ಚೆನ್ನೈ( ತಮಿಳುನಾಡು):ದೇಶ ಎಷ್ಟೇ ಅಭಿವೃದ್ಧಿ ಹೊಂದಿದರೂ ಅಲ್ಲಲ್ಲಿ ವರ್ಗಾಧಾರಿತ ಹಲ್ಲೆಗಳು ಕಂಡು ಬರುತ್ತಿದೆ. ಕೆಳವರ್ಗಕ್ಕೆ ಸೇರಿದ್ದಾರೆ ಎಂಬ ಉದ್ದೇಶಕ್ಕೆ ಸಾರ್ವಜನಿಕ ಪ್ರದೇಶವನ್ನು ಪ್ರವೇಶ ಮಾಡಿದ್ದಕ್ಕೆ ಹಲ್ಲೆ ಮಾಡಿವುದು ಅಲ್ಲಲ್ಲಿ ವರದಿಗಳಾಗುತ್ತಲೇ ಇರುತ್ತವೆ. ಇಂತಹುದ್ದೇ ಕೆಳವರ್ಗಕ್ಕೆ ಸೇರಿದ ಮಹಿಳೆಯರು ಸಾರ್ವಜನಿಕ ಕೆರೆಯಲ್ಲಿ ಸ್ನಾನ ಮಾಡಿದ್ದಾರೆ ಎಂಬ ಉದ್ದೇಶಕ್ಕೆ ಹಲ್ಲೆ ಮಾಡಿರುವ ಪ್ರಕರಣ ತಮಿಳುನಾಡಿನಲ್ಲಿ ಬೆಳಕಿಗೆ ಬಂದಿದೆ.
ಪುದುಕೊಟ್ಟೈ ಜಿಲ್ಲೆಯ ಅರಂತಂಗಿ ಸಮೀಪದ ಕೂತಂಗುಡಿ ಗ್ರಾಮದ ಪರಿಶಿಷ್ಟ ಸಮುದಾಯದ ಮಹಿಳೆಯರಯು ಜಾತಿ ನಿಂದನೆ ಕುರಿತು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ನೀಡಿದ್ದಾರೆ. ಪೆರುಂಗಾಡು ಪಂಚಾಯತ್ ವ್ಯಾಪ್ತಿಯ ವೈರಾಂಡಿ ಹೊಂಡದಲ್ಲಿ ಹೊಸ ವರ್ಷದ ದಿನದಂದು ಗ್ರಾಮದ 3 ಮಹಿಳೆಯರು ಸ್ನಾನ ಮಾಡುತ್ತಿದ್ದರು. ಈ ವೇಳೆ, ಅಲ್ಲಿಗೆ ಬಂದ ಅಯ್ಯಪ್ಪನ್ ಮತ್ತು ಮುತ್ತುರಾಮನ್ ಇಬ್ಬರೂ ಮಹಿಳೆಯರನ್ನು ಓಡಿಸಿದ್ದಾರೆ. ಸಾರ್ವಜನಿಕ ಹೊಂಡದಲ್ಲಿ ಕೆಳವರ್ಗದ ಜನರಿಗೆ ಸ್ನಾನ ಮಾಡಲು ಅವಕಾಶ ನೀಡದೇ ದೊಣ್ಣೆಗಳಿಂದ ಹೊಡೆದು ಓಡಿಸಿ ಪ್ರಾಣ ಬೆದರಿಕೆ ಹಾಕಿದ್ದಾರೆ ಎಂದು ಇಬ್ಬರು ನೀಡಿರುವ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಬಟ್ಟೆಗಳನ್ನು ಎಸೆದು ಅರೆಬೆತ್ತಲೆಯಾಗಿ ಓಡಿಸಿದರು:ಈ ಕುರಿತು ಜಿಲ್ಲಾಧಿಕಾರಿಗೆ ದೂರು ಸಲ್ಲಿಸಿದ ಬಳಿಕ ಸಂತ್ರಸ್ತ ಮಹಿಳೆಯರು ಮಾಧ್ಯಮದೊಂದಿಗೆ ಮಾತನಾಡಿದ್ದಾರೆ. ಸ್ನಾನ ಮಾಡುತ್ತಿದ್ದ ವೇಳೆ ಕಲ್ಲು ತೂರಾಟ ಮಾಡಿದ್ದಾರೆ. ಕೆರೆಯ ದಂಡೆಯ ಮೇಲೆ ಇಟ್ಟಿದ್ದ ಬಟ್ಟಗಳನ್ನು ಮುಳ್ಳಿನ ಪೊದೆಗಳಿಗೆ ಎಸೆದಿದ್ದಾರೆ. ನಂತರ ಕೆರೆಯಿಂದ ನಮ್ಮನ್ನು ಓಡಿಸಿದ್ದರು. ನಾವು ಅರೆಬೆತ್ತಲಾಗಿ ಮನೆ ಸೇರಿದ್ದೆವು ಎಂದು ಕಣ್ಣೀರಿಟ್ಟಿದ್ದಾರೆ.
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ತಮಿಳುನಾಡು ಅಸ್ಪೃಶ್ಯತಾ ನಿರ್ಮೂಲನಾ ಮೋರ್ಚಾ ಸಂಘಟನೆಯ ಆಡಳಿತಾಧಿಕಾರಿ ಜೀವಾನಂದಂ, ಜಾತಿಯ ದಬ್ಬಾಳಿಕೆಯಿಂದಾಗಿ ಮಹಿಳೆಯರು ಸ್ನಾನ ಮಾಡುವ ಒಳ ಉಡುಪಿನೊಂದಿಗೆ ಮನೆಗೆ ಹಿಂತಿರುಗಬೇಕಾದ ಪರಿಸ್ಥಿತಿ ಬಂದಿತ್ತು ಎಂದು ಘಟನೆಯ ವಿವರ ನೀಡಿದ್ದಾರೆ. ತಹಶೀಲ್ದಾರ್‌ಗೆ ದೂರು ನೀಡಲು ಮುಂದಾದಾಗ ಮಹಿಳೆಯರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು ಎಂದು ಜೀವಾನಂದಂ ಇದೇ ವೇಳೆ ಮತ್ತೊಂದು ಆರೋಪ ಕೂಡಾ ಮಾಡಿದ್ದಾರೆ.