ಕರ್ನಾಟಕ

karnataka

By

Published : Apr 29, 2023, 7:31 PM IST

ETV Bharat / bharat

ಎರಡು ವರ್ಷಗಳ ಅವಧಿಯಲ್ಲಿ ಐವರು ಶಿಕ್ಷಕರ ಸಾವು: ಜನರಲ್ಲಿ ದೆವ್ವದ ಭೀತಿ, ಶಾಲೆಗೆ ಬೀಗ

ಕಳೆದ ಎರಡು ವರ್ಷಗಳ ಅವಧಿಯಲ್ಲಿ ಶಾಲೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಐವರು ಶಿಕ್ಷಕರು ಮೃತಪಟ್ಟ ಕಾರಣಕ್ಕೆ ಶಾಲೆಯ ಮುಚ್ಚಿರುವ ಘಟನೆ ಛತ್ತೀಸ್​ಗಢದ ಮಾನೇಂದ್ರಗಢ ಚಿರ್ಮಿರಿ ಭರತಪುರ ಜಿಲ್ಲೆಯಲ್ಲಿ ನಡೆದಿದೆ.

school-closed-after Five teachers died within two years  died in Chhattisgarh
ಎರಡು ವರ್ಷಗಳ ಅವಧಿಯಲ್ಲಿ ಐವರು ಶಿಕ್ಷಕರ ಸಾವು

ರಾಯಪುರ (ಛತ್ತೀಸ್​ಗಢ): ಛತ್ತೀಸ್​ಗಢದ ಮಾನೇಂದ್ರಗಢ ಚಿರ್ಮಿರಿ ಭರತಪುರ ಜಿಲ್ಲೆಯ ಶಾಲೆಯೊಂದರಲ್ಲಿ ಕಳೆದ ಎರಡು ವರ್ಷಗಳ ಅವಧಿಯಲ್ಲಿ ಐವರು ಶಿಕ್ಷಕರು ಸಾವನ್ನಪ್ಪಿದ್ದು, ಇದರಿಂದ ಶಾಲೆಯಲ್ಲಿ ಭೂತ ಪ್ರೇತದ ಆತಂಕ ಆವರಿಸಿದೆ. ಇದೇ ಕಾರಣದಿಂದ 20 ದಿನಗಳಿಂದ ಶಾಲೆಗೆ ಬೀಗ ಹಾಕಲಾಗಿದೆ.

ಇಲ್ಲಿನ ಖಡ್ಗವಾನ್ ಬ್ಲಾಕ್‌ನ ಸಾವ್ಲಾ ಗ್ರಾಮ ಪಂಚಾಯಿತಿಯ ಬಸೆಲ್‌ಪುರದ ಸಾವಳ ಗ್ರಾಮದ ಸರ್ಕಾರಿ ಪೂರ್ವ ಮಾಧ್ಯಮಿಕ ಶಾಲೆಯಲ್ಲಿ ಈ ಘಟನೆ ವರದಿಯಾಗಿದೆ. ಇದೇ ಏಪ್ರಿಲ್ 11ರಂದು ಐದನೇ ಸಾವು ಸಂಭವಿಸಿದೆ. ಎರಡು ವರ್ಷಗಳ ಅಂತರದಲ್ಲಿ ನಡೆದ ಈ​​ ಶಿಕ್ಷಕರ ಸರಣಿ ಸಾವಿನ ಕುರಿತ ಮೂಢನಂಬಿಕೆಯ ಭೀತಿಯಿಂದ ಶಾಲೆಗೆ ಬೀಗ ಜಡಿಯಲಾಗಿದೆ. ಇಲ್ಲಿ ಕೆಲಸ ಮಾಡುತ್ತಿದ್ದ ಮತ್ತೊಬ್ಬ ಶಾಲಾ ಸಿಬ್ಬಂದಿ ರಜೆ ಮೇಲೆ ತೆರಳಿದ್ದಾರೆ. ಇದೀಗ ಬಸೆಲ್​ಪುರ ಗ್ರಾಮಸ್ಥರು ತಮ್ಮ ಮಕ್ಕಳ ಭವಿಷ್ಯದ ಬಗ್ಗೆ ಚಿಂತಿಸುವಂತೆ ಆಗಿದೆ.

ಜನರಲ್ಲಿ ಮೂಡಿದ ದೆವ್ವದ ಭೀತಿ: ಬಸೆಲ್‌ಪುರ ಗ್ರಾಮ ಶಾಲೆಯಲ್ಲಿ ಮೊದಲಿನಿಂದಲೂ ವ್ಯಾಸಂಗ ಚೆನ್ನಾಗಿತ್ತು. ಜನರು ಯಾವುದೇ ಆತಂಕವಿಲ್ಲದೆ ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸುತ್ತಿದ್ದರು. ಆದರೆ, ಕಳೆದ ಎರಡು ವರ್ಷಗಳಲ್ಲಿ ಈ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದ ಐವರು ಮಂದಿ ಸಾವನ್ನಪ್ಪಿದ್ದಾರೆ. ಈ ಸಾವುಗಳಿಂದ ಶಾಲೆಗೆ ಬರುವ ಮಕ್ಕಳ ಮನದಲ್ಲಿ ಭಯ ಆವರಿಸಿದೆ.

