ನವದೆಹಲಿ:ಮುಸ್ಲಿಮರಲ್ಲಿ ಬಹುಪತ್ನಿತ್ವ ಮತ್ತು ನಿಖಾ ಹಲಾಲಾ ಪದ್ದತಿಯ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆ ನಡೆಸಲು ಐದು ನ್ಯಾಯಮೂರ್ತಿಗಳನ್ನೊಳಗೊಂಡ ಸಾಂವಿಧಾನಿಕ ಪೀಠವನ್ನು ಸ್ಥಾಪಿಸುವುದಾಗಿ ಸುಪ್ರೀಂ ಕೋರ್ಟ್ ಶುಕ್ರವಾರ ತಿಳಿಸಿದೆ.
ಹೊಸದಾಗಿ ಐದು ನ್ಯಾಯಮೂರ್ತಿಗಳ ಪೀಠ ರಚನೆ:ಹಿಂದಿನ ಸಾಂವಿಧಾನಿಕ ಪೀಠದ ಇಬ್ಬರು ನ್ಯಾಯಮೂರ್ತಿಗಳಾದ ನ್ಯಾಯಮೂರ್ತಿ ಇಂದಿರಾ ಬ್ಯಾನರ್ಜಿ ಮತ್ತು ನ್ಯಾಯಮೂರ್ತಿ ಹೇಮಂತ್ ಗುಪ್ತಾ ಅವರು ನಿವೃತ್ತರಾಗಿರುವುದರಿಂದ ಹೊಸದಾಗಿ ಐದು ನ್ಯಾಯಮೂರ್ತಿಗಳ ಪೀಠವನ್ನು ರಚಿಸುವ ಅಗತ್ಯವಿದೆ ಎಂದು ಪಿಐಎಲ್ ಸಲ್ಲಿಸಿರುವ ವಕೀಲ ಅಶ್ವಿನಿ ಉಪಾಧ್ಯಾಯ ಅವರ ಮನವಿಯನ್ನು ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಮತ್ತು ನ್ಯಾಯಮೂರ್ತಿ ಪಿ.ಎಸ್.ನರಸಿಂಹ ಅವರನ್ನೊಳಗೊಂಡ ನ್ಯಾಯಪೀಠ ಪರಿಗಣಿಸಿ ಸಾಂವಿಧಾನಿಕ ಪೀಠವನ್ನು ಸ್ಥಾಪಿಸಿಸುವಂತೆ ಆದೇಶ ಹೊರಡಿಸಿದೆ.
ಐದು ನ್ಯಾಯಮೂರ್ತಿಗಳ ಪೀಠದ ಮುಂದೆ ಬಹಳ ಮುಖ್ಯವಾದ ವಿಷಯಗಳು ಬಾಕಿ ಉಳಿದಿವೆ. ನಾವು ವಿಚಾರಣೆಗೆ ಪೀಠವನ್ನು ರಚಿಸುತ್ತೇವೆ ಮತ್ತು ಈ ವಿಷಯವನ್ನು ಗಮನದಲ್ಲಿಟ್ಟುಕೊಳ್ಳುತ್ತೇವೆ ಎಂದು ಸಿಜೆಐ ಹೇಳಿದರು. ಕಳೆದ ವರ್ಷ ನವೆಂಬರ್ 2ರಂದು ಉಪಾಧ್ಯಾಯ ಅವರು ಈ ವಿಷಯವನ್ನು ಪ್ರಸ್ತಾಪಿಸಿದ್ದರು. ಕಳೆದ ವರ್ಷ ಆಗಸ್ಟ್ 30 ರಂದು ನ್ಯಾಯಮೂರ್ತಿಗಳಾದ ಇಂದಿರಾ ಬ್ಯಾನರ್ಜಿ, ಹೇಮಂತ್ ಗುಪ್ತಾ, ಸೂರ್ಯಕಾಂತ್, ಎಂ ಎಂ ಸುಂದರೇಶ್ ಮತ್ತು ಸುಧಾಂಶು ಧುಲಿಯಾ ಅವರನ್ನು ಒಳಗೊಂಡ ಐದು ನ್ಯಾಯಾಧೀಶರ ಪೀಠವು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (NHRC), ರಾಷ್ಟ್ರೀಯ ಮಹಿಳಾ ಆಯೋಗ (NCW) ಮತ್ತು ರಾಷ್ಟ್ರೀಯ ಅಲ್ಪಸಂಖ್ಯಾತರ ಆಯೋಗ (NCM) ಅನ್ನು PIL ಗಳಿಗೆ ಕಕ್ಷಿದಾರರನ್ನಾಗಿ ಮಾಡಿ ಅವರ ಪ್ರತಿಕ್ರಿಯೆಗಳನ್ನು ಕೇಳಿತ್ತು.