ರಾಜಘರ್ (ಮಧ್ಯಪ್ರದೇಶ) :ಬಹುತೇಕ ಎಲ್ಲ ರಾಜ್ಯಗಳಲ್ಲಿ ಕಳೆದ ಒಂದು ವಾರದಿಂದ ಶಾಲಾ-ಕಾಲೇಜ್ಗಳು ಪುನಾರಂಭಗೊಂಡಿವೆ. ಈ ಹಿಂದಿನಂತೆ ವಿದ್ಯಾರ್ಥಿಗಳು ವಿದ್ಯಾ ಮಂದಿರಗಳಿಗೆ ತೆರಳುತ್ತಿದ್ದಾರೆ. ಇದರ ನಡುವೆ ಮಧ್ಯಪ್ರದೇಶದ ಶಾಲೆಯಲ್ಲಿ ಅಮಾನವೀಯ ಘಟನೆ ನಡೆದಿದೆ.
ಮಧ್ಯಪ್ರದೇಶದ ರಾಜಘರ್ ಜಿಲ್ಲೆಯ ಪ್ರೌಢಶಾಲೆಯಲ್ಲಿ ಈ ಘಟನೆ ನಡೆದಿದೆ. ಈಗಷ್ಟೇ ಶಾಲೆ ಆರಂಭಗೊಂಡಿದ್ದರಿಂದ ಕೆಲ ವಿದ್ಯಾರ್ಥಿನಿಯರು ಸಮವಸ್ತ್ರ ಹಾಕಿಕೊಳ್ಳದೆ ಶಾಲೆಗೆ ಬಂದಿದ್ದರು. ಈ ವೇಳೆ ಪ್ರಾಂಶುಪಾಲರು ಅವರನ್ನ ಸಮವಸ್ತ್ರದ ವಿಚಾರವಾಗಿ ಪ್ರಶ್ನೆ ಮಾಡಿದ್ದಾರೆ.
ಶಾಲೆ ಇದೀಗ ಆರಂಭಗೊಂಡಿರುವ ಕಾರಣ ಸಮವಸ್ತ್ರ ಸಿದ್ಧಗೊಂಡಿಲ್ಲ. ಮುಂದಿನ ಸೋಮವಾರದವರೆಗೆ ತಮಗೆ ಅವಕಾಶ ನೀಡುವಂತೆ ಕೇಳಿಕೊಂಡಿದ್ದಾರೆ. ಇದರಿಂದ ಆಕ್ರೋಶಗೊಂಡಿರುವ ಪ್ರಾಂಶುಪಾಲ ರಾಧೆಶ್ಯಾಮ್ ಮಾಳ್ವಿಯಾ(50), ವಿದ್ಯಾರ್ಥಿನಿಯರು ಹಾಕಿಕೊಂಡಿರುವ ಬಟ್ಟೆ ಬಿಚ್ಚುವಂತೆ ತಿಳಿಸಿದ್ದಾನೆ. ಜೊತೆಗೆ ನಾಳೆಯಿಂದ ಸಮವಸ್ತ್ರ ಹಾಕಿಕೊಂಡು ಶಾಲೆಗೆ ಬರುವಂತೆ ಸೂಚನೆ ನೀಡಿದ್ದಾನೆ.