳಿಕ ಪ್ರಾಂಶುಪಾಲ ಮತ್ತು ಶಿಕ್ಷಕರೊಬ್ಬರು ಮದ್ಯಕೂಟ ನಡೆಸಿದ್ದಾರೆ. ಇದನ್ನು ಕಂಡ ವಿದ್ಯಾರ್ಥಿಗಳು ಗ್ರಾಮಸ್ಥರಿಗೆ ಮಾಹಿತಿ ನೀಡಿದ್ದು, ಜನರು ಇಬ್ಬರನ್ನು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.
ಅಶ್ಲೀಲ ವಿಡಿಯೋ ತೋರಿಸಿದ ಆರೋಪ:ಧ್ವಜಾರೋಹಣ ಮಾಡಿದ ಬಳಿಕ ಎಲ್ಲ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಮನೆಗೆ ತೆರಳಿದ್ದಾರೆ. ಆಗ ಓರ್ವ ಶಿಕ್ಷಕ ಮತ್ತು ಪ್ರಾಂಶುಪಾಲರು ಶಾಲೆಯಲ್ಲೇ ಉಳಿದುಕೊಂಡು ಮದ್ಯಪಾನ ಮಾಡಿದ್ದಾರೆ. ಶಾಲೆಯಲ್ಲಿ ಉಳಿದುಕೊಂಡಿದ್ದ ಮೂವರು ವಿದ್ಯಾರ್ಥಿನಿಯರನ್ನು ಕುಡಿದ ಮತ್ತಿನಲ್ಲಿ ಶೌಚಾಲಯಕ್ಕೆ ಕರೆದೊಯ್ದು ಅಶ್ಲೀಲ ಫೋಟೋ ಮತ್ತು ವಿಡಿಯೋಗಳನ್ನು ತೋರಿಸಿದ್ದಾರೆ.
ಘಟನೆಯಿಂದ ಬೆಚ್ಚಿದ ಹುಡುಗಿಯರು ಮನೆಗೆ ತಲುಪಿದ ಕೂಡಲೇ ತಮ್ಮ ಪೋಷಕರಿಗೆ ವಿಷಯ ತಿಳಿಸಿದ್ದಾರೆ. ಇದರಿಂದ ಕುಪಿತಗೊಂಡ ಪೋಷಕರು ಶಾಲೆಗೆ ಧಾವಿಸಿ, ಅಲ್ಲಿದ್ದ ಪ್ರಾಂಶುಪಾಲ ಮತ್ತು ಶಿಕ್ಷಕನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ವಾಗ್ವಾದ ತಾರಕಕ್ಕೇರಿ ಗ್ರಾಮದ ಜನರೂ ಜಮಾಯಿಸಿದ್ದಾರೆ. ಇಬ್ಬರು ಶಿಕ್ಷಕರನ್ನು ಜನರ ಗುಂಪು ಶಾಲೆಯಿಂದ ಹೊರಗೆಳೆದು ಥಳಿಸಿದೆ.