ರಾಜ್‌ಕೋಟ್ (ಗುಜರಾತ್): ವಿದ್ಯಾರ್ಥಿನಿಯೊಬ್ಬಳ ಸಾಹಸ ಮತ್ತು ಸಮಯ ಪ್ರಜ್ಞೆಯಿಂದಾಗಿ ಶಾಲಾ ಬಸ್ ದುರಂತವೊಂದು ತಪ್ಪಿದೆ. ಬಸ್ ಚಾಲನೆ ಮಾಡುತ್ತಿದ್ದಾಗ ಹಠಾತ್ ಆಗಿ ಹೃದಯಾಘಾತ ಕಾಣಿಸಿಕೊಂಡು ಚಾಲಕ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ. ಈ ವೇಳೆ ಡ್ರೈವರ್ ಸೀಟಿನ ಬಳಿ ಕುಳಿತಿದ್ದ ವಿದ್ಯಾರ್ಥಿನಿ ಚಾಣಾಕ್ಷತನ ತೋರಿ ಬಸ್ ಸ್ಟೇರಿಂಗ್ ನಿಭಾಯಿಸುವ ಮೂಲಕ ಸಂಭವಿಸಬಹುದಾದ ದೊಡ್ಡ ಅವಘಡ ತಪ್ಪಿಸಿದ್ದಾರೆ. ಗುಜರಾತ್ನ ರಾಜ್ಕೋಟ್ನಲ್ಲಿ ಈ ಘಟನೆ ನಡೆದಿದೆ.
ಇಷ್ಟಕ್ಕೂ ನಡೆದಿದ್ದೇನು?:ರಾಜ್ಕೋಟ್ನ ಭಾರದ್ ವಿಶ್ವ ವಿದ್ಯಾ ಪೀಠದ ಶಾಲಾ ಬಸ್ ಶನಿವಾರ ಮಧ್ಯಾಹ್ನ ವಿದ್ಯಾರ್ಥಿಗಳನ್ನು ಬಿಡಲು ಹೊರಟಿತ್ತು. ಹರೂನ್ ಭಾಯ್ ಎಂಬ ಚಾಲಕ ಬಸ್ನಲ್ಲಿ ಚಲಾಯಿಸುತ್ತಿದ್ದರು. ಇದೇ ವೇಳೆ ಇಲ್ಲಿನ ಗೊಂಡಲ್ ರಸ್ತೆಯ ಮಕ್ಕಂ ಚೌಕ್ ಬಳಿಯ ಸತ್ಯ ವಿಜಯ್ ಐಸ್‌ಕ್ರೀಂ ಶಾಪ್ ಬಳಿ ಏಕಾಏಕಿ ಚಾಲಕ ಹರೂನ್ ಭಾಯ್ಗೆ ಎದೆನೋವು ಕಾಣಿಸಿಕೊಂಡಿದೆ. ಇದರಿಂದ ಆತನಿಗೆ ಬಸ್ ಸ್ಟೇರಿಂಗ್ ಮೇಲಿನ ನಿಯಂತ್ರಣ ತಪ್ಪಿದೆ.
2 ಸ್ಕೂಟರ್ - ಕಾರಿಗೆ ಡಿಕ್ಕಿ:ಎದೆನೋವು ಕಾಣಿಸಿಕೊಂಡು ಚಾಲಕ ಹರೂನ್ ಭಾಯ್ ಸ್ಟೇರಿಂಗ್ ಮೇಲಿನ ನಿಯಂತ್ರಣ ಕಳೆದುಕೊಂಡ ಪರಿಣಾಮ ಬಸ್ ಅಡ್ಡಾದಿಡ್ಡಿ ಓಡಲು ಆರಂಭಿಸಿದೆ. ಅಲ್ಲದೇ, ಎದುರುಗಡೆಯಿಂದ ಬರುತ್ತಿದ್ದ ಎರಡು ಸ್ಕೂಟರ್ಗಳು ಮತ್ತು ಒಂದು ಕಾರಿಗೆ ಬಸ್ ಡಿಕ್ಕಿ ಹೊಡೆದಿದೆ. ಅಷ್ಟೇ ಅಲ್ಲ, ಇದೇ ರಸ್ತೆಯಲ್ಲಿ ಸಾಕಷ್ಟು ವಾಹನಗಳು ಬರುತ್ತಿದ್ದವು. ಸ್ವಲ್ಪ ತಡವಾಗಿದ್ದರೂ ಬಸ್ ಹಲವು ವಾಹನಗಳಿಗೆ ಡಿಕ್ಕಿ ಹೊಡೆಯುವುದು ಕೂಡ ಖಚಿತವಾಗಿತ್ತು.
ಸಮಯ ಪ್ರಜ್ಞೆ ತೋರಿದ ವಿದ್ಯಾರ್ಥಿನಿ:ಇದನ್ನು ಗಮನಿಸಿದ ಡ್ರೈವರ್ ಸೀಟಿನ ಬಳಿಯೇ ಕುಳಿತಿದ್ದ ಭಾರ್ಗವಿ ವ್ಯಾಸ ಎಂಬ ವಿದ್ಯಾರ್ಥಿನಿ ತಕ್ಷಣವೇ ಎದ್ದು ಚಾಲಕ ಹರೂನ್ ಭಾಯ್ ಹತ್ತಿರ ಹೋಗಿದ್ದಾರೆ. ಆದಗಾಲೇ ಸ್ಟೇರಿಂಗ್ ಮೇಲಿನ ನಿಯಂತ್ರಣ ಕಳೆದುಕೊಂಡಿದ್ದ ಚಾಲಕನ ಕೈಯನ್ನು ಹಿಡಿಯಲು ವಿದ್ಯಾರ್ಥಿನಿ ಯತ್ನಿಸಿದ್ದಾರೆ. ಆದರೆ, ಅಷ್ಟರಲ್ಲೇ, ಸಂಪೂರ್ಣವಾಗಿ ಚಾಲಕ ಪ್ರಜ್ಞೆ ತಪ್ಪಿ ತಲೆ ತಗ್ಗಿಸಿ ಬಿದ್ದಿದ್ದಾರೆ. ಇದರಿಂದ ಸಮಯ ಪ್ರಜ್ಞೆ ತೋರಿದ ಭಾರ್ಗವಿ ವ್ಯಾಸ್ ತಕ್ಷಣವೇ ಬಸ್ ಸ್ಟೇರಿಂಗ್ ನಿಭಾಯಿಸಿ, ರಸ್ತೆ ಪಕ್ಕದಲ್ಲಿದ್ದ ದೀಪ ವಿದ್ಯುತ್ ಕಂಬಕ್ಕೆ ಗುದ್ದಿ ಅಲ್ಲಿಯೇ ನಿಲ್ಲಿಸಿದ್ದಾರೆ.