ಇದನ್ನೂ ಓದಿ:ಇಂಟರ್​ ಎಕ್ಸಾಂ ರಿಸಲ್ಟ್​ ಔಟ್​.. ರಾಜ್ಯಾದ್ಯಂತ 9 ವಿದ್ಯಾರ್ಥಿಗಳ ಆತ್ಮಹತ್ಯೆ!

ಈ ಭಯದ ಜೊತೆಗೆ ಗ್ರಾಮದ ಕೆಲವರು ಗಾಳಿ ಸುದ್ದಿಯನ್ನೂ ಬೀಸುವ ಕೆಲಸ ಮಾಡಿದ್ದಾರೆ. ಶಾಲೆಗೆ ದೆವ್ವ ಕಾಡುತ್ತಿದ್ದು, ಇದರ ಪರಿಣಾಮ ಈ ಶಾಲೆಯಲ್ಲಿ ಪಾಠ ಮಾಡಲು ಬಂದವರು ಸಾಯುತ್ತಾರೆ ಎಂಬ ವದಂತಿ ಹಬ್ಬಿಸಲಾಗಿದೆ. ಶಾಲೆಯಲ್ಲಿ ಕೆಲಸ ಮಾಡುವ ಪ್ಯೂನ್ ಮತ್ತು ಗ್ರಾಮಸ್ಥರು ಕೂಡ ಇದೇ ಅಭಿಪ್ರಾಯ ಹೊಂದಿದ್ದಾರೆ. ಹೀಗಾಗಿ ಶಾಲೆ ಬಂದ್​ ಮಾಡುವಂತಾಗಿದೆ.

ಮೃತ ಶಿಕ್ಷಕರ ಮಾಹಿತಿ: ಈ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದ ಶಿಕ್ಷಕರಾದ ಶ್ಯಾಂಬಿಹಾರಿ ಅವರಿಗೆ ಇದ್ದಕ್ಕಿದ್ದಂತೆ ಕೈಕಾಲು ನೋವು ಕಾಣಿಸಿಕೊಂಡಿತ್ತು. ಇದಾದ ಕೆಲವೇ ದಿನಗಳಲ್ಲಿ ಇವರು ಮೃತಪಟ್ಟಿದ್ದರು. ಇದಕ್ಕೂ ಮುನ್ನ ಶಿಕ್ಷಕ ವೀರೇಂದ್ರ ಸಿಂಗ್ ಮೆದುಳು ರಕ್ತಸ್ರಾವದಿಂದ ಸಾವನ್ನಪ್ಪಿದ್ದರು. ಮತ್ತೊಬ್ಬ ಶಿಕ್ಷಕ ಚಂದ್ರಪ್ರಕಾಶ್ ಪೈಕ್ರ ರಾತ್ರಿ ಮನೆಯಲ್ಲಿ ಮಲಗಿದ್ದಾಗಲೇ ಚಿರನಿದ್ರಗೆ ಜಾರಿದ್ದರು. ಅಲ್ಲದೇ, ಶಾಲೆಯಿಂದ ನಿವೃತ್ತರಾದ ನಂತರ ಪ್ರಾಂಶುಪಾಲ ಪಾಠಕ್ ಧರಮ್ ಸಾಯಿ ಎಂಬುವರು ಸಹ ಕೆಲ ದಿನಗಳಲ್ಲೇ ಕೊನೆಯುಸಿರೆಳೆದಿದ್ದರು. ಅದೇ ರೀತಿ ಇದೇ ಏಪ್ರಿಲ್​ 11ರಂದು ಮತ್ತೊಬ್ಬ ಶಿಕ್ಷಕರು ಸಹ ಹಠಾತ್ ಸಾವನ್ನಪ್ಪಿದ್ದಾರೆ.

ಈ ಶಾಲೆಯಲ್ಲಿ ಕಾರ್ಯ ನಿರ್ವಹಿಸಿದ್ದ ಶಿಕ್ಷಕರ ಸರಣಿ ಸಾವುಗಳು ಸಂಭವಿಸಿವೆ. ಕಳೆದ ಎರಡು ವರ್ಷಗಳ ಅವಧಿಯಲ್ಲಿ ಒಂದೆರಡು ಅಲ್ಲ, ಐದಾರು ಸಾವುಗಳು ಸಂಭವಿಸಿವೆ. ಈ ಸಾವು ಹಳ್ಳಿಗರ ಮನಸ್ಸಿನಲ್ಲಿ ಮೂಢನಂಬಿಕೆ ಬಿತ್ತುವಂತೆ ಮಾಡಿದೆ ಎಂದು ಗ್ರಾಮದ ಮುಖಂಡರಾದ ರಾಜ್​ಕುಮಾರ್​ ಎಂಬುವವರು ಹೇಳುತ್ತಾರೆ.

ಇದನ್ನೂ ಓದಿ:ಸಿಗರೇಟ್​ ವಿಚಾರ: 8ನೇ ತರಗತಿ ಸ್ನೇಹಿತನನ್ನು ಕಲ್ಲಿನಿಂದ ಹೊಡೆದು ಕೊಂದ ಸಹಪಾಠಿಗಳು!

ABOUT THE AUTHOR

...view details